ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್‌ ಕಾನೂನು ರದ್ದು

By Web DeskFirst Published Feb 8, 2019, 9:59 AM IST
Highlights

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್‌ ಕಾನೂನು ರದ್ದು| ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್‌ ಘೋಷಣೆ

ನವದೆಹಲಿ[ಫೆ.08]:ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಎನ್‌ಡಿಎ ಸರ್ಕಾರ ತರುತ್ತಿರುವ ತ್ರಿವಳಿ ತಲಾಖ್‌ ಕಾನೂನನ್ನು ರದ್ದು ಮಾಡುತ್ತೇವೆ ಎಂದು ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಷ್ಮಿತಾ ದೇವ್‌ ಘೋಷಿಸಿದ್ದಾರೆ.

ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಸಮಾವೇಶದಲ್ಲಿ ಗುರುವಾರ ಮಾತನಾಡಿದ ಸುಷ್ಮಿತಾ, ‘ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಮಹಿಳೆಯರನ್ನು ಮುಸ್ಲಿಂ ಪುರುಷರ ವಿರುದ್ಧ ಎತ್ತಿಕಟ್ಟುವ ವಾತಾವರಣ ನಿರ್ಮಿಸಿದ್ದಾರೆ. ತ್ರಿವಳಿ ತಲಾಖನ್ನು ಶಿಕ್ಷಾರ್ಹ ಅಪರಾಧ ಮಾಡುವ ಹಿಂದೆ ಮೋದಿ ಅವರ ಈ ಹುನ್ನಾರ ಅಡಗಿದೆ’ ಎಂದು ಆರೋಪಿಸಿದರು.

‘ತ್ರಿವಳಿ ತಲಾಖ್‌ ಕಾನೂನಿನಿಂದ ಮಹಿಳಾ ಸಬಲೀಕರಣವಾಗಲಿದೆ ಎಂದು ಅನೇಕರು ಹೇಳಿದರು. ಆದರೆ ನಾವು ಇದನ್ನು ನಾವು ವಿರೋಧಿಸಿದೆವು. ಏಕೆಂದರೆ ಮುಸ್ಲಿಂ ಪುರುಷರನ್ನು ಬಂಧಿಸಿ ಜೈಲಿಗೆ ಹಾಕುವ ಯತ್ನದಲ್ಲಿ ಮೋದಿ ತೊಡಗಿದ್ದಾರೆ’ ಎಂದು ಕಿಡಿಕಾರಿದರು.

‘ಕೋಟ್ಯಂತರ ಮಹಿಳೆಯರು ಈ ಕಾನೂನನ್ನು ವಿರೋಧಿಸಿ ಪತ್ರ ಬರೆದಿದ್ದಾರೆ. ಅವರ ಧ್ವನಿಯಾಗಿ ಸಂಸತ್ತಿನಲ್ಲಿ ಕಾಂಗ್ರೆಸ್‌ ಪಕ್ಷ ನಿಂತಿತು. 2019ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್‌ ಕಾನೂನನ್ನು ರದ್ದುಗೊಳಿಸಲಿದೆ. ಆದರೆ ಮಹಿಳಾ ಸಬಲೀಕರಣದ ಯಾವುದೇ ಕಾನೂನಾಗಲಿ ಅದರ ಪರ ನಿಲ್ಲಲಿದೆ’ ಎಂದರು.

ತ್ರಿವಳಿ ತಲಾಖ್‌ ನೀಡಿದವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಮಸೂದೆಯು ಲೋಕಸಭೆಯಲ್ಲಿ ಪಾಸಾಗಿದ್ದರೂ, ರಾಜ್ಯಸಭೆಯಲ್ಲಿ ಬಹುಮತ ಇರದ ಕಾರಣ ನನೆಗುದಿಗೆ ಬಿದ್ದಿದೆ.

click me!