ತೂಕದ ಯಂತ್ರದಲ್ಲೂ ಚೀನಾ ನಕಲಿ ತಂತ್ರ : ಭಾರತದ ವಿರುದ್ಧ ಪರೋಕ್ಷ ಯುದ್ಧ !

By Suvarna Web DeskFirst Published Aug 18, 2017, 11:02 PM IST
Highlights

ಚೀನಾದಿಂದಅಕ್ರಮವಾಗಿಆಮದಾಗಿರುವತೂಕದಯಂತ್ರಗಳುಅತ್ಯಂತಕಡಿಮೆಬೆಲೆಗೆಸಿಗುತ್ತಿವೆ. ಹಾಗಾಗಿಇದಕ್ಕೆಭಾರಿಡಿಮ್ಯಾಂಡ್ಹೆಚ್ಚಿದೆ. ರಾಜ್ಯದಹೆಚ್ಚಿನದಿನಸಿ, ತರಕಾರಿಅಂಗಡಿ, ಚಿನ್ನದಅಂಗಡಿಗಳಲ್ಲಿಇದನ್ನೇಬಳಸಲಾಗುತ್ತಿದೆ. ಇದರಿಂದಗ್ರಾಹಕರಿಗೆಭಾರೀಮೋಸನಡೆಯುತ್ತಿದೆ. ಚೀನೀತೂಕದಯಂತ್ರಗಳಲ್ಲಿಅಳತೆಯನ್ನುವ್ಯಾಪಾರಸ್ಥರಿಗೆಬೇಕಾದಹಾಗೆಪರಿವರ್ತಿಸಬಹುದು.

ಬೆಂಗಳೂರು(ಆ.18): ಈಗಾಗಲೇ ದೇಶೀಯ ಮಾರುಕಟ್ಟೆಗೆ ಭಾರಿ ಹೊಡೆತ ನೀಡಿರುವ ಚೀನಾ ಉತ್ಪನ್ನಗಳು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿರುವುದು ಹೊಸತಲ್ಲ. ಆದರೆ ಚಿನ್ನದಿಂದ ಹಿಡಿದು ತರಕಾರಿವರೆಗೆ ಎಲ್ಲ ಬಗೆಯ ವಸ್ತುಗಳ ತೂಕವನ್ನು ಅಳತೆ ಮಾಡುವಲ್ಲೂ ಕೂಡ ಚೀನಾ ನಿರ್ಮಿತ ಅಕ್ರಮ ತೂಕದ ಯಂತ್ರಗಳೇ ಮಾರುಕಟ್ಟೆಯನ್ನು ಆಕ್ರಮಿಸಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಬಹುತೇಕ ಚೀನಾ ನಿರ್ಮಿತ ತೂಕದ ಯಂತ್ರಗಳೇ ಅಕ್ರಮವಾಗಿ ಮಾರಾಟ ನಡೆಯುತ್ತಿರುವ ಬಹುದೊಡ್ಡ ಜಾಲವನ್ನು ಸುವರ್ಣ ನ್ಯೂಸ್-ಕನ್ನಡಪ್ರಭದ ’ಕವರ್ ಸ್ಟೋರಿ’ ತಂಡ ಪತ್ತೆ ಮಾಡಿದೆ. ನಗರದಲ್ಲಿ ಖೋಟಾ ನೋಟುಗಳಂತೆ ಚೀನಿ ತೂಕದ ಯಂತ್ರಗಳು ಕೂಡ ವ್ಯಾಪಕವಾಗಿ ಮಾರಾಟವಾಗುತ್ತಿದ್ದು, ಗ್ರಾಹಕರ ಜೇಬಿಗೆ ಸದ್ದಿಲ್ಲದೇ ಭಾರಿ ಪ್ರಮಾಣದ ಕತ್ತರಿ ಪ್ರಯೋಗ ನಡೆಯುತ್ತಿದೆ. ಅಷ್ಟೇ ಅಲ್ಲ, ಚೀನಾ ನಿರ್ಮಿತ ತೂಕದ ಯಂತ್ರಗಳ ಸಾಚಾತನವೇ ಪ್ರಶ್ನಾರ್ಹವಾಗಿದ್ದು, ಗ್ರಾಹಕರ ಹಗಲು ದರೋಡೆ ನಡೆಯುತ್ತಿರುವುದು ಗೊತ್ತಾಗಿದೆ.

ಕಾನೂನು ಉಲ್ಲಂಘನೆ

ಭಾರತೀಯ ಕಾನೂನು ಮಾಪನ ಕಾಯ್ದೆ 2009ರ ಪ್ರಕಾರ ತೂಕದ ಯಂತ್ರದ ಉತ್ಪಾದನೆ, ಮಾರಾಟ ಹಾಗೂ ದುರಸ್ತಿ ಮಾಡಲು ಲೈಸೆನ್ಸ್ ಇರಲೇ ಬೇಕು. ಇನ್ನು ತೂಕದ ಯಂತ್ರ ಉತ್ಪಾದಿಸಲು ಕೂಡ ಮಾದರಿ ಅನುಮತಿ ನಿಯಮ 2011ರ ಪ್ರಕಾರ ಕೇಂದ್ರ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಅನುಮತಿ ಪಡೆದು, ಅದು ಕೇಂದ್ರ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟಗೊಳ್ಳಬೇಕು. ಆ ಬಳಿಕ ರಾಜ್ಯ ಮಾಪನ ಶಾಸ್ತ್ರ ಇಲಾಖೆಯಿಂದ ತನಿಖೆಗೊಳಗಾಗಿ ಇಲಾಖೆಯಿಂದ ಸರ್ಟಿಫಿಕೇಟ್ ಪಡೆಯಬೇಕು. ಇನ್ನು ತೂಕದ ಯಂತ್ರಗಳನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರದ ಅನುಮತಿ ಬೇಕೇ ಬೇಕು. ಇದನ್ನು ಹೊರತುಪಡಿಸಿ ಯಾರೂ ಕೂಡ ತೂಕದ ಯಂತ್ರಗಳನ್ನು ಮಾರಾಟ ಮಾಡುವಂತಿಲ್ಲ. ದುರಂತವೆಂದರೆ ರಾಜ್ಯದ ತೂಕದ ಯಂತ್ರ ಮಾರುಕಟ್ಟೆಯನ್ನು ಚೀನೀ ತೂಕದ ಯಂತ್ರಗಳೇ ಆಳುತ್ತಿವೆ. ಚಿನ್ನ ತೂಕ ಮಾಡುವ ಪುಟ್ಟ ತೂಕದ ಯಂತ್ರದಿಂದ ಹಿಡಿದು 25 ಕೆಜಿ ತೂಕದ ದೊಡ್ಡ ಮಾಪನದವರೆಗೆ ಎಲ್ಲಾ ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಅಗ್ಗದ ದರಕ್ಕೆ ಲಭ್ಯ

ಚೀನಾದಿಂದ ಅಕ್ರಮವಾಗಿ ಆಮದಾಗಿರುವ ತೂಕದ ಯಂತ್ರಗಳು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿವೆ. ಹಾಗಾಗಿ ಇದಕ್ಕೆ ಭಾರಿ ಡಿಮ್ಯಾಂಡ್ ಹೆಚ್ಚಿದೆ. ರಾಜ್ಯದ ಹೆಚ್ಚಿನ ದಿನಸಿ, ತರಕಾರಿ ಅಂಗಡಿ, ಚಿನ್ನದ ಅಂಗಡಿಗಳಲ್ಲಿ ಇದನ್ನೇ ಬಳಸಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಭಾರೀ ಮೋಸ ನಡೆಯುತ್ತಿದೆ. ಈ ಚೀನೀ ತೂಕದ ಯಂತ್ರಗಳಲ್ಲಿ ಅಳತೆಯನ್ನು ವ್ಯಾಪಾರಸ್ಥರಿಗೆ ಬೇಕಾದ ಹಾಗೆ ಪರಿವರ್ತಿಸಬಹುದು. ಈ ಅಕ್ರಮ ದಂಧೆಯ ಗುಟ್ಟನ್ನು ಸ್ವತಃ ತೂಕದ ಯಂತ್ರ ಮಾರಾಟ ಮಾಡುವ ವ್ಯಾಪಾರಿಯೇ ‘ಕವರ್ ಸ್ಟೋರಿ’ ತಂಡದ ಮುಂದೆ ಬಾಯಿಬಿಟ್ಟಿದ್ದಾನೆ. ಅಲ್ಲದೆ ತೂಕದ ಅಂಗಡಿಯಲ್ಲಿ ‘ಕವರ್ ಸ್ಟೋರಿ’ ತಂಡ ರಿಯಾಲಿಟಿ ಚೆಕ್ ಮಾಡಿದಾಗ ತೂಕದಲ್ಲಿ ಭಾರಿ ವ್ಯತ್ಯಾಸ ಇರುವುದು ಬಯಲಾಗಿದೆ. ಈ ರೀತಿ ಅಳತೆಯಲ್ಲಿ ವ್ಯತ್ಯಾಸವಿದ್ದರೆ ಚಿನ್ನದಂತಹ ಅಮೂಲ್ಯ ವಸ್ತು ಖರೀದಿಸುವ ಗ್ರಾಹಕರ ಜೇಬಿಗೆ ಭರ್ಜರಿ ಕತ್ತರಿ ಬೀಳುವುದು ಶತಃಸಿದ್ಧ.

ಬಿಂದಾಸ್ ವ್ಯಾಪಾರ

ಬೆಂಗಳೂರಿನ ಕೆಆರ್ ಮಾರ್ಕೆಟ್‌ನ ಅವೆನ್ಯೂ ರಸ್ತೆಯಲ್ಲಿರುವ ಬಹುತೇಕ ತೂಕದ ಯಂತ್ರಗಳ ಮಾರಾಟಗಾರರು ಬಹಿರಂಗವಾಗಿಯೇ ಚೈನೀಸ್ ಯಂತ್ರಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಯಾವುದೇ ಬಿಲ್ ಇಲ್ಲದೆ, ಎಂಆರ್‌ಪಿ ಹಾಕದೆ ತೆರಿಗೆ ವಂಚನೆಯನ್ನೂ ಮಾಡುತ್ತಿದ್ದಾರೆ. ಆದರೆ ಇದನ್ನು ತಡೆಯಬೇಕಾದ ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಮಾತ್ರ ಈವರೆಗೆ ಮೌನವಾಗಿದ್ದಾರೆ. ಕಾನೂನು ಉಲ್ಲಂಘಿಸಿರುವವರ ವಿರುದ್ಧ ಕ್ರಮಕೈಗೊಳ್ಳಬೇಕಾದವರೇ ವಂಚಕರ ಜೊತೆ ಕೈಜೋಡಿಸಿ ಅಪರಾಧಕ್ಕೆ ಸಾಥ್ ನೀಡುತ್ತಿದ್ದಾರೆ ಎನ್ನುವುದು ಕೂಡ ಬಹಿರಂಗಗೊಂಡಿದೆ.

ತೂಕದ ಯಂತ್ರದ ಜೊತೆಗೆ ಅವೆನ್ಯೂ ರಸ್ತೆಯ ಹೆಚ್ಚಿನ ವ್ಯಾಪಾರಸ್ಥರು ಇತರ ಚೀನಾ ಉತ್ಪನ್ನಗಳ ಅಕ್ರಮ ವ್ಯಾಪಾರ ಮಾಡುತ್ತಿರುವುದು ರಹಸ್ಯ ಕಾರ್ಯಾಚರಣೆ ವೇಳೆ ಗೊತ್ತಾಗಿದೆ. ಜಿಎಸ್‌ಟಿ ಜಾರಿಯಾದ ಬಳಿಕವೂ ಬಿಂದಾಸಾಗಿ ಬಿಲ್ ಇಲ್ಲದೇ ವ್ಯವಹಾರ ನಡೆಯುತ್ತಿದೆ. ಆಮದು ತೆರಿಗೆ ವಂಚಿಸಲು ಕಡಿಮೆ ಎಂಆರ್‌ಪಿ ಹಾಕಿಸಿಕೊಂಡು ಭಾರತದೊಳಗೆ ವಸ್ತುಗಳನ್ನು ತಂದು ಬಳಿಕ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ಇಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಆದರೆ ಇದಾವುದಕ್ಕೂ ರಾಜ್ಯ ಸರ್ಕಾರದ ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ಬ್ರೇಕ್ ಹಾಕುವ ಆಸಕ್ತಿಯನ್ನೇ ತೋರುತ್ತಿಲ್ಲ. ಕಾರಣ ಲಂಚದ ಮಹಿಮೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

ಹಠಾತ್ ದಾಳಿ

ರಾಜಧಾನಿಯಲ್ಲಿ ತೂಕದ ಯಂತ್ರದ ವಂಚನೆ ನಡೆಯುತ್ತಿದೆ ಎಂಬ ವಿಷಯವನ್ನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳಿಗೆ ‘ಕವರ್ ಸ್ಟೋರಿ’ ತಂಡ ತಿಳಿಸಿತು. ಆಗ ಕೂಡಲೇ ರಾಜ್ಯ ಮಾಪನ ಶಾಸ್ತ್ರ ಇಲಾಖೆ ನಿಯಂತ್ರಕ ಪಿ.ಆರ್. ಶಿವಪ್ರಸಾದ್ ಹಾಗೂ ಉಪ ನಿಯಂತ್ರಕ ಮಂಜುನಾಥ್ ಐದಾರು ತಂಡಗಳನ್ನು ರಚಿಸಿದರು. ಈ ತಂಡಗಳು ಅವೆನ್ಯೂ ರಸ್ತೆಯ ನಾನಾ ಅಂಗಡಿಗಳ ಮೇಲೆ ದಾಳಿ ಮಾಡಿ ಚೀನಾ ತೂಕದ ಯಂತ್ರಗಳನ್ನ ಜಪ್ತಿ ಮಾಡಿಕೊಂಡಿವೆ. ಅಲ್ಲದೇ ಅಕ್ರಮ ತೂಕ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ. ಇನ್ನು ಮುಂದಾದರೂ ತೂಕದ ಮೇಲೆ ಚೀನಾದ ಹಿಡಿತ ತಪ್ಪುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ವಿಜಯಲಕ್ಷ್ಮಿ ಶಿಬರೂರು

 

click me!