ದೆಹಲಿ ಸರ್ಕಾರದ ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಯನ್ನು ರದ್ದುಗೊಳಿಸಿದ ಹೈಕೋರ್ಟ್

By isthiyakh -First Published Sep 8, 2016, 11:52 AM IST
Highlights

ನವದೆಹಲಿ(ಸೆ. 08): ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಸಮ್ಮತಿ ಇಲ್ಲದೆಯೇ 21 ಸಂಸದೀಯ ಕಾರ್ಯದರ್ಶಿ ಹುದ್ದೆಗಳಿಗೆ ಆಮ್ ಆದ್ಮಿ ಶಾಸಕರನ್ನು ನೇಮಕ ಮಾಡಿದ ಕೇಜ್ರಿವಾಲ್ ಸರಕಾರದ ಕ್ರಮಕ್ಕೆ ಹೈಕೋರ್ಟ್ ಅಸಮ್ಮತಿ ಸೂಚಿಸಿದೆ. ಈ ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಯನ್ನು ಕೋರ್ಟ್ ರದ್ದುಗೊಳಿಸಿದೆ. ನೇಮಕಾತಿಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ಬಳಿಕ ಹೈಕೋರ್ಟ್ ಈ ತೀರ್ಪು ನೀಡಿದೆ.

21 ಶಾಸಕರನ್ನು ಸಂದೀಯ ಕಾರ್ಯದರ್ಶಿಯಾಗಿ ನೇಮಿಸುವುದರಿಂದ ಸಾರ್ಜನಿಕ ಹುದ್ದೆಯೊಂದರ ರಚನೆಯಾದಂತಾಗುವುದಿಲ್ಲ ಎಂಬ ದಿಲ್ಲಿ ಸರಕಾರದ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಲೆಫ್ಟಿನೆಂಟ್ ಗವರ್ನರ್ ಅವರ ಸಮ್ಮತಿ ಇಲ್ಲದೆಯೇ ನಡೆದ ಈ ನೇಮಕಾತಿ ಅಸಿಂಧು ಎಂದು ಅಭಿಪ್ರಾಯಪಟ್ಟಿದೆ. ದಿಲ್ಲಿಯು ಕೇಂದ್ರಾಡಳಿತ ಪ್ರದೇಶವಾಗಿದ್ದು, ಸಂವಿಧಾನದ ಪ್ರಕಾರ ಲೆಫ್ಟಿನೆಂಟ್ ಗವರ್ನರ್ ಅವರು ಆಡಳಿತ ಮುಖ್ಯಸ್ಥರಾಗಿರುತ್ತಾರೆ. ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಯಲ್ಲಿ ಅವರದ್ದೇ ಅಂತಿಮ ನಿರ್ಧಾರ ಎಂಬುದು ಕೋರ್ಟ್ ತೀರ್ಪು.

Latest Videos

ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಸರಕಾರದ ವಿರೋಧದ ನಡುವೆಯೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರಕಾರ ಸಂಸದೀಯ ಕಾರ್ಯದರ್ಶಿಗಳ ಸ್ಥಾನಕ್ಕೆ ಶಾಸಕರನ್ನು ನೇಮಿಸಿಕೊಂಡಿದ್ದರು. ರಾಜ್ಯದ ಆಡಳಿತದಲ್ಲಿ ಕೇಂದ್ರ ಪದೇಪದೇ ಹಸ್ತಕ್ಷೇಪ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಈ ನಿರ್ಧಾರ ಕೈಗೊಂಡಿದ್ದರೆಂಬ ಮಾತುಗಳು ಕೇಳಿಬಂದಿದ್ದವು.

click me!