
ವರದಿ: ಜೋಗಿ, ಕನ್ನಡ ಪ್ರಭ
ಬೆಂಗಳೂರು(ಮಾ.06): ‘ನಾನು ಯಾವಾಗ ಚಾಮುಂಡೇಶ್ವರಿ ಸ್ಟುಡಿಯೋ ಹತ್ತಿರ ಕ್ಲಾಪ್ ಬೋರ್ಡ್ ಹಿಡ್ಕೊಂಡು ನಿಂತುಕೊಂಡಿದ್ದೆ ಅಂತ ಸುದೀಪ್ ಹೇಳಿಬಿಡಲಿ. ಆಗ ನಾನು ಒಪ್ಪಿಕೊಳ್ಳುತ್ತೇನೆ. ನಾನು ಯಾವತ್ತೂ ಕ್ಲಾಪ್ ಬಾಯ್ ಆಗಿರಲೇ ಇಲ್ಲ. ಲೈಟ್ ಬಾಯ್ ಆಗಿದ್ದೆ. ನಂತರ ಬಿ.ಸಿ.ಗೌರೀಶಂಕರ್ ಹತ್ತಿರ ಕ್ಯಾಮರಾ ಸಹಾಯಕನಾಗಿ ಕೆಲಸ ಮಾಡಿದೆ. ಅದನ್ನು ಬಿಟ್ಟರೆ ನಾನು ಮತ್ಯಾವ ಕೆಲಸವನ್ನೂ ಮಾಡಿಲ್ಲ. ಮೆಜೆಸ್ಟಿಕ್ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ನೇರವಾಗಿ ನನ್ನ ಬಳಿ ಬಂದು ನಟಿಸುವಂತೆ ಕೇಳಿಕೊಂಡರು. ಆ ಪಾತ್ರ ಯಾರು ಕೊಟ್ಟ ಭಿಕ್ಷೆಯೂ ಅಲ್ಲ. ಸುದೀಪ್ ಆಡಿರುವ ಈ ಮಾತುಗಳ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು. ಅಥವಾ ಅವರು ತಮ್ಮ ಮಾತನ್ನು ವಾಪಸ್ ತೆಗೆದುಕೊಂಡು ಕ್ಷಮೆ ಕೇಳಬೇಕು.'
ಹಾಗಂತ ದರ್ಶನ್ ತೂಗುದೀಪ ಹೇಳಿದ್ದಾರೆ. ‘ಕನ್ನಡಪ್ರಭ'ದ ಜತೆ ಮಾತನಾಡಿದ ಅವರು, ತಾನೇಕೆ ಸುದೀಪ್ ಅವರ ಸ್ನೇಹ ಕಡಿದುಕೊಂಡೆ ಅನ್ನುವುದನ್ನು ಸ್ಪಷ್ಟಮಾತುಗಳಲ್ಲಿ ವಿವರಿಸುವುದು ಹೀಗೆ:
ನಾನು ನಿರ್ಮಾಪಕರ ದುಡ್ಡಿನಿಂದ ಬಂದವನು. ಕಷ್ಟಪಟ್ಟು ಬೆಳೆದವನು. ಅದರ ಕ್ರೆಡಿಟ್ಟನ್ನು ಬೇರೆ ಯಾರಿಗೂ ನಾನು ಕೊಡುವುದಕ್ಕೆ ಇಚ್ಛಿಸುವುದಿಲ್ಲ. ಯಾರಾದರೂ ನನಗೆ ಅವಕಾಶ ಕೊಡಿಸಿದೆ, ಸಹಾಯ ಮಾಡಿದೆ ಅಂತ ಹೇಳುವುದು ಬೇಕಾಗಿಲ್ಲ. ಹಾಗೇನಾದರೂ ಯಾರಾದರೂ ಸಹಾಯ ಮಾಡಿದ್ದರೆ ನಾನೇ ಹೇಳಿಕೊಳ್ಳುತ್ತೇನೆ. ನಿರ್ದೇಶಕ ಪಿ.ಎನ್. ಸತ್ಯ ನಟನೆ ಕಲಿಸಿದೆ ಎಂದು ಹೇಳಲಿ, ತಲೆಬಾಗಿ ಒಪ್ಪಿಕೊಳ್ಳುತ್ತೇನೆ. ನಿರ್ಮಾಪಕ ರಾಮಮೂರ್ತಿ ಅವಕಾಶ ಕೊಟ್ಟೆಅಂತ ಹೇಳಲಿ, ಕೇಳಿಸಿಕೊಳ್ಳುತ್ತೇನೆ. ಅದನ್ನು ಬಿಟ್ಟು ಬೇರೆ ಯಾರಿಗೂ ಅಂಥ ಮಾತಾಡುವ ಹಕ್ಕಿಲ್ಲ ಎಂದು ದರ್ಶನ್, ಸುದೀಪ್ ಅವರ ಮಾತುಗಳನ್ನು ಖಂಡಿಸಿದ್ದಾರೆ.
ನಮ್ಮಿಬ್ಬರ ಮಧ್ಯೆ ಸುಮಾರು ಎರಡೂವರೆ ವರ್ಷದಿಂದ ಮಾತುಕತೆ ಇಲ್ಲ. ಯಾರೋ ದೊಡ್ಡವರಾಗಲು ಮತ್ತೊಬ್ಬರನ್ನು ಸಣ್ಣವರನ್ನಾಗಿ ಮಾಡುವುದು ಸರಿಯಲ್ಲ. ಈ ವಿಚಾರ ನನ್ನನ್ನು ನೋಯಿಸುತ್ತಿತ್ತು. ನನ್ನ ಅಭಿಮಾನಿಗಳಿಗೂ ಬೇಸರ ತಂದಿತ್ತು. ಇದನ್ನು ಹಾಗೆಯೇ ಬಿಟ್ಟರೆ ಮುಂದುವರಿಯುತ್ತಲೇ ಇರುತ್ತದೆ ಎಂದು ಹೊರಗೆ ಬಂದು ಎಲ್ಲವನ್ನೂ ಹೇಳಿದ್ದೇನೆ ಎಂದು ದರ್ಶನ್ ತಮ್ಮ ಅಂತರಂಗ ಬಿಚ್ಚಿಟ್ಟಿದ್ದಾರೆ.
‘ನನಗೆ ನೋವಾಗಿದೆ. ಬೇಸರವಾಗಿದೆ. ಸ್ನೇಹವನ್ನು ಗೌರವಿಸುವವನು ನಾನು. ಎಲ್ಲರೂ ಅದನ್ನು ಉಳಿಸಿಕೊಳ್ಳಲು ನೋಡಬೇಕು. ನಾನು ಕಳೆದ ವಾರವೇ ಇದನ್ನೆಲ್ಲ ಹೇಳಬೇಕು ಅಂದುಕೊಂಡಿದ್ದೆ. ಆದರೆ ಹೆಬ್ಬುಲಿ ಚಿತ್ರ ಬಿಡುಗಡೆ ಆಗುವುದರಲ್ಲಿತ್ತು. ಆ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಗೊಂದಲ ಬೇಡ ಎಂದು ತಡೆಹಿಡಿದುಕೊಂಡಿದ್ದೆ' ಎಂದು ದರ್ಶನ್ ಹೇಳಿದರು.
ನಮ್ಮಿಬ್ಬರ ನಡುವೆ ಸಣ್ಣಪುಟ್ಟಭಿನ್ನಾಭಿಪ್ರಾಯಗಳಿದ್ದವು. ಸುದೀಪ್ ಬಿಗ್‌ಬಾಸ್ ವೇದಿಕೆಗೆ ಬರುವಂತೆ ಕರೆಯುತ್ತಿದ್ದರು. ನಾನು ಕರೆದರೆ ದರ್ಶನ್ ಗೆಳೆಯನಾಗಿ ಬರುತ್ತಾನೆ ಎಂದು ಟ್ವೀಟ್ ಮಾಡುತ್ತಿದ್ದರು. ಅಭಿಮಾನಿಗಳು ಯಾಕೆ ನಾನು ಹೋಗಿಲ್ಲ ಎಂದು ಪ್ರಶ್ನಿಸುತ್ತಿದ್ದರು. ಬಿಗ್‌ಬಾಸ್ ಒಂದು ಗೇಮ್ ಶೋ. ಅದೊಂದು ವ್ಯಾಪಾರವೇ ಹೊರತು ಚಾರಿಟಿ ಶೋ ಅಲ್ಲ. ಚಾರಿಟಿ ಆಗಿದ್ದರೆ ಸುದೀಪ್ ಜೊತೆಗೆ ನಾನೂ ಹೋಗಿ ನಿಂತುಬಿಡುತ್ತಿದ್ದೆ. ಸುಮ್ಮನೆ ಹೋಗಿ ಭಾಗವಹಿಸಿ ಬರುವುದು ಸರಿ ಎಂದು ನನಗೆ ಅನ್ನಿಸುವುದಿಲ್ಲ' ಎಂದು ದರ್ಶನ್ ತಮ್ಮ ಅನಿಸಿಕೆ ತೆರೆದಿಟ್ಟರು.
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಿಂದ ದೂರ ಸರಿದದ್ದನ್ನು ಕೂಡ ದರ್ಶನ್ ಹಂಚಿಕೊಂಡರು. ‘ಸಿಸಿಎಲ್‌ನಲ್ಲಿ ಆಡುವುದಕ್ಕೆ ನನಗೇನೂ ಆಕ್ಷೇಪ ಇರಲಿಲ್ಲ. ಸುದೀಪ್ ಕರೆದ ಕಾರಣವೇ ನಾನು ಅಲ್ಲಿಗೆ ಹೋಗಿದ್ದೆ. ಆದರೆ ಅಲ್ಲಿಗೆ ನಮಗೆ ಬೆಲೆ ಇಲ್ಲ ಎಂಬುದು ಗೊತ್ತಾಯಿತು. ಚಿತ್ರರಂಗದಲ್ಲಿ ಕಷ್ಟಗಳನ್ನು ಕಂಡು ಬೆಳೆದವನು ನಾನು. ಸ್ವಂತ ಶಕ್ತಿಯಿಂದ ನಾನು ಏರಿ ಬಂದದ್ದನ್ನು ಯಾರೂ ಅಲ್ಲಗಳೆಯುವಂತಿಲ್ಲ. ನನಗೆ ಯಾರಾದರೂ ಸಹಾಯ ಮಾಡಿದ್ದರೆ ಅದು ನಿರ್ಮಾಪಕರು' ಎಂದು ದರ್ಶನ್ ನಿರ್ಮಾಪಕರಿಗೆ ಕೃತಜ್ಞತೆ ಸಲ್ಲಿಸಿದರು.
ದರ್ಶನ್'ರನ್ನು ನೋಯಿಸಿದ ಸುದೀಪ್ ಮಾತು
ನಾನು ನೋಡಿದಾಗ ದರ್ಶನ್ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕ್ಲಾಪ್ ಬೋರ್ಡು ಹಿಡಿದುಕೊಂಡು ನಿಂತಿದ್ದ. ಅವನು ಯಾರು ಅಂತ ಕೇಳಿದೆ. ತೂಗುದೀಪ ಶ್ರೀನಿವಾಸ್ ಮಗ ಅಂತ ಹೇಳಿದ್ರು. ಅಂಥ ಕಲಾವಿದರ ಮಗ ಇಲ್ಲಿ ಯಾಕೆ ನಿಂತ್ಕೊಂಡಿದ್ದಾನೆ ಅಂತ ಆಶ್ಚರ್ಯ ಆಯ್ತು. ಆದರೆ ಅದೇ ನಮ್ಮ ಉದ್ಯಮದ ವ್ಯಂಗ್ಯ. ಇಲ್ಲಿ ಇರೋತನಕ ಮಾತ್ರ ಬೆಲೆ. ನೀವು ಹೋದ ಮೇಲೆ ನಿಮ್ಮ ಬಗ್ಗೆ ಯೋಚನೆಯನ್ನೂ ಮಾಡಲ್ಲ. ಮೆಜೆಸ್ಟಿಕ್ ಅನ್ನೋ ಸಿನಿಮಾ ನನಗೆ ಮೊದಲು ಬಂದಿತ್ತು. ರಾಮಮೂರ್ತಿ ಮತ್ತು ಸತ್ಯ ನನ್ನ ಹತ್ತಿರ ಬಂದಿದ್ದರು. ಆಗ ನಾನು ನನ್ನ ಬದಲು ಅವನ ಹತ್ತಿರ ಹೋಗಿ. ಈ ಥರದ ಚಿತ್ರ ಮಾಡೋದಕ್ಕೆ ನನಗೆ ಆಗೋಲ್ಲ. ತಕ್ಷಣ ಮಾಡಕ್ಕಾಗಲ್ಲ ಅಂತ ಹೇಳಿದೆ. ಅವರು ದರ್ಶನ್ ಹತ್ರ ಹೋದ್ರು. ದರ್ಶನ್ ಕೂಡ ಒಪ್ಕೊಂಡ್ರು. ಅಲ್ಲಿಂದ ಅವನ ಪ್ರಯಾಣ ಚೆನ್ನಾಗಿತ್ತು. ದೊಡ್ಡ ಸ್ಟಾರ್ ಆಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.