
ಬೆಂಗಳೂರು(ಏ. 14): ರೌಡಿಯಿಸಂ ಬಿಟ್ಟು ಫುಲ್ ರಾಜಕಾರಣಿ ಅಂತ ಹೇಳಿಕೊಳ್ತಾನೇ ಮಾಡಬಾರದ ದಂಧೆಗಳನ್ನೆಲ್ಲಾ ಮಾಡ್ತಿದ್ದ ಶ್ರೀರಾಂಪುರದ ರೌಡಿಶೀಟರ್ ನಾಗನಿಗೆ ಪೊಲೀಸರಿಗೆ ಇಂದು ಶಾಕ್ ಕೊಟ್ಟಿದ್ದಾರೆ. ಬೆಳ್ಳಂಬೆಳಗ್ಗೆ ನಾಗನ ಮನೆ ಮತ್ತು ಕಚೇರಿಗೆ ಪೊಲೀಸರು ದಾಳಿ ಮಾಡಿದ್ದಾರೆ. ಮನೆ ಹಾಗೂ ಕಚೇರಿ ಒಳಗೆ ಸಿಕ್ಕ ರಾಶಿ ರಾಶಿ ಹಳೆಯ ನೋಟಿನ ಕಂತೆಗಳನ್ನ ಕಂಡು ಪೊಲೀಸರು ದಂಗಾದಿ ಹೋಗಿದ್ದಾರೆ. ಸುವರ್ಣನ್ಯೂಸ್'ಗೆ ಸಿಕ್ಕ ಅಧಿಕೃತ ಮಾಹಿತಿ ಪ್ರಕಾರ ಒಟ್ಟು 14.80 ಕೋಟಿ ರೂಪಾಯಿ ನಗದು ಹಣ ಸಿಕ್ಕಿದೆ. ಕೆಲ ವರದಿಗಳ ಪ್ರಕಾರ ನಾಗನ ಮನೆಯೊಳಗೆ ಸಿಕ್ಕ ಹಣದ ಮೊತ್ತ 25 ಕೋಟಿ ಎನ್ನಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಕೌಂಟಿಂಗ್ ಮಷೀನ್'ನಿಂದ ಅಷ್ಟು ಹಣವನ್ನು ಎಣಿಸುವಷ್ಟರಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ.
ಹಣದ ಜೊತೆಗೆ ಲಾಂಗು, ಮಚ್ಚು:
ನಾಗನ ಕಚೇರಿಯಲ್ಲಿ ಹೋಂ ಥಿಯೇಟರ್ ತುಂಬೆಲ್ಲಾ ಹಣದ ಕಂತೆಗಳೇ. ನಾಲ್ಕು ಕಬೋರ್ಡ್, ಹಾಸಿಗೆಯಲ್ಲಿ ಕೋಟಿ ಕೋಟಿ ರೂಪಾಯಿಗೂ ಅಧಿಕ ನೋಟುಗಳು ಸಿಕ್ಕಿವೆ. ಅಲ್ಲದೆ, ಲಾಂಗ್, ಮಚ್ಚು, ಡ್ರ್ಯಾಗರ್'ಗಳೂ ಸಿಕ್ಕಿವೆ. ಇವು ಸಿಕ್ಕಿದ್ದು, ನಾಗ ಇನ್ನೂ ರೌಡಿಯಿಸಂನಲ್ಲಿರುವುದಕ್ಕೆ ಸಾಕ್ಷಿಯಾಗಿ ನಿಂತಿವೆ.
ನೋಟು ಅಮಾನ್ಯಗೊಳಿಸಿದ ಬಳಿ ರಾಜ್ಯದಲ್ಲಿ ನಡೆದ ದಾಳಿಯಲ್ಲಿ ಸಿಕ್ಕ ಅತಿ ಹೆಚ್ಚು ಮೊತ್ತ ಇದಾಗಿದೆ. ಬಾಹುಬಲಿ ನಿರ್ಮಾಪಕರ ಮನೆಯಲ್ಲಿ ಸಿಕ್ಕ ದೊಡ್ಡ ಮೊತ್ತ ಬಿಟ್ಟರೆ, ದೇಶದಲ್ಲಿ ಇದೇ 2ನೇ ಹೆಚ್ಚು ಮೊತ್ತ ಎನ್ನಲಾಗಿದೆ. ಬೆಳಗ್ಗಿನಿಂದ ಹಣ ಎಣಿಕೆ ಮುಂದುವರೆದಿದ್ದು, ಈವರೆಗೂ ಮುಕ್ತಾಯವಾಗಿಲ್ಲ.
ಬಾಗಿಲು ತೆರೆಯದ ನಾಗನ ಪತ್ನಿ..!
ನಾಗನ ಮನೆಯ ಮೇಲೆ ಇಂದು ಬೆಳಗ್ಗೆ ದಾಳಿ ನಡೆಸಿದ ಪೊಲೀಸರಿಗೆ ಆತನ ಪತ್ನಿ ಲಕ್ಷ್ಮೀ ವಿರೋಧ ವ್ಯಕ್ತಪಡಿಸಿದ್ದಾಳೆ. ಮನೆಯ ಬಾಗಿಲು ಓಪನ್ ಮಾಡದೇ ಗಂಟೆಗಟ್ಟಲೆ ಅಧಿಕಾರಿಗಳನ್ನ ಕಾಯಿಸಿದ್ದಾಳೆ. ಕೊನೆಗೆ ಪೊಲೀಸ್ ಅಧಿಕಾರಿಗಳು ಬಾಗಿಲು ಒಡೆದು ಮನೆಗೆ ನುಗ್ಗಿದ್ದಾರೆ. ದಾಳಿ ಸೂಚನೆ ಸಿಗುತ್ತಿದ್ದಂತೆಯೇ ನಾಗ ಮನೆಯಿಂದ ಹಾರಿ ಪರಾರಿಯಾಗಿದ್ದಾನೆ. ಈ ವೇಳೆ, ದಾಳಿ ನಡೆಸಿದ ಪೊಲೀಸರಿಗೆ ಸಹಕರಿಸದ ನಾಗನ ಪತ್ನಿ ಲಕ್ಷ್ಮೀ, "ಲೇ ನೀವೇ ಹುಡುಕಿಕೊಳ್ಳಿ" ಅಂತ ದಿಮಾಕಿನಿಂದಲೇ ಮಾತನಾಡಿದ್ದಾಳೆ. ಹೀಗಾಗಿ ಲಕ್ಷ್ಮಿಯನ್ನೂ ಪೊಲೀಸರು ವಶಕ್ಕೆ ಪಡೆಯುತ್ತಾರೆ.
ನಾಗನ ದಂಧೆಗಳೇನು?
ಮಾರ್ಚ್ 18 ರಂದು ಮೂವರು ವ್ಯಕ್ತಿಗಳನ್ನ ಹೆಣ್ಣೂರಿನಿಂದ ಅಪಹರಿಸಿದ್ದ ನಾಗ ಅವರ ಮೇಲೆ ಹಲ್ಲೆ ನಡೆಸಿ 50 ಲಕ್ಷ ವಸೂಲಿ ಮಾಡಿದ್ದ. ಈ ಸಂಬಂಧ ದೂರು ದಾಖಲು ಮಾಡಿಕೊಂಡ ಹೆಣ್ಣೂರು ಪೊಲೀಸರು ಕೋರ್ಟ್'ನಿಂದ ಸರ್ಚ್ ವಾರಂಟ್ ಪಡೆದು ಇಂದು ದಾಳಿ ನಡೆಸಿದ್ರು. ಅಲ್ಲದೆ, ನಾಗನ ವಿರುದ್ಧ ಇತ್ತೀಚಿಗೆ ಮೂರ್ನಾಲ್ಕು ಕಿಡ್ನಾಪ್ ಪ್ರಕರಣಗಳು ದಾಖಲಾಗಿವೆ.
ದೂರುದಾರ ಉಮೇಶ್, ಕಿಶೋರ್ ಹಾಗೂ ಗಣೇಶ್ ಅವರೂ ಬ್ಲಾಕ್ ಅಂಡ್ ವೈಟ್ ದಂಧೆ ಮಾಡಲು ಮುಂದಾಗಿ ನಾಗನನ್ನು ಸಂಪರ್ಕಿಸಿದ್ದರು. ಇದೇ ಉಮೇಶ್ ಹಾಗೂ ಕಿಶೋರ್ 2 ವಾರಗಳಿಂದ ಸಿಸಿಬಿ ನಡೆಸಿದ್ದ ದಾಳಿಯಲ್ಲಿ ಅರೆಸ್ಟ್ ಆಗಿ ಜೈಲಿಗೆ ಹೋಗಿ ಬಂದಿದ್ದರು. ಅಲ್ಲದೆ, ವೀರಣ್ಣ ಮತ್ತಿಕಟ್ಟಿ ಅಳಿಯ ಪ್ರವೀಣ್'ಗೂ ನಾಗನಿಗೂ ನೇರ ಸಂಬಂಧ ಇರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು ತನಿಖೆ ಮುಂದುವರೆಸಿದ್ದಾರೆ.
ಇಡಿ, ಐಟಿಗೆ ಮಾಹಿತಿ ನೀಡಿದ ಪೊಲೀಸರು
ರೌಡಿ ನಾಗನ ಮನೆಯಲ್ಲಿ ಸುಮಾರು 15 ಕೋಟಿ ಹಳೆ ನೋಟು ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ನಾಳೆ, ಶನಿವಾರ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ, ನೂರು ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ರಗಳೂ ಕೂಡ ನಾಗನ ಮನೆಯಲ್ಲಿವೆ..
ಶ್ರೀರಾಂಪುರದಲ್ಲಿರುವ ನಾಗನ ಎಲ್ಲಾ ಮನೆಗಳಲ್ಲಿಯೂ ಹುಡುಕಾಟ ನಡೆಯಿತು. ಡಾಬಸ್'ಪೇಟೆಯಲ್ಲಿರುವ ರೆಸಾರ್ಟ್ ಹಾಗೂ ಮನೆಯ ಮೇಲೂ ದಾಳಿ ನಡೆದಿದೆ. ಈ ರೆಸಾರ್ಟ್'ನ ಆಸ್ತಿ ರಾಜಣ್ಣ ಎಂಬುವವರನ್ನ ಬೆದರಿಸಿ ಬರೆಸಿಕೊಂಡಿದ್ದು ಎನ್ನಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
- ರಮೇಶ್ ಎಚ್., ಕ್ರೈಂಬ್ಯೂರೋ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.