
ಬೆಂಗಳೂರು (ಜೂ.16): ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ, ಸಕ್ಕರೆ ಇದೆ ಅನ್ನೋ ಸುದ್ದಿ ಎಲ್ಲೆಡೆ ಹಬ್ಬಿ ಜನರ ನಿದ್ದೆಗೆಡಿಸಿತ್ತು. ಆದ್ರೆ ಈ ಸುದ್ದಿ ಹಿಂದಿರೋ ರಹಸ್ಯ ಏನು? ಈ ಸುದ್ದಿಯನ್ನು ಹಬ್ಬಿಸಿದವರು ಯಾರು? ಇದರ ಹಿಂದಿರೋ ಷಡ್ಯಂತ್ರ ಏನು? ಈ ಎಲ್ಲಾ ಪ್ರಶ್ನೆಗೆ ಉತ್ತರ ಹುಡುಕಿದೆ ಸುವರ್ಣ ನ್ಯೂಸ್’ ಕವರ್ಸ್ಟೋರಿ ತಂಡ.
ಅಕ್ಕಿ ಅಲ್ಲ ಕಚ್ಚಾ ಪ್ಲಾಸ್ಟಿಕ್ !
ಚೀನಾದ ಫ್ಯಾಕ್ಟರಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ತಯಾರಾಗೋ ದೃಶ್ಯ ಎಲ್ಲರ ನಿದ್ದೆಗೆಡಿಸಿತ್ತು. ಆದ್ರೆ ಈ ಫ್ಯಾಕ್ಟರಿಯಲ್ಲಿ ತಯಾರಾಗುತ್ತಿದ್ದು ಅಕ್ಕಿ ಅಲ್ಲ, ಬದಲಾಗಿ ಅಕ್ಕಿ ಆಕಾರದಲ್ಲಿರೋ ಕಚ್ಚಾ ಪ್ಲಾಸ್ಟಿಕ್. ಸಾಗಾಟ ಸುಲಭವಾಗಲಿ ಅನ್ನೋ ಕಾರಣಕ್ಕೇನೇ ಈ ಕಚ್ಚಾ ಪ್ಲಾಸ್ಟಿಕನ್ನ ಹರಳುಗಳ ರೂಪದಲ್ಲಿ ತಯಾರು ಮಾಡ್ತಾರಂತೆ. ಇನ್ನೊಂದು ಮಹತ್ವದ ಸಂಗತಿ ಅಂದ್ರೆ ಈ ಪ್ಲಾಸ್ಟಿಕ್ ಹರಳುಗಳ ಉತ್ಪಾದನಾ ವೆಚ್ಚವೇ ಇನ್ನೂರು ರೂಪಾಯಿಗಿಂತಲೂ ಹೆಚ್ಚಿರುತ್ತೆ ಗೊತ್ತಾ?
ಅಕ್ಕಿ ಆಮದೇ ಮಾಡಲ್ಲ
ಇನ್ನೊಂದು ಸಾಮಾನ್ಯ ಜ್ಞಾನ ನಮಗಿರಲೇಬೇಕು, ಅದೇನಂದ್ರೆ ಭಾರತ ವಿಶ್ವದಲ್ಲೇ ಅತೀ ಹೆಚ್ಚು ಅಕ್ಕಿ ರಫ್ತು ಮಾಡುವ ದೇಶ. ನಾವು ಪ್ರತಿ ವರ್ಷ 10 ದಶಲಕ್ಷ ಟನ್ ಅಕ್ಕಿಯನ್ನ ರಫ್ತು ಮಾಡುತ್ತಿದ್ದೇವೆ. ಹೀಗಿದ್ದ ಮೇಲೆ ಚೀನಾದಿಂದ ನಮ್ಮ ದೇಶಕ್ಕೆ ಪ್ಲಾಸ್ಟಿಕ್ ಅಕ್ಕಿಯನ್ನ ಹೆಚ್ಚು ವೆಚ್ಚ ಕೊಟ್ಟು ಯಾಕಾದ್ರೂ ಆಮದು ಮಾಡ್ತಾರೆ ಹೇಳಿ.
ಮೊಟ್ಟೆಯಲ್ಲ ಬರೀ ಲೊಳಲೊಟ್ಟೆ!
ಇನ್ನು ಪ್ಲಾಸ್ಟಿಕ್ ಮೊಟ್ಟೆ ತಯಾರಿಸೋ ಈ ದೃಶ್ಯವಂತು ಪಕ್ಕಾ ಬೋಗಸ್ ಅನ್ನೋದು ಸಣ್ಣ ಮಕ್ಕಳಿಗೂ ಗೊತ್ತಾಗುತ್ತೆ. ಇದು ಆಹಾರದ ಮಾಡೆಲ್ಗಾಗಿ, ಮಕ್ಕಳ ಆಟಿಕೆಗಾಗಿ ತಯಾರಿಸುತ್ತಿರೋ ಪ್ಲಾಸ್ಟಿಕ್ ಮೊಟ್ಟೆಯಷ್ಟೇ. ಇದನ್ನ ಬೇಯಿಸಲು ಬಿಸಿ ನೀರಿಗೆ ಹಾಕುತ್ತಿದ್ದಂತೆ ಅದು ಕರಗಿ ಹೋಗುತ್ತೆ. ಇನ್ನು ಆಮ್ಲೇಟ್ ಮಾಡಿದ್ರೆ ಹೆಂಚಿಗೆ ಅಂಟಿಕೊಂಡು ವಾಸನೆ ಬರುತ್ತೆ. ಅಲ್ಲದೆ ಮೊಟ್ಟೆ ಯಾರೂ ನಕಲಿ ಮಾಡಲಾಗದ ಪ್ರಕೃತಿಯ ಅದ್ಭುತ ಸೃಷ್ಟಿ.
ಆದರೆ ಇಂಥ ದೃಶ್ಯವನ್ನ ಹರಿಬಿಟ್ಟು ಜನರಲ್ಲಿ ಆತಂಕ ಸೃಷ್ಟಿಸುತ್ತಿರೋದು ಯಾರು ಗೊತ್ತಾ? ಆಹಾರ ಕಲಬೆರಕೆ ಮಾಫಿಯಾದವರು. ಜನರಲ್ಲಿ ಮೂಡುತ್ತಿರೋ ಆಹಾರ ಕಲಬೆರೆಕೆ ದಂಧೆ ಬಗೆಗಿನ ಜಾಗೃತಿಯನ್ನ ದಾರಿತಪ್ಪಿಸೋದು ಈ ಮಾಫಿಯಾದ ದುರುದ್ದೇಶ ಅಂತಾರೆ ತಜ್ಞರು.
ಕಲಬೆರಕೆ ಮಾಫಿಯಾವೇ ಇಂಥದ್ದೊಂದು ದೃಶ್ಯವನ್ನ ಹರಿಯಬಿಟ್ಟು ಸಮಾಜದಲ್ಲಿ ಅಶಾಂತಿ ಮೂಡಿಸಿತು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಪ್ರಚಾರ ಪ್ರಿಯರು ಪರಿಸ್ಥಿತಿಯ ಲಾಭ ಪಡೆದರು. ಅದ್ರೆ ಸುಳ್ಳು ಸುದ್ದಿ ನಂಬಿದ ಜನ ಮಾತ್ರ ಮೋಸ ಹೋದ್ರು. ಏನೇ ಇರಲಿ, ಜನ ಇಂಥಾ ಒಂದು ಅನುಮಾನ ವ್ಯಕ್ತವಾದಾಗ ಸರ್ಕಾರದ ಆಹಾರ ಸುರಕ್ಷತಾ ಇಲಾಖೆ ತಕ್ಷಣ ಸ್ಪಂದಿಸಿ, ಅದಕ್ಕೆ ಸೂಕ್ತ ಪರಿಹಾರ ಒದಗಿಸಬೇಕಿತ್ತು. ಆದ್ರೆ ಅದು ಮಾಡದೇ ಇದ್ದುದೇ ಈ ಎಲ್ಲಾ ಅನಾಹುತಕ್ಕೆ ಕಾರಣ.
ವರದಿ: ವಿಜಯಲಕ್ಷ್ಮಿ ಶಿಬರೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.