ವರುಣ್ ಗಾಂಧಿ ಸೆಳೆಯಲು ಕಾಂಗ್ರೆಸ್ ಯತ್ನ?

By Suvarna Web DeskFirst Published Jan 9, 2018, 2:44 PM IST
Highlights

ಸಂಜಯ್ ಮತ್ತು ಮೇನಕಾ ಗಾಂಧಿ ಪುತ್ರ ಉತ್ತರ ಪ್ರದೇಶದ  ಬಿಜೆಪಿ ಸಂಸದ ವರುಣ ಗಾಂಧಿಯನ್ನು ಕಾಂಗ್ರೆಸ್‌ನತ್ತ ಸೆಳೆಯಲು ರಾಹುಲ್ ಮತ್ತು ಪ್ರಿಯಾಂಕಾ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಯೂಥ್ ಕಾಂಗ್ರೆಸ್ ವಲಯದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.

ನವದೆಹಲಿ (ಜ.09): ಸಂಜಯ್ ಮತ್ತು ಮೇನಕಾ ಗಾಂಧಿ ಪುತ್ರ ಉತ್ತರ ಪ್ರದೇಶದ  ಬಿಜೆಪಿ ಸಂಸದ ವರುಣ ಗಾಂಧಿಯನ್ನು ಕಾಂಗ್ರೆಸ್‌ನತ್ತ ಸೆಳೆಯಲು ರಾಹುಲ್ ಮತ್ತು ಪ್ರಿಯಾಂಕಾ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಯೂಥ್ ಕಾಂಗ್ರೆಸ್ ವಲಯದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಪುನಶ್ಚೇತನ ನೀಡಲು ವರುಣ್ ಗಾಂಧಿ ಬರಬೇಕು ಎಂಬ ಪ್ರಯತ್ನ ನಡೆಯುತ್ತಿದೆಯಂತೆ. ಆದರೆ ಇಲ್ಲಿಯವರೆಗೆ ಪತ್ರಕರ್ತರು ಎಷ್ಟೇ ಕೇಳಿದರು ವರುಣ್  ಅಂತಹ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಪ್ರಿಯಾಂಕಾ ಮತ್ತು ವರುಣ್ ನಡುವೆ ಸಂಬಂಧ ಚೆನ್ನಾಗಿದೆಯಾದರೂ ಸೋನಿಯಾ ಮತ್ತು ಮೇನಕಾ ನಡುವೆ ಮಾತುಕತೆ ನಿಂತುಹೋಗಿ ದಶಕಗಳೇ ಕಳೆದಿವೆ. ಇಂದಿರಾ ಗಾಂಧಿ ಜೀವಂತವಿದ್ದಾಗಲೇ ರಾತ್ರೋರಾತ್ರಿ ಮನೆ ಬಿಟ್ಟು ಹೋಗಿದ್ದ ಮೇನಕಾ ಗಾಂಧಿ, ನಂತರ ನಡೆಸಿದ್ದು ಕಾಂಗ್ರೆಸ್ ವಿರೋಧಿ ರಾಜಕಾರಣವೇ. ಆದರೆ ನರೇಂದ್ರ ಮೋದಿ ಮತ್ತು ಅಮಿತ್  ಶಾ ಜೊತೆಗೆ ವರುಣ್ ಗಾಂಧಿ ಸಂಬಂಧ ಅಷ್ಟಕಷ್ಟೇ. ಆ ಕಾರಣದಿಂದ ವರುಣ್‌'ರನ್ನು ಪಕ್ಷಕ್ಕೆ ಕರೆದುಕೊಂಡು ಬನ್ನಿ ಎಂದು ಕೆಲ ಉತ್ತರ ಪ್ರದೇಶದ ನಾಯಕರು ಸಲಹೆ ನೀಡುತ್ತಿದ್ದಾರೆ. ಆದರೆ ಗಾಂಧಿ ಪರಿವಾರದಲ್ಲಿ ಇನ್ನೊಬ್ಬ ಗಾಂಧಿಯನ್ನು ಹಾಗೆ ಒಳಗೆ ಕರೆದುಕೊಂಡು  ಬಂದು ನಿಭಾಯಿಸುವುದು ಕಷ್ಟದ ಕೆಲಸ ಬಿಡಿ.

 

ಇಂಡಿಯಾ ಗೇಟ್ ನ ಆಯ್ದ ಭಾಗಗಳು, ಪ್ರಶಾಂತ್ ನಾತು

 

click me!