
ಬೆಂಗಳೂರು (ಮಾ.31): ಸರಣಿ ಕೊಲೆಗಳ ಮೂಲಕ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದ ದಂಡ್ಯಪಾಳ್ಯ ತಂಡದ ಸದಸ್ಯ ತಿಮ್ಮ ಅಪರಾಧ ಕೃತ್ಯ ನಡೆದಾಗ ಹಾಗೂ ಪೊಲೀಸ್ ಬಂಧನದ ವೇಳೆ ಅಪ್ರಾಪ್ತ (ಬಾಲಾಪರಾಧಿ)ನಾಗಿದ್ದ ಎಂಬ ನಿರ್ಧಾರಕ್ಕೆ ಬಂದಿರುವ ಹೈಕೋರ್ಟ್, ಕೂಡಲೇ ಆತನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಶುಕ್ರವಾರ ತೀರ್ಪು ನೀಡಿದೆ.
ತನ್ಮೂಲಕ ಕಳೆದ 18 ವರ್ಷಕ್ಕೂ ಅಧಿಕ ಕಾಲ ಜೈಲಿನಲ್ಲಿರುವ ತಿಮ್ಮನಿಗೆ ಇದೀಗ ಬಿಡುಗಡೆ ಭಾಗ್ಯ ಒದಗಿ ಬಂದಿದೆ. ತಿಮ್ಮ ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇದ್ದಾನೆ. ಹೈಕೋರ್ಟ್ ಆದೇಶದ ಪ್ರತಿ ಜೈಲು ಪ್ರಾಧಿಕಾರಕ್ಕೆ ತಲುಪಿದ ನಂತರ ತಿಮ್ಮನ ಬಿಡುಗಡೆ ಪ್ರಕ್ರಿಯೆ ಆರಂಭವಾಗಲಿದೆ. ಪೊಲೀಸರ ಬಂಧನದ ವೇಳೆ ಸುಮಾರು 15 ವರ್ಷವನಾಗಿದ್ದ ತಿಮ್ಮನಿಗೆ ಇದೀಗ 33 ವರ್ಷ.
ತಿಮ್ಮನನ್ನು 1999 ರ ಅಕ್ಟೋಬರ್ 9 ರಂದು ಪೊಲೀಸರು ಬಂಧಿಸಿದ್ದರು. ಆತನ ಶಾಲಾ ದಾಖಲಾತಿಯ ಪ್ರಕಾರ ತಿಮ್ಮ 1983 ರ ಆಗಸ್ಟ್ 16 ರಂದು ಹುಟ್ಟಿದ್ದಾನೆ. ಹೀಗಾಗಿ, ಪೊಲೀಸ್ ಬಂಧನದ ವೇಳೆ ಆತನಿಗೆ ಸುಮಾರು 15 ವರ್ಷ ಆಗಿತ್ತು. ಹೀಗಾಗಿ ಬಂಧನದ ವೇಳೆ ಅಪ್ರಾಪ್ತನಾಗಿದ್ದ ತಿಮ್ಮ ಬಾಲಾಪರಾಧಿಯಾಗಲಿದ್ದಾನೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ದಂಡುಪಾಳ್ಯ ಪ್ರಕರಣದಲ್ಲಿ ಕೋತಿ ತಿಮ್ಮ ಎಂಬ ಮತ್ತೊಬ್ಬ ಅಪರಾಧಿ ಇದ್ದಾನೆ.
ಅಲ್ಲದೆ, ಬಾಲಾಪರಾಧಿ ಕಾಯ್ದೆ ಅನ್ವಯ ಬಾಲಾಪರಾಧಿಗೆ ಕೇವಲ ಮೂರು ವರ್ಷವಷ್ಟೇ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ, ತಿಮ್ಮ ಈಗಾಗಲೇ 18 ವರ್ಷಕ್ಕಿಂತ ಹೆಚ್ಚು ಸಮಯದಿಂದ ಜೈಲು ವಾಸ ಅನುಭವಿಸಿದ್ದಾನೆ. ಆದ್ದರಿಂದ ಆತನನನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜೈಲು ಪ್ರಾಧಿಕಾರಗಳಿಗೆ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರಿನ ರಂಗನಾಥ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ತಿಮ್ಮ, ಪೊಲೀಸರು ಬಂಧಿಸಿದಾಗ ನಾನು ಅಪ್ರಾಪ್ತನಾಗಿದ್ದೆ. ನಾನು ಈಗಾಗಲೇ 18 ವರ್ಷ ಜೈಲು ಶಿಕ್ಷೆ ವಿಧಿಸಿರುವುದರಿಂದ ನನ್ನನ್ನು ಬಿಡುಗಡೆ ಮಾಡಲು ಜೈಲು ಪ್ರಾಧಿಕಾರಕ್ಕೆ ಆದೇಶಿಸುವಂತೆ ಕೋರಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ಮಾರ್ಚ್ ೧ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಶುಕ್ರವಾರ ನ್ಯಾಯಪೀಠವು ತಿಮ್ಮನ ಶಾಲಾ ಪ್ರವೇಶದ ದಿನಾಂಕದ ಮಾಹಿತಿ ಒಳಗೊಂಡ ರಿಜಿಸ್ಟ್ರಾರ್ ನೈಜವಾಗಿದ್ದು, ತಿರಚಲ್ಪಟ್ಟಿಲ್ಲ. ಇನ್ನು ಅಧೀನ ನ್ಯಾಯಾಲಯವು ಪೊಲೀಸರು ಬಂಧಿಸಿದ ವೇಳೆ ತಿಮ್ಮನಿಗೆ ೧೫ ವರ್ಷ ಆಗಿತ್ತು ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ದಾಖಲೆಗಳು ತೃಪ್ತಿಕರವಾಗಿದ್ದು, ಅವುಗಳನ್ನು ಪರಿಗಣಿಸಿ ತಿಮ್ಮ ಬಾಲಪರಾಧಿ ಎಂದು ತೀರ್ಮಾನಿಸಲಾಗಿದೆ ಎಂದು ತೀರ್ಪು ನೀಡಿತು.
ಜೀವಾವಧಿ ಶಿಕ್ಷೆ:
1998 ರ ಏಪ್ರಿಲ್ 23 ರಂದು ಮಧ್ಯರಾತ್ರಿ ಬೆಂಗಳೂರಿನ ಹಲಸೂರಿನ ರಂಗನಾಥ್ ಎಂಬುವರ ಕೊಲೆ ಮತ್ತು ಮನೆಯ ಡಕಾಯಿತಿ ಪ್ರಕರಣ ನಡೆದಿತ್ತು. ಈ ಪ್ರಕರಣದಲ್ಲಿ ದಂಡುಪಾಳ್ಯದ ಹಂತಕರಾದ ಕೃಷ್ಣ, ಮುನಿಕೃಷ್ಣ, ಹನುಮ, ಚಿನ್ನಪ್ಪ ಮತ್ತು ತಿಮ್ಮನನ್ನು ದೋಷಿ ಎಂದು ತೀರ್ಮಾನಿಸಿದ್ದ ನಗರದ 4 ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಗೆ 2003 ರ ಮಾರ್ಚ್ 23 ರಂದು ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೈಕೋರ್ಟ್ ವಿಭಾಗೀಯ ಪೀಠವು ಸಹ 2007 ರ ಡಿಸೆಂಬರ್ 7 ರಂದು ಎಲ್ಲರಿಗೂ ದೋಷಿಗಳಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿತ್ತು.
ಆದರೆ, 2004 ರಲ್ಲಿ ಈ ತೀರ್ಪಿಗೆ ಸಂಬಂಧಿಸಿದಂತೆ ತಿಮ್ಮ ಮಧ್ಯಂತರ ಅರ್ಜಿ ಸಲ್ಲಿಸಿ ಬಾಲಾಪರಾಧಿಗಳಿಗೆ ಕೇವಲ ಮೂರು ವರ್ಷ ಮಾತ್ರ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ನಾನೂ ಸಹ ಬಾಲಾಪರಾಧಿಯಾಗಲಿದ್ದೇನೆ. ಆದರೆ, ಅಧೀನ ನ್ಯಾಯಾಲಯವು ನನಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಈಗಾಗಲೇ ೧೬ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇನೆ. ಇದರಿಂದ ನನ್ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ತಿಮ್ಮ ಹೈಕೋರ್ಟ್‌ಗೆ ಮನವಿ ಮಾಡಿದ್ದ.
ಹೈಕೋರ್ಟ್ ನಿರ್ದೇಶನದ ವೇಳೆ ಪೊಲೀಸರ ಬಂಧನದ ವೇಳೆ ತಿಮ್ಮನ ವಯಸ್ಸು? ಎಷ್ಟಿತ್ತು ಎಂಬುದನ್ನು ಪತ್ತೆ ಮಾಡಲು ಸೆಷನ್ಸ್ ನ್ಯಾಯಾಲಯ ಎರಡು ಬಾರಿ ವಿಚಾರಣೆ ನಡೆಸಿತ್ತು. ಎರಡು ಬಾರಿಯೂ ಪೊಲೀಸರು ಬಂಧಿಸಿದ ವೇಳೆ ತಿಮ್ಮನಿಗೆ 15 ವರ್ಷ ಆಗಿತ್ತು ಎಂದು ಅಧೀನ ನ್ಯಾಯಾಲಯ ಹೇಳಿತ್ತು. ತಿಮ್ಮನ ಪ್ರವೇಶಾತಿಯ ದಿನಾಂಕದ ಮಾಹಿತಿ ಇದ್ದ ಶಾಲಾ ರಿಜಿಸ್ಟ್ರಾರ್ ಅನ್ನು ಹೈಕೋರ್ಟ್ ತರಿಸಿಕೊಂಡು ಪರಿಶೀಲನೆ ನಡೆಸಿತ್ತು. ಈ ಎರಡೂ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.