
ನವದೆಹಲಿ (ಅ. 29): ಹರ್ಯಾಣ ಹಾಗೂ ಪಂಜಾಬ್‌ನಲ್ಲಿನ ಬೆಳೆ ತ್ಯಾಜ್ಯ ಸುಡುವಿಕೆ ಪರಿಣಾಮ ಈ ಚಳಿಗಾಲದ ಆರಂಭದಲ್ಲಿ ರಾಷ್ಟ್ರ ರಾಜಧಾನಿ ದಿಲ್ಲಿ, ಅತಿಯಾದ ವಾಯುಮಾಲಿನ್ಯದಿಂದ ಬಳಲುತ್ತಿದ್ದು, ವಾಯು ಗುಣಮಟ್ಟ ಭಾನುವಾರ ಮತ್ತಷ್ಟು ‘ಅತಿ ಕಳಪೆ’ಗೆ ಕುಸಿದಿದೆ. ಹಗಲಿನಲ್ಲೇ ಮಬ್ಬುಗತ್ತಲು ಆವರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ಸಲಹೆಗಳನ್ನು ನೀಡಿದೆ. ‘ಜನರು ತಮ್ಮ ಕಾರು ಬಳಸದೇ ಸಾರ್ವಜನಿಕ ಸಾರಿಗೆ ಉಪಯೋಗಿಸಬೇಕು. ವಿಷಕಾರಿ ವಾಯುವಿನಿಂದ ಪಾರಾಗಲು ಜನರು ಹೆಚ್ಚು ಹೊರಗೆ ನಡೆದಾಡಬಾರದು. ವಾಕಿಂಗ್ ಮಾಡಿದರೂ ಅದು ಕಡಿಮೆ ದೂರದ ವಾಕ್ ಆಗಿರಬೇಕು. ವೇಗವಾಗಿ ನಡೆದರೆ ದಮ್ಮು ಹತ್ತಿ ಅತಿಯಾದ ಮಲಿನಕಾರಿ ಹೊಗೆ ಉಸಿರಾಡುವ ಅಪಾಯ ಇರುವ ಕಾರಣ ಜೋರಾಗಿ ನಡೆದಾಡಬಾರದು. ಮಾಸ್ಕ್ ಧರಿಸಿ ನಡೆದಾಡಬೇಕು. ವಾಹನಗಳ ರಸ್ತೆಗೆ ಮುಖ ಮಾಡಿದ ಕಿಟಕಿ ಮುಚ್ಚಬೇಕು. ಧೂಮಪಾನ ಹಾಗೂ ಊದುಕಡ್ಡಿ ಹಚ್ಚುವಿಕೆ ತಗ್ಗಿಸಬೇಕು. ಮನೆಯಲ್ಲಿ ಪರದೆ ಹಾಕಿಕೊಂಡೇ ಇರಬೇಕು’ ಎಂಬುವೇ ಆ ಸಲಹೆಗಳು.
ಅತ್ಯಂತ ಕಳಪೆ:
ಈ ನಡುವೆ ಭಾನುವಾರ ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಭಾನುವಾರ ೩೮೧ಕ್ಕೆ ಕುಸಿದಿತ್ತು. ಇದು ‘ಅತ್ಯಂತ ಕಳಪೆ’ ದರ್ಜೆ ಎನ್ನಿಸಿಕೊಳ್ಳುತ್ತದೆ. ಇಷ್ಟೊಂದು ಕಳಪೆ ಪ್ರಮಾಣಕ್ಕೆ ವಾಯುಗುಣಮಟ್ಟ ಕುಸಿದಿದ್ದು ಈ ಹಂಗಾಮಿನಲ್ಲಿ ಇದೇ ಮೊದಲು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ವಾಯು ಗುಣಮಟ್ಟ ಸೂಚ್ಯಂಕ 51 -100 ತೃಪ್ತಿಕರ, 101- 200 ಸಮಾಧಾನಕರ, 201-300 ಕಳಪೆ, 301- 400 ಅತಿ ಕಳಪೆ ಹಾಗೂ 401- 500 ಗಂಭೀರ ಎನ್ನಿಸಿಕೊಳ್ಳುತ್ತದೆ. ಪಂಜಾಬ್ ಮತ್ತು ಹರ್ಯಾಣದಲ್ಲಿನ ಬೆಳೆ ಸುಡುವಿಕೆ ಈ ಅವಧಿಯಲ್ಲಿ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದು, ಇದರ ಜತೆಗೆ ಚಳಿಗಾಲದ ವಾತಾವರಣ, ಉದ್ದಿಮೆ-ವಾಹನಗಳ ಹೊಗೆಯೂ ವಾಯು ಗುಣಮಟ್ಟ ಕುಸಿತಕ್ಕೆ ಕಾರಣವಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.