
ಮುಂಬೈ/ಬೆಂಗಳೂರು(ಫೆ.10): ಟಾಟಾ ಸಮೂಹ ಕಂಪನಿಯಲ್ಲಿ ರತನ್ ಟಾಟಾ ಹಾಗೂ ಸೈರಸ್ ಮಿಸಿ ನಡುವಣ ಕಲಹಕ್ಕೆ ತೆರೆ ಬಿದ್ದ ಬೆನ್ನಲ್ಲೇ, ಬೆಂಗಳೂರು ಮೂಲದ ವಿಶ್ವವಿಖ್ಯಾತ ಸಾಫ್ಟ್'ವೇರ್ ಕಂಪನಿ ಇನ್ಫಿಯಲ್ಲೂ ಅಂತಹುದ್ದೇ ಒಳಜಗಳ ಶುರುವಾದಂತಿದೆ.
ಇನ್ಫಿನ ಸಿಇಒ ವಿಶಾಲ್ ಸಿಕ್ಕಾ ಅವರ ವೇತನ ಹೆಚ್ಚಳ ಹಾಗೂ ಕಂಪನಿ ತೊರೆಯುವ ಉನ್ನತ ಅಧಿಕಾರಿಗಳಿಗೆ ನೀಡಲಾಗುತ್ತಿರುವ ಒಂದು ವರ್ಷಕ್ಕೂ ಹೆಚ್ಚಿನ ಸಂಬಳ ರೂಪದ ನಿರ್ಗಮನ ಪ್ಯಾಕೇಜ್ ವಿಷಯ ಇನ್ಫಿ ಸಂಸ್ಥಾಪಕರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಸಂಸ್ಥಾಪಕರು ಪ್ರಶ್ನೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಶಾಲ್ ಸಿಕ್ಕಾ ಅವರು ತಮ್ಮ ವೇತನವನ್ನು 47 ಕೋಟಿಯಿಂದ 74 ಕೋಟಿ ರು. ಹೆಚ್ಚಿಸಿಕೊಂಡಿದ್ದಾರೆ. ಮಾಜಿ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಬನ್ಸಲ್ ಕಂಪನಿ ತೊರೆದಾಗ 24 ತಿಂಗಳ ಸಂಬಳ ಅಥವಾ 17.38 ಕೋಟಿ ರು. ನೀಡಲಾಗಿರುವುದನ್ನು ಸಂಸ್ಥಾಪಕರು ಪ್ರಶ್ನೆ ಮಾಡಿದ್ದಾರೆ.
ಸಂಸ್ಥಾಪಕರಿಗೆ ವಿಶಾಲ್ ಸಿಕ್ಕಾ ಅವರಿಗಿಂತ ಕಾರ್ಪೋರೆಟ್ ಆಡಳಿತ ವೈಫಲ್ಯ ತಡೆಯಲು ವಿಫಲರಾದ ಅಧ್ಯಕ್ಷ ಶೇಷಸಾಯಿ ಅವರ ವಿರುದ್ಧವೇ ಅಸಮಾಧಾನವಿದೆ ಎಂದು ಹೇಳಲಾಗಿದೆ. ಕಂಪನಿಯ ಸಂಸ್ಥಾಪಕರು ಹಾಗೂ ಅವರ ಕುಟುಂಬ ವರ್ಗ ಕಂಪನಿಯಲ್ಲಿ ಶೇ.12.75ರಷ್ಟು ಷೇರು ಹೊಂದಿರುವುದರಿಂದ ಈ ಅಸಮಾಧಾನ ಮಹತ್ವದ್ದಾಗಿದೆ.
ಈ ನಡುವೆ, ಕಂಪನಿಯ ನಿರ್ದೇಶಕ ಮಂಡಳಿ ಹಾಗೂ ಸಂಸ್ಥಾಪಕರ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ವರದಿಗಳನ್ನು ಇನ್ಫಿ ನಿರಾಕರಿಸಿದೆ. ಈ ಮಧ್ಯೆ ವಿಶಾಲ್ ಸಿಕ್ಕಾ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಿರ್ದೇಶಕ ಮಂಡಳಿಯ ಕಾರ್ಯನಿರ್ವಹಣೆ ಇನ್ನಷ್ಟು ಉತ್ತಮವಾಗಿರಬೇಕಿತ್ತು ಎಂದು ನಾರಾಯಣಮೂರ್ತಿ ಅವರು ಸಂದರ್ಶನಗಳಲ್ಲಿ ತಿಳಿಸಿದ್ದಾರೆ.
ಟಾಟಾ ಕಂಪನಿಯಲ್ಲಿ ಸೈರಸ್ ಮಿಸ್ತ್ರಿ ವಜಾ ಮಾಡಿದ್ದರಿಂದ ಆಂತರಿಕ ಕಲಹ ಏರ್ಪಟ್ಟಿರುವಾಗಲೇ, ಭಾರತದ ಎರಡನೇ ಅತಿದೊಡ್ಡ ಕಂಪನಿಯಾಗಿರುವ ಇನ್ಫಿನಲ್ಲೂ ಆಂತರಿಕ ಕಲಹ ತಾರಕ್ಕೇರಿದೆ. ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಕಾರಿ ವಿಶಾಲ್ ಸಿಕ್ಕಾ ಮಧ್ಯೆ ವೈಮನಸ್ಸು ಸೃಷ್ಟಿಯಾಗಿದೆ. ವಿಶಾಲ್ ಸಿಕ್ಕಾಗೆ 1.1 ಕೋಟಿ ರು. ಬದಲಾಗುವ ವೇತನ ನೀಡಿದ್ದನ್ನು ಭಾರತದ ಅತಿದೊಡ್ಡ ಸ್‌ಟಾವೇರ್ ಸಂಸ್ಥೆಗಳಲ್ಲೊಂದಾದ ಇನ್ಫಿನ ಸಾಂಸ್ಥಿಕ ಆಡಳಿತ ಲೋಪದ ಜವಾಬ್ದಾರಿಯನ್ನು ಹೊತ್ತು ಆರ್.ಶೇಷಸಾಯಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಮತ್ತು ಷೇರುದಾರರಲ್ಲಿ ಮನೆ ಮಾಡಿರುವ ಆತಂಕಗಳ ಕುರಿತು ಮಧ್ಯಂತರ ಅಧ್ಯಕ್ಷ ಸ್ಪಷ್ಟನೆ ನೀಡಬೇಕೆಂದು ಸಾಫ್ಟ್'ವೇರ್ ಸಂಸ್ಥೆಯ ಮಾಜಿ ಮುಖ್ಯ ಆರ್ಥಿಕ ಅಕಾರಿ ವಿ.ಬಾಲಕೃಷ್ಣನ್ ಆಗ್ರಹಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಇನ್ಫಿನಲ್ಲಿ ಉದ್ಭವವಾಗಿರುವ ಲೋಪಗಳ ಬಗ್ಗೆ ಸಂಸ್ಥೆಯ ಮಂಡಳಿ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಈ ಎಲ್ಲ ಲೋಪಗಳ ಜವಾಬ್ದಾರಿಯನ್ನು ಅಧ್ಯಕ್ಷ ಶೇಷಸಾಯಿ ಅವರೇ ಹೊತ್ತುಕೊಳ್ಳಬೇಕಿದೆ ಎಂದು ಸಂದರ್ಶನದಲ್ಲಿ ಬಾಲಕೃಷ್ಣನ್ ತಿಳಿಸಿದ್ದಾರೆ. ಇದು ಇನ್ಫಿ ಸಿಇಒ ವಿಶಾಲ್ ಸಿಕ್ಕಾ ಮತ್ತು ಸಂಸ್ಥಾಪಕರ ನಡುವಿನ ವಿವಾದವಲ್ಲ. ಬದಲಿಗೆ, ಮಂಡಳಿಗೆ ಸಂಬಂಧಿಸಿದ ವಿಚಾವಾಗಿದೆ ಎಂದು ಬಾಲಕೃಷ್ಣನ್ ಹೇಳಿದ್ದಾರೆ.
ಸಿಇಒ ವಿಶಾಲ್ ಸಿಕ್ಕಾ ತಮ್ಮ ಜವಾಬ್ದಾರಿಯನ್ನು ಸರಿಯಾಗಿಯೇ ನಿರ್ವಹಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಇನ್ಫಿ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಸಿಕ್ಕಾ ಬೆನ್ನಿಗೆ ನಿಂತಿದ್ದಾರೆ. ಆದರೆ, ಮಂಡಳಿಯ ಕಾರ್ಯಕ್ಷಮತೆ ಸುಧಾರಣೆ ಕಾಣಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಇನ್ಫಿ ಮಂಡಳಿ ಸೌಹಾರ್ದಯುತವಾಗಿದ್ದು, ಈ ಬಗ್ಗೆ ಚರ್ಚೆ ಮಾಡಿದ ಬಳಿಕವಷ್ಟೇ ವಿಶಾಲ್ ಸಿಕ್ಕಾ ವೇತನ ಕುರಿತಾಗಿ ಮಂಡಳಿ ನಿರ್ಧಾರ ತೆಗೆದುಕೊಂಡಿದೆ ಎಂದು ಬಯೋಕಾನ್ ಅಧ್ಯಕ್ಷೆ ಮತ್ತು ಇನ್ಫಿ ಮಂಡಳಿಯ ಸ್ವತಂತ್ರ ನಿರ್ದೇಶಕಿ ಕಿರಣ್ ಮಜುಮ್ದಾರ್ ಶಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.