
ಪುಣೆ : ಮಗ ಮೃತಪಟ್ಟಿದ್ದಾನೆ. ಆತನಿಗೆ ಮದುವೆಯೂ ಆಗಿರಲಿಲ್ಲ. ಅವನ ತಾಯಿಯೀಗ ಏಕಾಂಗಿ. ಆದರೆ, ಆಕೆಗೆ ಮೊಮ್ಮಕ್ಕಳನ್ನು ಪಡೆಯಬೇಕೆಂಬ ಆಸೆ. ಅದನ್ನು ಈಡೇರಿಸಿಕೊಳ್ಳಲು ಅವಿರತವಾಗಿ ಶ್ರಮಪಟ್ಟಆಕೆ ಕೊನೆಗೂ ಆ ಆಸೆ ಈಡೇರಿಸಿಕೊಂಡು ಎರಡು ಮುದ್ದಾದ ಮೊಮ್ಮಕ್ಕಳನ್ನು ಪಡೆದಿದ್ದಾಳೆ!
ಹೌದು, ಇದು ವೈದ್ಯಕೀಯ ವಿಜ್ಞಾನದ ಚಮತ್ಕಾರ. ಪುಣೆಯ ವೃದ್ಧ ಶಿಕ್ಷಕಿಯೊಬ್ಬರು ಮೊದಲೇ ಸಂಗ್ರಹಿಸಿಟ್ಟಿದ್ದ ಮೃತ ಮಗನ ವೀರ್ಯದಿಂದ ಬಾಡಿಗೆ ತಾಯಿಯ ಮೂಲಕ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಪಡೆದಿದ್ದಾಳೆ. ಆಕೆಯ ಸಂತೋಷಕ್ಕೀಗ ಪಾರವೇ ಇಲ್ಲ.
ರಾಜಶ್ರೀ ಪಾಟೀಲ್ ಎಂಬ ಶಿಕ್ಷಕಿಯ ಮಗ ಪ್ರಥಮೇಶ್ ಪಾಟೀಲ್ 2010ರಲ್ಲಿ ಮಾಸ್ಟರ್ ಡಿಗ್ರಿ ಪಡೆಯಲು ಜರ್ಮನಿಗೆ ಹೋಗಿದ್ದ. ಅಲ್ಲಿ ಆತನಿಗೆ ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಜರ್ಮನಿಯಲ್ಲೇ ಚಿಕಿತ್ಸೆ ಆರಂಭಿಸಿದ. ಆದರೆ, ಕೀಮೋಥೆರಪಿ ನಂತರ ದೇಹದ ಮೇಲೆ ಅಡ್ಡ ಪರಿಣಾಮ ಆಗುವ ಸಾಧ್ಯತೆ ಇದ್ದುದರಿಂದ ವೈದ್ಯರು ವೀರ್ಯ ಸಂರಕ್ಷಿಸಿಟ್ಟುಕೊಳ್ಳಲು ಸಲಹೆ ನೀಡಿದರು. ಅದಕ್ಕೆ ಒಪ್ಪಿದ ಆತ ಜರ್ಮನಿಯ ಆಸ್ಪತ್ರೆಯಲ್ಲೇ ವೀರ್ಯ ಸಂಗ್ರಹಿಸಿಟ್ಟಿದ್ದ.
ನಂತರ ಮಗನಿಗೆ ಕ್ಯಾನ್ಸರ್ ಚಿಕಿತ್ಸೆಯನ್ನು ಮುಂಬೈನಲ್ಲೇ ಕೊಡಿಸುತ್ತೇನೆಂದು ತಾಯಿ ಆತನನ್ನು ಕರೆತಂದಳು. ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸಿ ತಕ್ಕಮಟ್ಟಿಗೆ ಗುಣಮುಖನಾದ ಪ್ರಥಮೇಶ್, ಕೊನೆಗೆ ಮತ್ತೆ ಮೆದುಳಿನಲ್ಲಿ ಗಡ್ಡೆ ಕಾಣಿಸಿಕೊಂಡು, ಚಿಕಿತ್ಸೆ ಫಲಕಾರಿಯಾಗದೆ 2016ರಲ್ಲಿ ಮೃತಪಟ್ಟ. ಅದರೊಂದಿಗೆ ಆತನ ಬಗ್ಗೆ ತಾಯಿ ಕಂಡಿದ್ದ ಕನಸುಗಳೆಲ್ಲ ನುಚ್ಚುನೂರಾದವು. ಆದರೆ, ಮೊಮ್ಮಗುವಿನಲ್ಲಿ ತಾನು ಮಗನನ್ನು ಕಾಣಬೇಕೆಂದು ನಿರ್ಧರಿಸಿದ ಆಕೆ, ಜರ್ಮನಿಯ ಆಸ್ಪತ್ರೆಯನ್ನು ಸಂಪರ್ಕಿಸಿ, ಎಲ್ಲಾ ವಿಧಿವಿಧಾನಗಳನ್ನು ಪೂರೈಸಿ, ಅಲ್ಲಿಂದ ಮಗನ ವೀರ್ಯವನ್ನು ತರಿಸಿದಳು.
ನಂತರ ಪುಣೆಯಲ್ಲಿ ಅಂಡಾಣು ದಾನಿಯನ್ನು ಹುಡುಕಿ ಅಂಡಾಣುಗಳನ್ನು ಪಡೆದಳು. ಅದನ್ನು ವೈದ್ಯರು ಐವಿಎಫ್ ಕ್ಲಿನಿಕ್‌ನಲ್ಲಿ ಕೃತಕವಾಗಿ ಸಂಯೋಜಿಸಿ, ಬಾಡಿಗೆ ತಾಯಿಯೊಬ್ಬಳನ್ನು ಹುಡುಕಿ ಆಕೆಯ ಗರ್ಭದಲ್ಲಿರಿಸಿದರು. ಆ ಮಹಿಳೆ ಇತ್ತೀಚೆಗೆ ಆರೋಗ್ಯವಂತ ಅವಳಿ ಮಕ್ಕಳನ್ನು ಹಡೆದಿದ್ದಾಳೆ. ಅವುಗಳನ್ನು ಎತ್ತಿಕೊಂಡು ರಾಜಶ್ರೀ ಪಾಟೀಲ್ ತನಗೆ ಸ್ವರ್ಗವೇ ಸಿಕ್ಕಂತೆ ಸಂಭ್ರಮಿಸುತ್ತಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.