
ಇಸ್ಲಾಮಾಬಾದ್: ಬೇಹುಗಾರಿಕೆ ಹಾಗೂ ವಿಧ್ವಂಸಕ ಚಟು ವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇರೆಗೆ ಕರ್ನಾಟಕದ ವಿಜಯಪುರ ಜಿಲ್ಲೆಯ ಗಡಿಯಲ್ಲೇ ಇರುವ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಕುಲಭೂಷಣ್ ಜಾಧವ್ ಎಂಬ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯನ್ನು ನೇಣಿ ಗೇರಿಸಲು ಪಾಕಿಸ್ತಾನ ಸೇನೆ ಆದೇಶಿಸಿದೆ. ಈ ನಿರ್ಧಾರ ದಿಂದಾಗಿ ಈಗಾಗಲೇ ಹಳಸಿ ರುವ ಭಾರತ ಮತ್ತು ಪಾಕಿಸ್ತಾನ ಸಂಬಂಧಕ್ಕೆ ಬಹುದೊಡ್ಡ ಪೆಟ್ಟು ಬಿದ್ದಂತಾಗಿದೆ.
46 ವರ್ಷದ ಜಾಧವ್ ವಿರುದ್ಧದ ಎಲ್ಲ ಆರೋಪಗಳು ಸಾಬೀತಾಗಿವೆ ಎಂದು ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್‌ನಲ್ಲಿ ತೀರ್ಪು ಹೊರಬಿದ್ದ ಬೆನ್ನಲ್ಲೇ, ಅವರಿಗೆ ಮರಣದಂಡನೆ ವಿಧಿಸಲು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಸೋಮವಾರ ಸಮ್ಮತಿ ಸೂಚಿಸಿದ್ದಾರೆ ಎಂದು ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗವಾದ ಇಂಟರ್ ಸವೀರ್‍ಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‌ಪಿಆರ್) ತಿಳಿಸಿದೆ. ‘ಭಾರತವು ಈ ಪ್ರಕರಣವನ್ನು ಎಚ್ಚರಿಕೆ ಎಂದು ಪರಿಗಣಿಸಬೇಕು' ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.
ಇದರ ಬೆನ್ನಲ್ಲೇ ಭಾರತ ಸಿಡಿಮಿಡಿಗೊಂಡಿದ್ದು, ‘ಈ ತೀರ್ಪು ಒಂದು ಪ್ರಹಸನ. ಇದು ಪೂರ್ವನಿರ್ಧರಿತ ಕೊಲೆ' ಎಂದು ಕಿಡಿಕಾರಿದೆ.
ದಿಲ್ಲಿಯಲ್ಲಿರುವ ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಅವರನ್ನು ಕರೆಸಿಕೊಂಡ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್, ‘ಜಾಧವ್ ಅವರ ಸೂಕ್ತ ವಿಚಾರಣೆ ನಡೆಸದೇ, ಅವರಿಗೆ ಭಾರತ ಸರ್ಕಾರದ ಜೊತೆ ಮಾತನಾಡುವ ಅವಕಾಶವನ್ನೂ ನೀಡದೇ ಏಕಪಕ್ಷೀಯವಾಗಿ ಶಿಕ್ಷೆ ನೀಡಿದ್ದೀರಿ' ಎಂದು ಪ್ರತಿಭಟನೆ ಸಲ್ಲಿಸಿದ್ದಾರೆ. ಇದೇ ವೇಳೆ, ಬುಧವಾರ ಬಂಧಮುಕ್ತರಾಗಬೇಕಿದ್ದ 12 ಪಾಕಿಸ್ತಾನಿ ಕೈದಿಗಳ ಬಿಡುಗಡೆಯನ್ನು ಭಾರತ ಪ್ರತೀಕಾರ ಕ್ರಮವಾಗಿ ತಡೆಹಿಡಿದಿದೆ.
ಈ ನಡುವೆ, ಪಾಕ್ ವಿರುದ್ಧ ಎಂಥದ್ದೇ ಅತಿರೇಕದ ಕ್ರಮವೇ ಆಗಿರಲಿ, ಕೈಗೊಳ್ಳಲು ಭಾರತ ಸಿದ್ಧವಾಗಿರ ಬೇಕು ಎಂದು ಶಿವಸೇನೆ ಪ್ರಮುಖ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.
ತಪ್ಪೊಪ್ಪಿಗೆ ಆಧಾರದಲ್ಲಿ ಶಿಕ್ಷೆ: ‘ಭಾರತೀಯ ನೌಕಾಪಡೆಯಲ್ಲಿ ಕಮಾಂಡರ್ ಆಗಿರುವ ಜಾಧವ್, ಮ್ಯಾಜಿಸ್ಪ್ರೇಟ್ ಹಾಗೂ ನ್ಯಾಯಾಲಯದ ಎದುರು ತಪ್ಪೊಪ್ಪಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಬೇಹುಗಾರಿಕೆ /ವಿಧ್ವಂಸಕ ಕೃತ್ಯಗಳನ್ನು ರೂಪಿಸಿ, ಸಮನ್ವಯ ಸಾಧಿಸಿ, ಸಂಘಟಿಸುವ ಹೊಣೆಗಾರಿಕೆಯನ್ನು ಭಾರತದ ವಿದೇಶಿ ಬೇಹುಗಾರಿಕೆ ಸಂಸ್ಥೆ ‘ರಾ' ವಹಿ ಸಿತ್ತು ಎಂದು ಹೇಳಿದ್ದಾರೆ. ಬಲೂಚಿಸ್ತಾನ ಮತ್ತು ಕರಾಚಿ ಪ್ರಾಂತ್ಯಗಳಲ್ಲಿ ಶಾಂತಿ ಸ್ಥಾಪಿಸುವ ಕಾನೂನು ಸಂಸ್ಥೆಗಳ ಯತ್ನಕ್ಕೆ ಅಡ್ಡಿಪಡಿಸುವ ಮೂಲಕ ಪಾಕಿಸ್ತಾನದ ವಿರುದ್ಧ ಸಮರ ಸಾರುವ ಹಾಗೂ ಅಸ್ಥಿರಗೊಳಿಸುವ ಗುರಿ ಹೊಂದಿದ್ದಾಗಿ ತಿಳಿಸಿದ್ದಾರೆ' ಎಂದು ಐಎಸ್‌ಪಿಆರ್ ಹೇಳಿಕೆಯಲ್ಲಿ ತಿಳಿಸಿದೆ.
ಪಾಕ್ ಆರೋಪ ಏನು?: ಹಿಂಸಾತ್ಮಕ ಹೋರಾಟಗಳಿಂದ ನಲುಗಿರುವ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಕಳೆದ ವರ್ಷ ಮಾ.3ರಂದು ಪಾಕಿಸ್ತಾನದ ಭದ್ರತಾ ಪಡೆಗಳು ಕುಲಭೂಷಣ ಜಾಧವ್‌ರನ್ನು ಬಂಧಿಸಿದ್ದವು. ಇರಾನ್ ಮೂಲಕ ಜಾಧವ್ ಆಗಮಿಸಿದ್ದು, ಅವರೊಬ್ಬ ಭಾರತೀಯ ನೌಕಾಪಡೆಯ ಅಧಿಕಾರಿಯಾಗಿದ್ದಾರೆ. ಬೇಹುಗಾರಿಕೆ, ವಿಧ್ವಂಸಕ ಚಟುವಟಿಕೆ ನಡೆಸಲು ಪಾಕಿಸ್ತಾನಕ್ಕೆ ‘ರಾ' ನಿಯೋಜಿಸಿದೆ ಎಂದು ಪಾಕ್ ದೂಷಿಸಿತ್ತು. ಅಲ್ಲದೆ ಅವರು ‘ತಪ್ಪೊಪ್ಪಿಗೆ' ನೀಡುವ ವಿಡಿಯೋ ಹೇಳಿಕೆಯನ್ನೂ ಬಂಧನದ ಬಳಿಕ ಬಿಡುಗಡೆ ಮಾಡಿದ್ದವು.
ಜಾಧವ್ ಯಾರು?
ಕರ್ನಾಟಕ ಗಡಿಯ ಮಹಾರಾಷ್ಟ್ರದ ಸೊಲ್ಲಾಪುರದ ಮಾಜಿ ನೌಕಾಅಧಿಕಾರಿ ಕುಲಭೂಷಣ ಜಾಧವ್. ಬೇಹುಗಾರಿಕೆ, ವಿಧ್ವಂಸಕ ಕೃತ್ಯ ಆರೋಪದಲ್ಲಿ ಇವರನ್ನು ಬಲೂಚಿಸ್ತಾನ ಪ್ರಾಂತ್ಯದಲ್ಲಿ 2016ರ ಮಾ.3ಕ್ಕೆ ಬಂಧಿಸಲಾಗಿದೆ ಎಂದು ಪಾಕ್ ಹೇಳಿಕೊಂಡಿತ್ತು. ಈ ಬಗ್ಗೆ ಸಾಕ್ಷಿ ನೀಡಿರ ಲಿಲ್ಲ. ಆದರೆ, ಜಾಧವ್ ತಪ್ಪೊಪ್ಪಿಗೆ ನೀಡಿದ್ದಾರೆ ಎಂದಿರುವ ಪಾಕ್ ಸೇನೆ ಅವರಿಗೆ ಗಲ್ಲು ಶಿಕ್ಷೆ ಪ್ರಕಟಿಸಿದೆ.
ಜಾಧವ್’ಗೆ ಪಾಕ್ ಅನ್ಯಾಯ ಮಾಡಿತೇ?
ಕುಲಭೂಷಣ ಜಾಧವ್ ಈ ಹಿಂದೆ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಬಳಿಕ ಕೊಲ್ಲಿ ದೇಶದ ಖಾಸಗಿ ಹಡಗು ಕಂಪನಿಗೆ ನೌಕರರಾಗಿ ಸೇರಿಕೊಂಡಿದ್ದರು. ಈ ವೇಳೆ ಸಮುದ್ರದಲ್ಲಿ ಅವರನ್ನು ಸೆರೆಹಿಡಿದಿದ್ದ ಪಾಕಿಸ್ತಾನ, ‘ಬಲೂಚಿಸ್ತಾನದಲ್ಲಿ ಭಾರತದ ಬೇಹುಗಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಬಂಧಿಸಲಾಗಿದೆ' ಎಂಬ ಸಬೂಬು ನೀಡಿತ್ತು. ಆದರೆ, ಜಾಧವ್ ನೌಕಾಪಡೆಯಲ್ಲಿ ಕೆಲಸ ಮಾಡಿದ್ದು ನಿಜ ಎಂದು ಒಪ್ಪಿಕೊಂಡಿದ್ದ ಭಾರತ ಸರ್ಕಾರ, ಆವರ ಜತೆಗಿನ ನಂಟನ್ನು ಅಲ್ಲಗಳೆದಿತ್ತು. ಜಾಧವ್ ಅವಧಿಪೂರ್ವವಾಗಿಯೇ ನಿವೃತ್ತಿ ಹೊಂದಿದ್ದು, ಅವರ ಜತೆ ಯಾವುದೇ ಸಂಪರ್ಕ ಇಲ್ಲ ಎಂದು ಕಳೆದ ಮಾಚ್‌ರ್‍ನಲ್ಲೇ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿತ್ತು. ಆದರೆ ಇದನ್ನು ನಂಬಲು ಪಾಕಿಸ್ತಾನ ಸಿದ್ಧವಿರಲಿಲ್ಲ. ಜಾಧವ್ ಜತೆ ಸಮಾಲೋಚನೆ ನಡೆಸಲು ರಾಜತಾಂತ್ರಿಕ ಅವಕಾಶ ನೀಡಬೇಕು ಎಂದು 13 ಬಾರಿ ಭಾರತ ಕೋರಿದ್ದರೂ ಅದಕ್ಕೆ ಪಾಕಿಸ್ತಾನ ಒಪ್ಪಿಗೆ ಸೂಚಿಸಿರಲಿಲ್ಲ. ಬಲವಂತದಿಂದ ತಪ್ಪೊ ಪ್ಪಿಗೆ ಹೇಳಿಕೆ ಪಡೆದು ಗಲ್ಲು ಶಿಕ್ಷೆ ವಿಧಿಸಿದೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.