ಆರ್‌ಎಸ್‌ಎಸ್‌ನಿಂದ ದಲಿತರನ್ನು ಹೊರ ತನ್ನಿ: ನಿಜಗುಣಾನಂದ ಶ್ರೀ

By Suvarna Web DeskFirst Published Oct 6, 2017, 6:03 PM IST
Highlights

ಆರ್‌ಎಸ್‌ಎಸ್ ಸಂಘಟನೆಯೊಂದಿಗೆ ಗುರುತಿಸಿ ಕೊಂಡಿರುವ ದಲಿತರನ್ನು ಕೂಡಲೇ ಅಲ್ಲಿಂದ ಹೊರತರುವಂತೆ ನಿಷ್ಕಲ ಮಂಟಪದ ನಿಜಗುಣ ಪ್ರಭು ತೋಂಟದಾರ್ಯ ಶ್ರೀ ದಲಿತ ಮುಖಂಡರಿಗೆ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ: ಆರ್‌ಎಸ್‌ಎಸ್ ಸಂಘಟನೆಯೊಂದಿಗೆ ಗುರುತಿಸಿ ಕೊಂಡಿರುವ ದಲಿತರನ್ನು ಕೂಡಲೇ ಅಲ್ಲಿಂದ ಹೊರತರುವಂತೆ ನಿಷ್ಕಲ ಮಂಟಪದ ನಿಜಗುಣ ಪ್ರಭು ತೋಂಟದಾರ್ಯ ಶ್ರೀ ದಲಿತ ಮುಖಂಡರಿಗೆ ಒತ್ತಾಯಿಸಿದ್ದಾರೆ.

ಭಾರತೀಯ ದಲಿತ ಸಾಹಿತ್ಯ ಆಕಾಡೆಮಿ ವತಿಯಿಂದ ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ರಾಜ್ಯ ದಲಿತ ಸಾಹಿತಿ, ಪತ್ರಕರ್ತರ ದ್ವಿತೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

Latest Videos

ವೈದಿಕ ಸಂಪ್ರದಾಯದಿಂದ ದಲಿತರು ದೂರ ಇರಬೇಕು. ಇಲ್ಲವಾದರೆ, ದಲಿತ ಸಮುದಾಯವನ್ನೇ ಅವರು ನಿರ್ನಾಮ ಮಾಡಲಿದ್ದಾರೆ. ಈ ಮತೀಯವಾದಿಗಳು ದಲಿತರಿಗೆ ಹಿಂದಿನಿಂದಲೂ ಮೋಸ ಮಾಡುತ್ತಿದ್ದಾರೆ.

ಒಂದು ವೇಳೆ ಅಂಬೇಡ್ಕರ್ ಹುಟ್ಟದೆ ಇದ್ದರೆ, ದಲಿತರು ಇನ್ನೂ ಅಸ್ಪಶ್ಯತೆಯಲ್ಲಿಯೇ ಬದುಕಬೇಕಿತ್ತು. ಹೀಗಾಗಿ ಧರ್ಮದ ಆಚರಣೆ ಧಿಕ್ಕರಿಸಿ ಬುದ್ಧ- ಬಸವ- ಅಂಬೇಡ್ಕರ್ ಅವರ ಭಾವಚಿತ್ರವನ್ನು ಮಾತ್ರ ಮನೆಯಲ್ಲಿಟ್ಟು ಪೂಜಿಸಿ ಎಂದು ಸಲಹೆ ನೀಡಿದರು.

ಲಿಂಗಾಯತರಿಗೆ 900 ವರ್ಷಗಳ ನಂತರ ನಾವು ಹಿಂದೂಗಳಲ್ಲ, ಲಿಂಗಾಯತರೆಂಬುದು ಮನವರಿಕೆಯಾಗಿದೆ. ಈ ವಿಷಯವನ್ನು ಈ ಮೊದಲು ಹಲವು ಬಾರಿ ಹೇಳಿದರೆ ಯಾರೂ ನಂಬಿರಲಿಲ್ಲ. ರಾಜಕೀಯದಲ್ಲಿ ಏರುಪೇರಾಗುತ್ತಿದ್ದಂತೆ, ಇವರಿಗೆ ಲಿಂಗಾಯತ ಧರ್ಮವೇ ಬೇರೆ ಎಂಬ ತಿಳಿವಳಿಕೆ ಮೂಡಿದೆ. ಹೋರಾಟ ಹೀಗೆ ಮುಂದುವರೆಯಬೇಕು. ಸಂಘಟನೆ ದೊಡ್ಡದಾಗಬೇಕು. ಹಿಂದುತ್ವದ ತಳಹದಿಯಲ್ಲಿ ದೇಶ ಕಟ್ಟುತ್ತೇವೆ ಎಂದು ಹೊರಟವರಿಗೆ ಉತ್ತರ ನೀಡಬೇಕು. ಇದು ಹಿಂದುತ್ವದ ರಾಷ್ಟ್ರವಲ್ಲ. ದಲಿತರ, ದ್ರಾವಿಡರ ರಾಷ್ಟ್ರ. ಅವರಿಗೆ ಹಿಂದುತ್ವದ ತಳಹದಿಯ ಮೇಲೆ ದೇಶ ಕಟ್ಟಲು ಆಗುವುದೂ ಇಲ್ಲ. ಕಾರಣ ಇಲ್ಲಿ ಇನ್ನೂ ಅಸ್ಪಶ್ಯತೆ, ಶೋಷಣೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತಿ ಡಾ. ಸಿದ್ದಲಿಂಗಯ್ಯ ಮಾತನಾಡಿ, ಪಠ್ಯಪುಸ್ತಕಗಳಲ್ಲಿನ ಪಾಠಗಳು ಮೇಲ್ವರ್ಗದವರ ಪರವಾಗಿವೆ. ಮೇಲ್ವರ್ಗದವರ ಶಿಕ್ಷಣ ಪದ್ಧತಿಯೇ ದಲಿತರಲ್ಲಿ ಕೀಳರಿಮೆ ಮೂಡಲು ಮುಖ್ಯ ಕಾರಣ. ದಲಿತರು ಕೀಳುರಿಮೆಯಿಂದ ಹೊರ ಬರಬೇಕು ಎಂದು ತಿಳಿಸಿದರು.

ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ಡಾ. ಎಸ್.ಪಿ. ಸುಮನಾಕ್ಷರತ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಮಹಾರಾಷ್ಟ್ರದ ಮಾಜಿ ಸಚಿವ ಬಲನರಾವ್ ಪೂಲಪ್, ಮಾಜಿ ಸಂಸದ ಐ.ಜಿ. ಸನದಿ ಮತ್ತಿತರರು ಇದ್ದರು.

click me!