ಗಳಸ್ಯ ಕಂಠಸ್ಯರಾಗಿದ್ದ ಅನಂತ್-ಯಡಿಯೂರಪ್ಪ

By Kannadaprabha NewsFirst Published Nov 13, 2018, 10:36 AM IST
Highlights

ದಿಲ್ಲಿಯಲ್ಲಿ ಕನ್ನಡಿಗರ ಧ್ವನಿಯಾಗಿದ್ದ ಅನಂತ್ ಕುಮಾರ್ ಬಗ್ಗೆ ಹೇಳಿಕೊಂಡಷ್ಟೂ ಮುಗಿಯದು. ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ ಪ್ರಶಾಂತ್ ನಾಥು ಅನಂತ್ ಕುಮಾರ್ ಅವರಿಗೆ ನುಡಿ ನಮನ ಸಲ್ಲಿಸಿದ್ದು ಹೀಗೆ...

ಅನಂತಕುಮಾರ್‌ ಮತ್ತು ತೇಜಸ್ವಿನಿ ಮದುವೆ ನಂತರ ಹನಿಮೂನ್‌ಗೆ ಹೊರಟಾಗ ಜೊತೆಗೆ ಯಡಿಯೂರಪ್ಪ ಮತ್ತು ಮೈತ್ರಾದೇವಿ ಕೂಡ ಹೋಗಿದ್ದರಂತೆ. ನಂತರ ವಿಜಯೇಂದ್ರ ಒಮ್ಮೆ ಅಪ್ಪನ ಮೇಲೆ ಮುನಿಸಿಕೊಂಡು ನೇಪಾಳಕ್ಕೆ ಹೋಗಿ ಕುಳಿತಿದ್ದಾಗ ಅನಂತ್‌ ಅವರೇ ತಮ್ಮ ದಿಲ್ಲಿ ಮನೆಯಲ್ಲಿ ಅಪ್ಪ ಮಗನನ್ನು ಕೂರಿಸಿ ಸಂಧಾನ ಮಾಡಿದ್ದರಂತೆ. ಇಷ್ಟು ಗಳಸ್ಯ ಕಂಠಸ್ಯ ಎಂಬಂತಿತ್ತು ಯಡಿಯೂರಪ್ಪ ಅನಂತ್‌ ಕುಮಾರ್‌ ಸಂಬಂಧ.

ಕಾವೇರಿ, ಕೃಷ್ಣೆಯ ಋುಣ

ನೆಲ ಜಲದ ಪ್ರಶ್ನೆ ಬಂದಾಗ ಅನಂತಕುಮಾರ್‌ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದರು. ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಸುಪ್ರೀಂಕೋರ್ಟ್‌ ಎದುರು ಕೇಂದ್ರ ಸರ್ಕಾರದ ಸಾಲಿಸಿಟರ್‌ ಜನರಲ… ಪಿಂಕಿ ಆನಂದ್‌ ಒಪ್ಪಿಗೆ ಸೂಚಿಸಿ ಬಂದ ವಿಷಯ ಗೊತ್ತಾಗುತ್ತಿದ್ದಂತೆ ಅಮಿತ್‌ ಶಾ ಮನೆಗೆ ಧಾವಿಸಿದ ಅನಂತ್‌ ‘ಹೀಗಾದರೆ ಕರ್ನಾಟಕದ ಜನ ಸಿಟ್ಟಾಗುತ್ತಾರೆ’ ಎಂದು ಮನವರಿಕೆ ಮಾಡಿ ರಾತ್ರಿ 10 ಗಂಟೆಗೆ ಮೋದಿ ನಿವಾಸದಲ್ಲಿ ಕಾವೇರಿ ಬಗ್ಗೆ ಸಭೆ ನಡೆಯುವಂತೆ ಮಾಡುತ್ತಾರೆ. ಮೋದಿ, ಶಾ ,ಅರುಣ್‌ ಜೇಟ್ಲಿ, ಅನಂತಕುಮಾರ್‌, ಮುಕುಲ… ರೋಹಟಗಿ ಇದ್ದ ಸಭೆಯಲ್ಲಿ ಚರ್ಚೆ ನಡೆದ ನಂತರವೇ ಮರುದಿನ ಬೆಳಿಗ್ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅಫಿಡವಿಟ್‌ ಸಲ್ಲಿಸಿ, ‘ನಿರ್ವಹಣಾ ಮಂಡಳಿ ರಚನೆ ಸಂಸತ್ತಿನ ಪರಮಾಧಿಕಾರ, ಕೋರ್ಟ್‌ನದ್ದಲ್ಲ’ ಎಂದು ಹೇಳಿತು. ಆಗಲೇ ಕರ್ನಾಟಕ ಬೀಸುವ ದೊಣ್ಣೆಯಿಂದ ಪಾರಾಗಿದ್ದು. ಇನ್ನು ಕೃಷ್ಣೆಯ ವಿಷಯದಲ್ಲಿ ತೆಲಂಗಾಣ ಸರ್ಕಾರ ಮತ್ತೊಮ್ಮೆ ನೀರಿನ ಹಂಚಿಕೆ ಆಗಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದಾಗ ಕೇಂದ್ರದ ಪರ ವಕೀಲರು ಮೊದಲು ನಮ್ಮದೇನೂ ಅಡ್ಡಿಯಿಲ್ಲ ಎಂದಿದ್ದರು. ಇದು ತಿಳಿದ ತಕ್ಷಣ ಕಾನೂನು ಇಲಾಖೆಗೆ ಧಾವಿಸಿದ ಅನಂತಕುಮಾರ್‌, ಕಾನೂನು ಸಚಿವರಾಗಿದ್ದ ಸದಾನಂದಗೌಡರನ್ನು ಮುಂದೆ ಕೂರಿಸಿಕೊಂಡು ಲಾ ಸೆಕ್ರೆಟರಿಗೆ ಹೇಳಿಕೆ ಬದಲಾಯಿಸುವಂತೆ ಹೇಳಿದರು. ಆದರೆ, ಎಷ್ಟುಹೇಳಿದರೂ ಅಧಿಕಾರಿ ಕೇಳುವ ಮನಸ್ಥಿತಿಯಲ್ಲಿರಲಿಲ್ಲ. ಆಗ ಸಚಿವರ ಎದುರೇ ಸೆಕ್ರೆಟರಿಯನ್ನು ಹತ್ತು ನಿಮಿಷ ಆ್ಯಂಟಿ ಚೇಂಬರ್‌ಗೆ ಕರೆದುಕೊಂಡು ಹೋದ ಅನಂತ್‌, ಹೊರಗೆ ಬರುವಾಗ ಲಾ ಸೆಕ್ರೆಟರಿ ‘ಪುನರ್‌ ಹಂಚಿಕೆಯಲ್ಲಿ ಕರ್ನಾಟಕ ಭಾಗಿಯಾಗುವುದು ಬೇಡ, ಕೇವಲ ಆಂಧ್ರ ಮತ್ತು ತೆಲಂಗಾಣದ ನಡುವೆ ಆಗಲಿ’ ಎಂದು ಅಫಿಡವಿಟ್‌ ಹಾಕಲು ಒಪ್ಪಿಗೆ ಕೊಟ್ಟಿದ್ದರು. ದಿಲ್ಲಿಯಲ್ಲಿದ್ದು ರಾಜ್ಯದ ನೆಲ ಜಲದ ಲಾಬಿ ನಡೆಸೋದು ಅಂದರೆ ಇದೇ ತಾನೇ.

ಶಂಕರಾಚಾರ್ಯರ ಪಾಠ

2004ರಲ್ಲಿ ಕೇಂದ್ರದಲ್ಲಿ ಮಂತ್ರಿಸ್ಥಾನ ಬಿಟ್ಟು ಬಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ಅನಂತಕುಮಾರ್‌ ನೇತೃತ್ವದಲ್ಲಿ ಬಿಜೆಪಿಗೆ ಬರೀ 79 ಸೀಟುಗಳು ಬಂದಾಗ ಮುಖ್ಯಮಂತ್ರಿ ಆಗಬೇಕು ಎಂದು ಕನಸು ಇಟ್ಟುಕೊಂಡಿದ್ದ ಅನಂತ್‌ಗೆ ಸಹಜವಾಗಿ ನಿರಾಸೆ ಆಗಿತ್ತಂತೆ. ಆಗ ಪ್ರತಿವಾರ ಕಾಡಿಗೆ ಹೋಗಲು ಆರಂಭಿಸಿದ್ದ ಅನಂತ್‌ರನ್ನು ವಿದ್ಯಾರ್ಥಿ ಪರಿಷತ್ತಿನ ಹಿರಿಯರಾಗಿದ್ದ ಪಿ.ವಿ. ಕೃಷ್ಣ ಭಟ್‌ ಅವರು ಶೃಂಗೇರಿ ಶಂಕರಾಚಾರ್ಯ ಭಾರತೀತೀರ್ಥ ಜಗದ್ಗುರುಗಳ ಬಳಿ ಕರೆದುಕೊಂಡು ಹೋದರಂತೆ. ಆಗ ಏನಾಗಿದೆ ಎಂದು ಗುರುಗಳು ಕೇಳಿದಾಗ ಖಿನ್ನನಾಗಿದ್ದಾರೆ ಎಂದು ಭಟ್ಟರು ಹೇಳಿದರಂತೆ. ಆಗ ಗುರುಗಳು ಅನಂತರ ತಂದೆ ಬಗ್ಗೆ ಕೇಳಿದರಂತೆ. ‘ತಂದೆ ರೈಲ್ವೆಯಲ್ಲಿ ಗುಮಾಸ್ತರಾಗಿದ್ದರು, ತಾತ ಮೈಸೂರು ಸಂಸ್ಥಾನದಲ್ಲಿ ಅರ್ಚಕರಾಗಿದ್ದರು’ ಎಂದು ಹೇಳಿದರಂತೆ. ಆಗ ಗುರುಗಳು ‘ಚಕ್ರವರ್ತಿಗಳ ಕುಟುಂಬದ ಪ್ರಭು ಶ್ರೀರಾಮಚಂದ್ರನಿಗೆ 14 ವರ್ಷ ವನವಾಸ ತಪ್ಪಲಿಲ್ಲ. ಇನ್ನು ಸಾಮಾನ್ಯ ಕುಟುಂಬದಿಂದ ಬಂದಿರುವ ನೀನು 6 ವರ್ಷ ಕೇಂದ್ರ ಮಂತ್ರಿ ಆಗಿ ಅಧಿಕಾರ ಅನುಭವಿಸಿ ಈಗ ಅಧಿಕಾರ ಇಲ್ಲ ಎಂದು ಯಾಕೆ ಖಿನ್ನನಾಗುತ್ತೀಯಾ’ ಎಂದು ಹೇಳಿದರಂತೆ. ಇದನ್ನು ಒಮ್ಮೆ ಮೂಡ್‌ನಲ್ಲಿದ್ದಾಗ ಪತ್ರಕರ್ತರ ಎದುರು ಹೇಳಿಕೊಂಡ ಅನಂತ್‌, ‘ಅವತ್ತು ಗುರುಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿ ಹೊರಬಿದ್ದವನು ಮುಂದೆ ಎಂದಿಗೂ ರಾಜಕೀಯವನ್ನು ಹೃದಯಕ್ಕೆ ತೆಗೆದುಕೊಳ್ಳಲಿಲ್ಲ. ಮೆದುಳಿನಿಂದ ಆಡಿ ಬಿಟ್ಟು ಬಿಡುತ್ತೇನೆ’ ಎನ್ನುತ್ತಿದ್ದರು.

ಮನೆ ನೀಡಿದ್ದ ಯಡಿಯೂರಪ್ಪ

1989ರಲ್ಲಿ ಅನಂತಕುಮಾರ್‌ ಮತ್ತು ತೇಜಸ್ವಿನಿ ಮದುವೆ ನಂತರ ಹನಿಮೂನ್‌ಗೆ ಹೊರಟಾಗ ಜೊತೆಗೆ ಯಡಿಯೂರಪ್ಪ ಮತ್ತು ಮೈತ್ರಾದೇವಿ ಕೂಡ ಹೋಗಿದ್ದರಂತೆ. ಆ ಸಂಬಂಧ ಅಷ್ಟೊಂದು ಗಟ್ಟಿಯಾಗಿದ್ದು ಒಮ್ಮೆ ವಿಜಯೇಂದ್ರ ತಂದೆ ಮೇಲೆ ಕೋಪಿಸಿಕೊಂಡು ನೇಪಾಳದ ಕಾಠ್ಮಂಡುಗೆ ಹೋಗಿ ಕುಳಿತಾಗ. ಆಗ ಸ್ವತಃ ಅನಂತ್‌ ದಿಲ್ಲಿಯಲ್ಲಿ ಕುಳಿತು ತಂದೆ ಮಗನ ಮಧ್ಯೆ ಸಂಧಾನ ಮಾಡಿಸಿದ್ದರು. ಅನಂತ್‌ರನ್ನು ಯಡಿಯೂರಪ್ಪ ಎಷ್ಟು ಹಚ್ಚಿಕೊಂಡಿದ್ದರೆಂದರೆ ಅವರನ್ನು ಕೇಳದೆ ಒಂದು ಪತ್ರಿಕಾಗೋಷ್ಠಿ ಕೂಡ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲ, ಅನಂತ್‌ ಮತ್ತು ತೇಜಸ್ವಿನಿಗಾಗಿ ಮನೆ ಕೂಡ ಕೊಟ್ಟಿದ್ದರು. ಆದರೆ, ಮುಂದೆ ಸಂತೋಷ್‌ ಹೆಗ್ಡೆ ವರದಿ ನಂತರ ಅನಂತ ಕುಮಾರ್‌ ಮತ್ತು ಯಡಿಯೂರಪ್ಪ ಸಂಬಂಧದಲ್ಲಿ ವ್ಯತ್ಯಯವಾಗಿತ್ತು. ಮುಂದೆ 2014ರಲ್ಲಿ ಯಡಿಯೂರಪ್ಪ ಬಿಜೆಪಿಗೆ ವಾಪಸ್‌ ಬಂದ ಮೇಲೆ ಇಬ್ಬರ ಸಂಬಂಧಗಳು ಕೂಡಿ ಕೆಲಸ ಮಾಡುವ ಮಟ್ಟಿಗೆ ಬಂದಿದ್ದವು. ಒಂದು ರೀತಿಯಲ್ಲಿ ಹಳೆಯ ಜಗಳವೂ ಇರಲಿಲ್ಲ ಪ್ರೀತಿ ಕೂಡ ಹೆಚ್ಚಿರಲಿಲ್ಲ.

ಅಡುಗೆ ಪುಸ್ತಕದ ಪ್ರಿಯ

ಮಾಧ್ಯಮಗಳಲ್ಲಿ ಜಾಸ್ತಿ ಮಾತನಾಡಲು ಒಲ್ಲೆ ಎನ್ನುತ್ತಿದ್ದ ಅನಂತಕುಮಾರ್‌ ಸ್ವಲ್ಪ ವಿಶ್ವಾಸ ಬಂದರೆ ಮಾತ್ರ ಹೊಟ್ಟೆತುಂಬಾ ಊಟ, ಬಾಯಿ ತುಂಬಾ ಹರಟೆ ಹೊಡೆದು ಕಳಿಸುತ್ತಿದ್ದರು. ಮಾಸ್ತಿ, ಬೇಂದ್ರೆ, ಬಸವಣ್ಣನಿಂದ ಹಿಡಿದು ಚಾಲುಕ್ಯ, ಕದಂಬರ ಇತಿಹಾಸವನ್ನು ರಸವತ್ತಾಗಿ ವರ್ಣಿಸುತ್ತಿದ್ದ ಅವರು ತುಂಬಾ ಹೆಚ್ಚು ಓದುತ್ತಿದ್ದ ಪುಸ್ತಕ ‘ರುಚಿಯಾಗಿ ಅಡುಗೆ ಮಾಡುವುದು ಹೇಗೆ?’ ಎಂಬುದು. ತೇಜಸ್ವಿನಿ ಅವರಿಗೂ ಮದುವೆಯಾದ ನಂತರ ಕೊಟ್ಟಮೊದಲ ಗಿಫ್ಟ್‌ ಲೋಬೊ ಅವರು ಬರೆದ ಈ ಅಡುಗೆ ಪುಸ್ತಕ. ಆದರೆ ಬದುಕಿನ ಕೊನೆಯ ದಿನಗಳಲ್ಲಿ ಅನಂತ್‌ ಶಿವಾಜಿ ಮಹಾರಾಜರ ಪುಸ್ತಕ ಪಕ್ಕದಲ್ಲಿ ಇಟ್ಟುಕೊಂಡು ತಿರುವಿ ಹಾಕುತ್ತಿದ್ದರು.

ಮೀಡಿಯಾದಿಂದ ದೂರ ಯಾಕೆ?

ಎಷ್ಟೇ ಎತ್ತರಕ್ಕೆ ಬೆಳೆದರೂ ಅನಂತಕುಮಾರ್‌ ಮಾಧ್ಯಮಗಳ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದರು. ಇದಕ್ಕೆ ಮುಖ್ಯ ಕಾರಣ 1998ರಲ್ಲಿ ನಡೆದ ಸ್ಪೀಕರ್‌ ಆಯ್ಕೆ ಘಟನೆ. 98ರಲ್ಲಿ ಹೊಸದಾಗಿ ಮಂತ್ರಿಯಾಗಿದ್ದ ಅನಂತರನ್ನು ಆಡ್ವಾಣಿ ಮತ್ತು ಜಸ್ವಂತ್‌ ಸಿಂಗ್‌ ಅವರು ಪ್ರಧಾನಿ ವಾಜಪೇಯಿ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಸ್ಪೀಕರ್‌ ಆಗಲು ಜಿಎಂಸಿ ಬಾಲಯೋಗಿ ಹೆಸರು ಫೈನಲ್ ಆಯಿತಂತೆ. ಹೊರಗೆ ಬಂದ ಆನಂತಕುಮಾರ್‌ ಲೋಕಾಭಿರಾಮ ಮಾತನಾಡುತ್ತ ತಮ್ಮ ಮಿತ್ರನಾಗಿದ್ದ ಪತ್ರಕರ್ತ ಗಿರೀಶ್‌ ನಿಕ್ಕಮ್ ಜೊತೆ ಏನೋ ಒಂದೆರಡು ಸಾಲುಗಳನ್ನು ಉಸುರಿದ್ದರಂತೆ. ಆ ಕೆಲ ಸಾಲುಗಳ ನಿಗೂಢ ಅರ್ಥವನ್ನು ನಿಕ್ಕಮ್‌ ಊಹಿಸಬಹುದು ಎಂದು ಅನಂತ ಅಂದುಕೊಂಡಿರಲಿಲ್ಲವಂತೆ. ಆದರೆ, ಮರುದಿನ ಬೆಳಿಗ್ಗೆ ನೋಡಿದರೆ ಇಂಡಿಯನ್‌ ಎಕ್ಸ್‌ಪ್ರೆಸ್‌ ಮುಖಪುಟದಲ್ಲಿ ಬ್ಯಾನರ್‌ ಹೆಡ್ಡಿಂಗ್‌ ಸುದ್ದಿ. ಕೂಡಲೇ ಅಟಲ್ಜಿ ಫೋನ್‌ ಮಾಡಿ ಕರೆಸಿಕೊಂಡು, ‘ಕ್ಯಾ ಸಾಹೇಬ್‌’ ಎಂದು ಪೇಪರ್‌ ಕೊಟ್ಟರಂತೆ. ತಪ್ಪಿನ ಅರಿವಾಗಿ ಅನಂತ್‌ ಅಳಲು ತೊಡಗಿದಾಗ ಅಟಲ್ಜಿ ‘ಗಲತಿಯಾ ಸಬ್ಸೇ ಹೋತಿ ಹೈ’ ಎಂದು ಬೆನ್ನು ತಟ್ಟಿದರಂತೆ. ಇದಾದ ನಂತರ ಎಷ್ಟೇ ಕೇಳಿಕೊಂಡರೂ ಆನ್‌ ರೆಕಾರ್ಡ್‌ ಆಗಲಿ, ಆಫ್‌ ದಿ ರೆಕಾರ್ಡ್‌ ಆಗಲಿ ಅನಂತ್‌ ಏನನ್ನೂ ಮಾತನಾಡುತ್ತಿರಲಿಲ್ಲ.

click me!