ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸುಬ್ರಮಣಿಯನ್ ಸ್ವಾಮಿ ಮನವಿ ತಿರಸ್ಕರಿಸಿದ ದಿಲ್ಲಿ ಕೋರ್ಟ್

By Suvarna Web DeskFirst Published Dec 26, 2016, 12:39 PM IST
Highlights

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಷ್ಟೇ ಅಲ್ಲದೇ ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೇ, ಸ್ಯಾಮ್ ಪಿತ್ರೋಡಾ ಮೊದಲಾದವರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ನವದೆಹಲಿ(ಡಿ. 26): ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರರ ವಿರುದ್ಧದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿಗೆ ಹಿನ್ನಡೆಯಾಗಿದೆ. ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅಸೋಷಿಯೇಟೆಡ್ ಜರ್ನಲ್ಸ್ ಲಿ.(ಎಜೆಎಲ್)ಯಿಂದ ಕೆಲ ದಾಖಲೆಗಳನ್ನು ತರಿಸಿಕೊಡಬೇಕೆಂದು ಸ್ವಾಮಿ ಮಾಡಿಕೊಂಡ ಮನವಿ ಅರ್ಜಿಯನ್ನು ದೆಹಲಿಯ ಪಾಟಿಯಾಲ ಹೌಸ್ ಕೋರ್ಟ್ ಇಂದು ತಿರಸ್ಕರಿಸಿದೆ. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಲವ್ಲೀನ್ ಅವರು ಫೆಬ್ರವರಿ 10ಕ್ಕೆ ಮುಂದಿನ ವಿಚಾರಣೆ ನಿಗದಿ ಮಾಡಿದ್ದಾರೆ.

ಯಾವ ದಾಖಲೆ?
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲಕತ್ವ ಹೊಂದಿರುವ ಎಜೆಎಲ್ ಸಂಸ್ಥೆಗೆ ಕಾಂಗ್ರೆಸ್ ಪಕ್ಷ ಸಾಲ ನೀಡಿರುವ ದಾಖಲೆ ತನಗೆ ಬೇಕೆಂದು ಸುಬ್ರಮಣಿಯನ್ ಸ್ವಾಮಿ ಕೇಳಿಕೊಂಡಿದ್ದರು. ಅವರ ಪ್ರಕಾರ, ಈ ದಾಖಲೆಯು ಪ್ರಕರಣದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಲಿದೆ. ಸ್ವಾಮಿ ಆರೋಪಿಸಿರುವ ಪ್ರಕಾರ, ಕಾಂಗ್ರೆಸ್ ಪಕ್ಷವು ಎಜೆಎಲ್'ಗೆ 50 ಲಕ್ಷ ರೂಪಾಯಿ ಸಾಲ ನೀಡಿತ್ತು. ಆ ಸಾಲಕ್ಕೆ ಬದಲಾಗಿ ಎಜೆಎಲ್'ನ ಒಡೆತನದ ಆಸ್ತಿಗಳು ಕಾಂಗ್ರೆಸ್ ಪಾಲಾದವಂತೆ. ಹೀಗಾಗಿ, ಸಾಲ ನೀಡಲಾದ ಆ ದಾಖಲೆ ತನಗೆ ಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಕೋರ್ಟ್'ನಲ್ಲಿ ಕೇಳಿಕೊಂಡಿದ್ದರು.

ಆರೋಪಿಗಳ ವಾದ ಗೆದ್ದಿತು:
ಈ ಪ್ರಕರಣದಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಎಲ್ಲಿಯೂ ಕಾಂಗ್ರೆಸ್ ನೀಡಿದ ಸಾಲವನ್ನು ಪ್ರಸ್ತಾಪಿಸಿಲ್ಲ. ಅಲ್ಲದೇ, ಕಾಂಗ್ರೆಸ್ ಪಕ್ಷವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿಲ್ಲ ಎಂಬುದು ಆರೋಪಿಗಳ ಪರ ವಕೀಲರ ವಾದವಾಗಿತ್ತು. ನ್ಯಾಯಾಲಯವು ಈಗಾಗಲೇ ಕಾಂಗ್ರೆಸ್ ಮುಖಂಡರನ್ನು ವಿಚಾರಣೆಗೆ ಕರೆಸಿರುವುದರಿಂದ ಪಕ್ಷವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಅಗತ್ಯವಿಲ್ಲ ಎಂಬುದು ಸ್ವಾಮಿ ವಾದವಾಗಿತ್ತು. ಆದರೆ, ನ್ಯಾಯಾಲಯವು ಈ ಬಾರಿ ಆರೋಪಿಗಳ ವಾದಕ್ಕೆ ಮನ್ನಣೆ ಕೊಟ್ಟಿದೆ.

ಸ್ವಾಮಿ ಮೇಲ್ಮನವಿ?
ಪಾಟಿಯಾಲ ಹೌಸ್ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ತಾನು ಸುಪ್ರೀಂಕೋರ್ಟ್'ನಲ್ಲಿ ಮೇಲ್ಮನವಿ ಮಾಡುವುದಾಗಿ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಹೇಳಿಕೆ ನೀಡಿರುವ ಬಿಜೆಪಿ ಮುಖಂಡರು, ಸರಕಾರದಿಂದ(ಕಾಂಗ್ರೆಸ್) ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸಾಕಷ್ಟು ಅನುಕೂಲತೆ ಮಾಡಿಕೊಂಡಿತ್ತು ಎಂದು ಆಪಾದಿಸಿದ್ದಾರೆ.

ಹಣಕಾಸು, ನಗರಾಭಿವೃದ್ಧಿ, ಕಾರ್ಪೊರೇಟ್ ವ್ಯವಹಾರ ಸಚಿವಾಲಯಗಳು, ಆದಾಯ ತೆರಿಗೆ ಇಲಾಖೆಯಿಂದ ಕೆಲ ದಾಖಲೆಗಳನ್ನು ತರಿಸಿಕೊಡಬೇಕು. ಹಾಗೂ 2010-11ರ ಅವಧಿಯ ಕಾಂಗ್ರೆಸ್ ಪಕ್ಷದ ಬ್ಯಾಲೆನ್ಸ್ ಶೀಟನ್ನೂ ತರಿಸಿಕೊಡಬೇಕು ಎಂದು ಈ ಹಿಂದೆ ಸುಬ್ರಮಣಿಯನ್ ಸ್ವಾಮಿಯವರು ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು. ಆಗ, ಕೋರ್ಟ್ ಸ್ವಾಮಿಯವರ ಮನವಿ ಪುರಸ್ಕರಿಸಿ, ಜ.11 ಮತ್ತು ಮಾ.11ರಂದು ಸಂಬಂಧಪಟ್ಟ ಇಲಾಖೆಗೆ ಹಾಗೂ ಪಕ್ಷಕ್ಕೆ ಆದೇಶ ನೀಡಿತ್ತು. ಅದರಂತೆ, ಕಾಂಗ್ರೆಸ್ ಪಕ್ಷವು ಏಪ್ರಿಲ್ 8ರಂದು ತನ್ನ ಬ್ಯಾಲೆನ್ಸ್ ಶೀಟ್'ನ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಷ್ಟೇ ಅಲ್ಲದೇ ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೇ, ಸ್ಯಾಮ್ ಪಿತ್ರೋಡಾ ಮೊದಲಾದವರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

click me!