
ಬೆಂಗಳೂರು : ವಿಧಾನಸೌಧದಲ್ಲಿ ಸಚಿವ ಪುಟ್ಟರಂಗ ಶೆಟ್ಟಿಅವರ ಆಪ್ತ ಸಹಾಯಕನ ಬಳಿ 26 ಲಕ್ಷ ರು. ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರ ಬೆನ್ನಿಗೆ ಕಾಂಗ್ರೆಸ್ ಪಕ್ಷ ನಿಂತಿದೆ.
‘ಈ ಪ್ರಕರಣದಲ್ಲಿ ಹಣ ಪತ್ತೆಯಾಗಿರುವುದು ಒಬ್ಬ ಸಿಬ್ಬಂದಿ ಬಳಿ. ಈ ಬಗ್ಗೆ ತನಿಖೆಯಾಗಲಿ. ಆದರೆ, ಪ್ರಕರಣಕ್ಕೆ ಸಂಬಂಧವೇ ಇಲ್ಲದ ಪುಟ್ಟರಂಗಶೆಟ್ಟಿಅವರು ರಾಜೀನಾಮೆ ಪಡೆಯುವುದು ಸಾಧ್ಯವೇ ಇಲ್ಲ’ ಎಂದು ಸ್ಪಷ್ಟಪಡಿಸಿದೆ.
ಪುಟ್ಟರಂಗಶೆಟ್ಟಿಪರವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ಶನಿವಾರ ಪ್ರತ್ಯೇಕ ಹೇಳಿಕೆ ನೀಡಿದ್ದು, ಸಿಬ್ಬಂದಿಯೊಬ್ಬರಿಂದ ಹಣ ವಶ ಪಡೆಯಲಾಗಿದೆ. ಆದರೆ, ಈ ಹಣ ಕೊಟ್ಟಿದ್ದು ಯಾರು, ಯಾರಿಗೆ ನೀಡಲು ತಂದಿದ್ದರು ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ನಡೆಯಬೇಕು. ನೇರವಾಗಿ ಸಚಿವರನ್ನೇ ಆರೋಪಕ್ಕೆ ಗುರಿಮಾಡುವುದು ಸರಿಯಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಪುಟಗೋಸಿ ಮೊತ್ತ- ದಿನೇಶ್!: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಫೇಲ್ ಯುದ್ಧ ವಿಮಾನದ 33 ಸಾವಿರ ಕೋಟಿ ರು. ಹಗರಣವನ್ನೇ ಪ್ರಧಾನಮಂತ್ರಿ ನರೇಂದ್ರ ಮೋದಿ ತನಿಖೆಗೆ ಕೊಡಲಿಲ್ಲ. ಜಂಟಿ ಸಂಸದೀಯ ತನಿಖೆಗೆ ನೀಡುವಂತೆ ಆಗ್ರಹಿಸಿದರೂ ನರೇಂದ್ರ ಮೋದಿ ಸೊಪ್ಪು ಹಾಕಲಿಲ್ಲ. ಇನ್ನು ಪುಟ್ಟರಂಗಶೆಟ್ಟಿಅವರ ಮೇಲಿನ 25 ಲಕ್ಷದ ಆರೋಪ ಯಾವ ಪುಟಗೋಸಿ?’ ಎಂದು ಪ್ರಶ್ನಿಸಿದ್ದಾರೆ.
‘ವಿಧಾನಸೌಧದಲ್ಲಿ ಹಣದೊಂದಿಗೆ ಸಚಿವ ಪುಟ್ಟರಂಗಶೆಟ್ಟಿಅವರ ಸಿಬ್ಬಂದಿ ಒಬ್ಬರನ್ನು ಹಿಡಿದಿದ್ದಾರೆ. ಆ ಹಣ ಯಾರದು ಎಂಬುದನ್ನು ಸಿಬ್ಬಂದಿಯೇ ಹೇಳಬೇಕು. ಯಾರ ದುಡ್ಡು, ಯಾರಿಗೆ ಕೊಡಲು ತಂದಿದ್ದರು ಎಂಬ ಬಗ್ಗೆ ಸಮಗ್ರ ತನಿಖೆ ಆಗಬೇಕು. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಇದಕ್ಕೂ ಮೊದಲೇ ಆರೋಪ ಮಾಡುವುದು ಸರಿಯಲ್ಲ. ಕೆಪಿಸಿಸಿ ಕಚೇರಿಯಲ್ಲಿ ಸಾಕಷ್ಟುಮಂದಿ ಸಿಬ್ಬಂದಿ ಇದ್ದಾರೆ. ಯಾವ ಸಿಬ್ಬಂದಿ ಬಳಿಯಾದರೂ ಹಣ ದೊರತರೆ ಕೆಪಿಸಿಸಿ ಅಧ್ಯಕ್ಷನಾದ ನಾನು ಹೇಗೆ ಜವಾಬ್ದಾರನಾಗುತ್ತೇನೆ’ ಎಂದು ಪ್ರಶ್ನಿಸಿದರು.
‘ಮೊದಲು ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಲಿ. ಹಣ ಯಾರದು ಎಂಬುದನ್ನು ಮೊದಲು ಪತ್ತೆ ಹಚ್ಚಲಿ. ತನಿಖೆಯಾಗದೆ ಯಾರೋ ಒಬ್ಬರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ಒಂದು ವೇಳೆ ನಮ್ಮ ಪಕ್ಷದವರು ತಪ್ಪಿತಸ್ಥರು ಎಂದು ಸಾಬೀತಾದರೆ ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
‘ಜತೆಗೆ ವಿರೋಧಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಹಾಗೂ ಕೆ.ಎಸ್. ಈಶ್ವರಪ್ಪ ಅವರ ಆಪ್ತ ಸಹಾಯಕ ಏನೇನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪ ರಾಜೀನಾಮೆ ಕೊಟ್ಟರೇ?’ ಎಂದು ಪ್ರಶ್ನೆ ಮಾಡಿದರು.
ರಾಜೀನಾಮೆ ಇಲ್ಲ- ಖಂಡ್ರೆ: ಕೆಪಿಸಿಸಿ ಅಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ವಿಧಾನಸೌಧದಲ್ಲಿ ಸಚಿವ ಪುಟ್ಟರಂಗಶೆಟ್ಟಿಅವರ ಸಿಬ್ಬಂದಿ ಬಳಿ 25 ಲಕ್ಷ ಹಣ ದೊರೆತಿದೆ ಎನ್ನುವ ಮಾಹಿತಿ ಮಾಧ್ಯಮಗಳಲ್ಲಿ ನೋಡಿದ್ದೇನೆ.
ಪುಟ್ಟರಂಗಶೆಟ್ಟಿಅವರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಪ್ರಕರಣದಲ್ಲಿ ಕಂಡು ಬಂದಿಲ್ಲ. ಹೀಗಾಗಿ ಪುಟ್ಟರಂಗಶೆಟ್ಟಿರಾಜೀನಾಮೆ ಕೇಳುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ತನಿಖೆಯಾಗಲಿ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.