ಮೂಡಾ ನಿವೇಶನ ಹಗರಣ: ಸಿಬಿಐ ನಡೆ ಸುತ್ತ ಅನುಮಾನಗಳ ಹುತ್ತ

Published : Jun 16, 2017, 09:15 PM ISTUpdated : Apr 11, 2018, 12:51 PM IST
ಮೂಡಾ ನಿವೇಶನ ಹಗರಣ: ಸಿಬಿಐ ನಡೆ ಸುತ್ತ ಅನುಮಾನಗಳ ಹುತ್ತ

ಸಾರಾಂಶ

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿರುವ ಸಂಸದ ಸಿ.ಎಸ್​.ಪುಟ್ಟರಾಜು, ಮಾಜಿ ಶಾಸಕ ಎಂ.ಶ್ರೀನಿವಾಸ್​, ಹಾಲಿ ಶಾಸಕ ಎ.ಬಿ.ರಮೇಶ್​ ಅವರ ವಿರುದ್ಧ ವಿಚಾರಣೆಗೆ ವಿಧಾನಸಭೆ ಸ್ಪೀಕರ್​ ಅನುಮತಿ ನೀಡಿ ಹಲವು ತಿಂಗಳಾದರೂ ಸಿಬಿಐ ಇನ್ನೂ ವಿಚಾರಣೆ ನಡೆಸುತ್ತಿಲ್ಲ. ಸಂಸದ, ಶಾಸಕರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಭಾಧ್ಯಕ್ಷರು ಸ್ಪಷ್ಟವಾಗಿ ಪತ್ರ ಬರೆದಿದ್ದರೂ ಸಿಬಿಐ, ಈ ಬಗ್ಗೆ ಕಾನೂನು ಸಲಹೆ ಪಡೆಯಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬೆಂಗಳೂರು (ಜೂ.16): ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿರುವ ಸಂಸದ ಸಿ.ಎಸ್​.ಪುಟ್ಟರಾಜು, ಮಾಜಿ ಶಾಸಕ ಎಂ.ಶ್ರೀನಿವಾಸ್​, ಹಾಲಿ ಶಾಸಕ ಎ.ಬಿ.ರಮೇಶ್​ ಅವರ ವಿರುದ್ಧ ವಿಚಾರಣೆಗೆ ವಿಧಾನಸಭೆ ಸ್ಪೀಕರ್​ ಅನುಮತಿ ನೀಡಿ ಹಲವು ತಿಂಗಳಾದರೂ ಸಿಬಿಐ ಇನ್ನೂ ವಿಚಾರಣೆ ನಡೆಸುತ್ತಿಲ್ಲ. ಸಂಸದ, ಶಾಸಕರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಭಾಧ್ಯಕ್ಷರು ಸ್ಪಷ್ಟವಾಗಿ ಪತ್ರ ಬರೆದಿದ್ದರೂ ಸಿಬಿಐ, ಈ ಬಗ್ಗೆ ಕಾನೂನು ಸಲಹೆ ಪಡೆಯಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರಾಜ್ಯ ಸರ್ಕಾರದಿಂದ ಅಭಿಯೋಜನಾ ಮಂಜೂರಾತಿಗೆ ಬಾಕಿ ಇರುವ ಪ್ರಕರಣಗಳಲ್ಲಿ ಮಂಜೂರಾತಿ ಬಾಕಿ ಉಳಿಸಿಕೊಂಡಿರುವ ಕಾರಣ ಪ್ರಕರಣದ ವಿಚಾರಣೆಗೆ ತಡೆಯಾಗುತ್ತಿದೆ ಎಂದು ಕೇಂದ್ರ ಜಾಗೃತ ಆಯೋಗದ ಆಯುಕ್ತ ಕೆ.ವಿ.ಚೌಧುರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಈ ಪತ್ರ ಆಧರಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದರು.

ಮುಖ್ಯಮಂತ್ರಿ ಸೂಚನೆಯಂತೆ ನಗರಾಭಿವೃದ್ಧಿ ಇಲಾಖೆ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ, ಶಾಸಕರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಬಗ್ಗೆ ಸಭಾಧ್ಯಕ್ಷರಿಗೆ ಪತ್ರ ಬರೆದಿತ್ತು. ಈ ಕುರಿತು ವಿಧಾನಸಭೆಯ ಉಪ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದು, ಎಂ.ಶ್ರೀನಿವಾಸ್​, ಸಿ.ಎಸ್​.ಪುಟ್ಟರಾಜು, ಎ.ಬಿ.ರಮೇಶ್​ ವಿರುದ್ಧ ಭ್ರಷ್ಟಾಚಾರ ಅಧಿನಿಯಮ 1988ರ ಪ್ರಕರಣ 19(1)ರ ಅಡಿಯಲ್ಲಿ ಸಭಾಧ್ಯಕ್ಷರು ಅಭಿಯೋಜನಾ ಮಂಜೂರಾತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು.

ಇದನ್ನಾಧರಿಸಿ ಸಿಬಿಐ ನೇರವಾಗಿ ಸಂಸದ, ಶಾಸಕರನ್ನು ವಿಚಾರಣೆಗೆ ಕರೆಸಬೇಕಿತ್ತು. ಅಭಿಯೋಜನಾ ಮಂಜೂರಾತಿಯನ್ನು ಸಿಆರ್​ಪಿಸಿ ಕಲಂ 197ರ ಅಡಿಯಲ್ಲಿ ಕೋರಿದ್ದ ಸಿಬಿಐ, ಮಂಜೂರಾತಿ ತಿರಸ್ಕರಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟವಾಗಿ ನಮೂದಿಸಿಲ್ಲ. ಹೀಗಾಗಿ ಮುಂದಿನ ಕ್ರಮದ ಬಗ್ಗೆ ಕಾನೂನು ಅಭಿಪ್ರಾಯ ಪಡೆಯಲು ಮುಂದಾಗಿದೆ. ಸಿಬಿಐನ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಶಾಸಕರು ಸರ್ಕಾರಿ ನೌಕರರಲ್ಲದ ಕಾರಣ ಅವರ ವಿರುದ್ಧ ವಿಚಾರಣೆ ನಡೆಸಲು ಯಾವುದೇ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಮೇಲಾಗಿ ಈ ಪ್ರಕರಣ ಸದನದ ಹೊರಗೆ ನಡೆದಿರುವ ಕಾರಣ ಸಭಾಧ್ಯಕ್ಷರ ವ್ಯಾಪ್ತಿಗೂ ಒಳಪಡುವುದಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಭಾಗಿ ಆಗಿದ್ದ ಶಾಸಕರನ್ನು ಸಿಬಿಐ ವಿಚಾರಣೆ ನಡೆಸಿತ್ತು. ಆ ಸಂದರ್ಭದಲ್ಲೂ ಸಭಾಧ್ಯಕ್ಷರು, ಅಭಿಯೋಜನಾ ಮಂಜೂರಾತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಿಬಿಐಗೆ ಪತ್ರ ಬರೆದಿದ್ದರು. ಇದು ಮೂಡಾ ಪ್ರಕರಣದಲ್ಲೂ ಅನ್ವಯಿಸುತ್ತದೆ ಎಂಬ ಪ್ರಾಥಮಿಕ ತಿಳಿವಳಿಕೆ ಸಿಬಿಐಗೆ ಇಲ್ಲವೇ ಎಂಬ ಪ್ರಶ್ನೆಯೂ ಎದುರಾಗಿದೆ.

ಮಂಡ್ಯದ ನಗರಾಭಿವೃದ್ಧಿ ಪ್ರಾಧಿಕಾರ ರಚಿಸಿದ್ದ ಬಡಾವಣೆಯಲ್ಲಿ 107 ಬಿಡಿ ನಿವೇಶನಗಳನ್ನು ಹಂಚಿಕೆ ಆಗಿತ್ತು. ನಿವೇಶನ ಪಡೆದವರ ಪೈಕಿ ಶಾಸಕರು, ಕೆಲ ಚುನಾಯಿತ ಜನಪ್ರತಿನಿಧಿಗಳಿದ್ದರು. ಈ ಪ್ರಕರಣ ಕುರಿತು ತನಿಖೆ ನಡೆಸ್ಲಿಕ್ಕೆ ರಾಜ್ಯ ಸರ್ಕಾರವೇ ನೇರವಾಗಿ ಸಿಬಿಐಗೆ ವಹಿಸಿತ್ತು. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಪ್ರಾಧಿಕಾರದ ಕೆಳ ಹಂತದ ನೌಕರರ ವಿರುದ್ಧ ತತ್​ ಕ್ಷಣವೇ ವಿಚಾರಣೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಲಕ್ಷ್ಮೀ ಪ್ರಕರಣ ಬೆಳಕಿಗೆ ತಂದ ಶಾಸಕ ಮಹೇಶ ಟೆಂಗಿನಕಾಯಿಗೆ ಭರ್ಜರಿ ಸ್ವಾಗತ
India Latest News Live: ನಿತೀಶ್‌ ಹಿಜಾಬ್ ಎಳೆದಿದ್ದ ವೈದ್ಯೆಗೆ ಜಾರ್ಖಂಡ್‌ 3 ಲಕ್ಷ ರು. ವೇತನ ಆಫರ್‌