ಚಾಮರಾಜನಗರದಲ್ಲೊಂದು ಅಮಾನವೀಯ ಕೃತ್ಯ: ದಲಿತ ವ್ಯಕ್ತಿ ಬೆತ್ತಲೆ ಮೆರವಣಿಗೆ

Published : Jun 13, 2019, 10:05 AM ISTUpdated : Jun 13, 2019, 01:15 PM IST
ಚಾಮರಾಜನಗರದಲ್ಲೊಂದು ಅಮಾನವೀಯ ಕೃತ್ಯ: ದಲಿತ ವ್ಯಕ್ತಿ ಬೆತ್ತಲೆ ಮೆರವಣಿಗೆ

ಸಾರಾಂಶ

ದೇವಾಲಯಕ್ಕೆ ನುಗ್ಗಿದ ಎನ್ನುವ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಬೆತ್ತಲೆಗೊಳಿಸಿ ಥಳಿಸಿದ ಅಮಾನವೀಯ ಕೃತ್ಯ ರಾಜ್ಯದಲ್ಲೇ ನಡೆದಿದೆ. 

ಬೆಂಗಳೂರು (ಜೂ.13) :  ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವುದಲ್ಲದೇ ಬೆತ್ತಲೆ ಮೆರವಣಿಗೆ ನಡೆಸಿರುವುದು ಅತ್ಯಂತ ಅಮಾನವೀಯ. ಸಮಾಜದಲ್ಲಿ ಜಾತಿ-ವೈಷಮ್ಯ ಇನ್ನೂ ಮುಂದುವರಿದಿರುವುದು ದುರದೃಷ್ಟಕರವಾಗಿದೆ. ಇಂತಹ ಕೃತ್ಯಗಳನ್ನು ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಟ್ವೀಟರ್‌ನಲ್ಲಿ ಘಟನೆಯನ್ನು ಖಂಡಿಸಿದ್ದಾರೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸಹ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ನಮ್ಮದು ಶಾಂತಿ ಮತ್ತು ಸೌಹಾರ್ದಯುತ ರಾಜ್ಯ. ಆದರೆ, ಇಲ್ಲಿ ಇಂತಹ ಪ್ರಕರಣ ನಡೆದಿದೆ ಎಂದರೆ ನಿಜಕ್ಕೂ ನಾಚಿಕೆಯಾಗಬೇಕು. ಇಷ್ಟುದಿನ ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯದಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿದ್ದವು. ಈಗ ನಮ್ಮ ರಾಜ್ಯದಲ್ಲಿ ಇಂತಹ ಪ್ರಕರಣ ನಡೆದಿದೆ. ನಮ್ಮ ರಾಜ್ಯ ಕೂಡ ಬೇರೆ ರಾಜ್ಯದ ರೀತಿಯಂತೆ ಆಗಬೇಕಾ ಎಂದು ಅವರು ಕಿಡಿಕಾರಿದರು.

ಪ್ರಕರಣದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇದೇ ವೇಳೆ ಬೇರೆ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೂ ಎಚ್ಚರಿಕೆ ನೀಡಿದರು. ಮುಂದಿನ ದಿನದಲ್ಲಿ ಯಾವುದೇ ಜಿಲ್ಲೆಯಲ್ಲಿ ಇಂತಹ ಪ್ರಕರಣ ನಡೆದರೂ ಅದಕ್ಕೆ ಅಲ್ಲಿನ ಜಿಲ್ಲಾಧಿಕಾರಿಯೇ ಹೊಣೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಪರಮೇಶ್ವರ್‌ ಹೇಳಿದರು.

ಗುಂಡ್ಲುಪೇಟೆಯಲ್ಲಿ ದಲಿತ ಯುವಕ ಪ್ರತಾಪ್‌ ದೇವಸ್ಥಾನ ಪ್ರವೇಶಿಸಿದ ಎಂಬ ಕಾರಣಕ್ಕೆ ಆತನ ಮೇಲೆ ತೀವ್ರ ಹಲ್ಲೆ ಮಾಡಿ, ಆತನನ್ನು ವಿವಸ್ತ್ರಗೊಳಿಸಿ ರಸ್ತೆಯ ಮೇಲೆ ಪ್ರಾಣಿಗಳಂತೆ ಎಳೆದಾಡಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌
ಬೀಚ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ಬಗ್ಗೆ ಚರ್ಚೆ: ಡಿ.ಕೆ.ಶಿವಕುಮಾರ್‌