
ಬೆಂಗಳೂರು(ಆ.31): ಅತ್ತ ರಿಯಲ್ ಸ್ಟಾರ್ ಉಪೇಂದ್ರ ತಮ್ಮದೇ ಸ್ವಂತ ಪಕ್ಷದ ರಾಜಕೀಯ ಅರ್ರಂಗೇಟ್ರಂಗೆ ಮುಂದಾಗುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷ ಸಹ ಗ್ಲಾಮರ್ ಲೋಕದ ಪ್ರಖ್ಯಾತರು ಹಾಗೂ ಭಾರಿ ಜನಪ್ರಿಯತೆ ಹೊಂದಿರುವ ತಾರೆಯರನ್ನು ಪಕ್ಷಕ್ಕೆ ಸೆಳೆಯಲು ಸನ್ನದ್ಧವಾಗಿದೆ. ಈ ಸಾಲಿನಲ್ಲಿ ಮೊದಲ ಹೆಸರು - ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್!!!
ಹೌದು, ನಟ ದರ್ಶನ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಗಂಭೀರ ಪ್ರಯತ್ನಗಳು ಆರಂ‘ವಾಗಿವೆ. ಈ ಪ್ರಯತ್ನದಲ್ಲಿ ಮುಂಚೂಣಿಯಲ್ಲಿರುವುದು ಖುದ್ದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹಾಗೂ ರೆಬೆಲ್‌ಸ್ಟಾರ್ ಮತ್ತು ಮಾಜಿ ಸಚಿವ ಅಂಬರೀಶ್. ಕನ್ನಡಪ್ರಭಕ್ಕೆ ಲಭ್ಯವಾಗಿರುವ ಖಚಿತ ಮಾಹಿತಿಯ ಪ್ರಕಾರ ದರ್ಶನ್ ಅವರನ್ನು ಪಕ್ಷಕ್ಕೆ ತರುವ ಕುರಿತು ಈಗಾಗಲೇ ಹೈಕಮಾಂಡ್ ಮಟ್ಟದಲ್ಲೂ ಒಂದು ಸುತ್ತಿನ ಮಾತುಕತೆ ಮುಗಿದಿದೆ.
ಎಲ್ಲವೂ ಕಾಂಗ್ರೆಸ್ ನಾಯಕರ ಲೆಕ್ಕಾಚಾರದಂತೆ ನಡೆದರೆ, ದರ್ಶನ್ ಶೀಘ್ರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಬಹುದು. ಹಾಗಂತ ಅವರು 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬದಲಾಗಿ, ಅವರನ್ನು ಲೋಕಸಭೆಗೆ ಕಣಕ್ಕಿಳಿಸುವ ಚಿಂತನೆಯಿದೆ.
ಅದು- ರಾಜ್ಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹಾಗೂ ಹಾಲಿ ಸಂಸದ ಪ್ರತಾಪ ಸಿಂಹ ಅವರ ಎದುರು. ದರ್ಶನ್ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ.
ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಪ್ರಮುಖ ನಟರು ರಾಜಕೀಯದತ್ತ ಆಕರ್ಷಿತರಾಗಿರುವ ಈ ಹಂತದಲ್ಲಿ ಕರ್ನಾಟಕದಲ್ಲೂ ಸಹ ಇಂತಹುದೇ ಬೆಳವಣಿಗೆ ನಡೆಯುವ ಎಲ್ಲಾ ಸಾಧ್ಯತೆಯನ್ನು ಕಾಂಗ್ರೆಸ್ ಗುರುತಿಸಿತ್ತು. ವಿರೋಧಿ ಪಕ್ಷಗಳು ಈ ದಿಸೆಯಲ್ಲಿ ಮುಂದಡಿಯಿಡುವ ಸಂಭವನೀಯತೆಯನ್ನು ಮನಗಂಡಿರುವ ಕಾಂಗ್ರೆಸ್ ಎಲ್ಲರಿಗಿಂತ ಮೊದಲೇ ಈ ಹಾದಿಯಲ್ಲಿ ದಾಪುಗಾಲಿಡಲು ಮುಂದಾಗಿದೆ. ಆದರೆ, ಗ್ಲಾಮರ್ ಲೋಕದ ವರ್ಚಸ್ಸು ಹಾಗೂ ಜನಪ್ರಿಯತೆ ಕಳೆದುಕೊಂಡು ನಟನಾ ವೃತ್ತಿಯಲ್ಲಿ ನಿವೃತ್ತಿಯ ಅಂಚಿನಲ್ಲಿರುವ ತಾರೆಯರನ್ನು ಕರೆತರುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ.
ಏಕೆಂದರೆ, ಇಂತಹ ನಟ-ನಟಿಯರಿಂದ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗುವುದಿಲ್ಲ ಎಂಬುದು ಅನು‘ವದಿಂದ ಕಾಂಗ್ರೆಸ್ ನಾಯಕರಿಗೆ ಗೊತ್ತು. ಹೀಗಾಗಿ ಹಾಲಿ ಚಾಲ್ತಿಯಲ್ಲಿರುವ ಹಾಗೂ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಹೊಂದಿರುವ ಸ್ಟಾರ್ ನಟ ಅಥವಾ ನಟಿಗೆ ಬಲೆ ಬೀಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು.
ಹೀಗೆ ಕಾಂಗ್ರೆಸ್ ನಾಯಕರು ಚಂದನವನದ ಕೊಳದಲ್ಲಿ ಬೀಸಿರುವ ಬಲೆಗೆ ಸಿಲುಕುವ ಲಕ್ಷಣ ತೋರಿರುವ ದೊಡ್ಡ ‘ಸ್ಟಾರ್'ಫಿಶ್’ ಚಾಲೆಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಅವರನ್ನು ಪಕ್ಷಕ್ಕೆ ತರುವ ಕುರಿತು ಈಗಾಗಲೇ ಪ್ರಯತ್ನ ಆರಂಭವಾಗಿದೆ. ಇದರ ಪರಿಣಾಮವಾಗಿಯೇ ಆರಂಭದಿಂದಲೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ದರ್ಶನ್ ಅವರ ತಾಯಿ ಮೀನಾ ದರ್ಶನ್ ಅವರನ್ನು ಕೆಪಿಸಿಸಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎನ್ನುತ್ತವೆ ಮೂಲಗಳು.
ಮೀನಾ ದರ್ಶನ್ ಅವರು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತೆ. ಈ ಹಿಂದೆ ಅವರು ಮೈಸೂರು ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷರೂ ಆಗಿದ್ದರು. ರಾಜಕೀಯವಾಗಿ ಸಾಕಷ್ಟು ಸಕ್ರಿಯವಾಗಿರುವ ಮೀನಾ ಅವರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಸಂಪರ್ಕವೂ ಇದೆ. ಈ ಸಂಪರ್ಕವನ್ನು ಬಳಸಿಕೊಳ್ಳಲು ಯತ್ನಿಸಿದ್ದ ಕಾಂಗ್ರೆಸ್ ನಾಯಕರು ದರ್ಶನ್ ಅವರನ್ನು ಪಕ್ಷಕ್ಕೆ ಕರೆತರಲು ಈ ಹಿಂದೆಯೂ ಪ್ರಯತ್ನಿಸಿದ್ದರು. ಆದರೆ, ಆಗ ದರ್ಶನ್ ಅವರು ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ಅವರ ರಾಜಕೀಯ ಸಾಂಗತ್ಯ ಚುನಾವಣೆ ವೇಳೆಗೆ ತಮಗೆ ಆಪ್ತರಾದವರಿಗೆ ಪ್ರಚಾರ ಮಾಡುವುದಕ್ಕೆ ಸೀಮಿತವಾಗಿತ್ತು. ಈ ಹಿಂದೆ ಅವರು ತಮ್ಮ ಅತ್ಯಾಪ್ತರೆನಿಸಿದ ಹಿರಿಯ ನಟ ಹಾಗೂ ಕಾಂಗ್ರೆಸ್ ನಾಯಕ ಅಂಬರೀಶ್ ಪರವಾಗಿ ಪ್ರಚಾರ ನಡೆಸಿದ್ದರು. ಅಲ್ಲದೆ, ಲೋಕಸಭೆ ಚುನಾವಣೆ ವೇಳೆ ಬಿಜೆಪಿಯ ಪಿ.ಸಿ.ಮೋಹನ್ ಪರವಾಗಿಯೂ ಪ್ರಚಾರ ನಡೆಸಿದ್ದರು. ಒಟ್ಟಾರೆ ಅವರು ಯಾವ ಪಕ್ಷದಲ್ಲೂ ಗುರುತಿಸಿಕೊಂಡಿರಲಿಲ್ಲ.
ಪರಂ, ಅಂಬಿ ಅಖಾಡಕ್ಕೆ:
ಮುಂಬರುವ ವಿಧಾನಸಭಾ ಹಾಗೂ ಅನಂತರ ಲೋಕಸಭಾ ಚುನಾವಣೆಗಳು ಕಾಂಗ್ರೆಸ್ ಪಾಲಿಗೆ ಅಗ್ನಿ ಪರೀಕ್ಷೆಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಜನಪ್ರಿಯತೆ ಹೊಂದಿರುವ ಗಣ್ಯರನ್ನು ಪಕ್ಷಕ್ಕೆ ಸೆಳೆಯಲು ಆಲೋಚಿಸಿದಾಗ ಮೊದಲು ಹೊಳೆದದ್ದು ದರ್ಶನ್ ಹೆಸರು. ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ನಟ ಅಂಬರೀಶ್ ಅವರು ಈಗಾಗಲೇ ದರ್ಶನ್ ಅವರ ಮನವೊಲಿಸುವ ಕಾರ್ಯಕ್ಕೆ ಇಳಿದಿದ್ದಾರೆ. ಇದುವರೆಗೂ ತಮ್ಮ ಸಂಪೂರ್ಣ ಒಪ್ಪಿಗೆಯನ್ನು ದರ್ಶನ್ ನೀಡದಿದ್ದರೂ, ಪಕ್ಷ ಸೇರುವ ಹಾಗೂ ಚುನಾವಣೆಗೆ ನಿಲ್ಲುವ ಕುರಿತು ನಿರಾಕರಣೆ ಮಾಡಿಲ್ಲ ಎಂದು ಕಾಂಗ್ರೆಸ್ ನ ಉನ್ನತ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕರ ಲೆಕ್ಕಾಚಾರದ ಪ್ರಕಾರ ವಿಧಾನಸಭಾ ಚುನಾವಣೆಗೂ ಮುನ್ನವೇ ದರ್ಶನ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅವರನ್ನು ಸಾದ್ಯಂತವಾಗಿ ಪ್ರಚಾರಕ್ಕೆ ಬಳಸಿಕೊಳ್ಳುವುದು ಹಾಗೂ ಲೋಕಸ‘ೆ ಚುನಾವಣೆ ವೇಳೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವುದು. ಕಾಂಗ್ರೆಸ್ ನಡೆಸಿರುವ ಸಮೀಕ್ಷೆ ಪ್ರಕಾರ ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದರ್ಶನ್ ಅಭಿಮಾನಿಗಳ ಸಂಖ್ಯೆ ಅಪಾರ ಪ್ರಮಾಣದಲ್ಲಿದ್ದು, ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆ ಅತಿ ಹೆಚ್ಚು ಎನ್ನಲಾಗಿದೆ. ಹೀಗಾಗಿ ಅವರನ್ನು ಈ ಕ್ಷೇತ್ರದಿಂದಲೇ ಲೋಕಸಭೆಗೆ ಕಣಕ್ಕಿಳಿಸಲು ಕಾಂಗ್ರೆಸ್ ಮನಸ್ಸು ಮಾಡಿದೆ. ಆದರೆ, ದರ್ಶನ್ ಯಾವ ನಿರ್ಧಾರ ಕೈಗೊಳ್ಳುವರು ಎಂಬುದನ್ನು ಕಾದು ನೋಡಬೇಕು. ಅಂದಹಾಗೆ, ಕಾಯುವ ಕಾಲ ಬಹಳ ದೂರವೇನಿಲ್ಲ ಎಂಬುದು ಕಾಂಗ್ರೆಸ್ ಮೂಲಗಳ ಅಂಬೋಣ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.