ಮೋದಿ ಮೇಲೆ ಕಾಂಗ್ರೆಸ್ ಸಿಬಿಐ ದಾಳಿ

By Web DeskFirst Published Oct 26, 2018, 10:28 AM IST
Highlights

ರಾತ್ರೋ ರಾತ್ರಿ ಸಿಬಿಐ ನಲ್ಲಿ ಮೇಜರ್ ಸರ್ಜರಿಯಾಗಿದ್ದು, ಕೇಂದ್ರ ಸರ್ಕಾರದ ಕ್ರಮ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದ್ದಾರೆ. 

ನವದೆಹಲಿ: ಬಹಿರಂಗವಾಗಿ ಕಿತ್ತಾಟಕ್ಕೆ ಇಳಿದಿದ್ದ ಸಿಬಿಐನ  ಮುಖ್ಯಸ್ಥ ಹಾಗೂ ಉಪಮುಖ್ಯಸ್ಥರನ್ನು ರಾತ್ರೋರಾತ್ರಿ ರಜೆ ಮೇಲೆ ಕಳುಹಿಸಿದ ಕೇಂದ್ರ ಸರ್ಕಾರದ ಕ್ರಮ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ವಿಚಾರವನ್ನು ಕೈಗೆತ್ತಿಕೊಂಡಿರುವ ಕಾಂಗ್ರೆಸ್, ಸಿಬಿಐ ಮುಖ್ಯಸ್ಥರ ವಿರುದ್ಧ ಕೇಂದ್ರ ಸರ್ಕಾರ ನಡೆಸಿದ ರಾತ್ರಿ ಆಪರೇಷನ್ ಅನ್ನು ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದ ಜತೆ ತಳಕು ಹಾಕಲು ಯತ್ನಿಸಿದೆ.

ಕೇಂದ್ರ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ಎತ್ತಿಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದೇ ವೇಳೆ, ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಅವರನ್ನು ರಜೆ ಮೇಲೆ ಕಳುಹಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು, ಸಿಬಿಐನ ಪ್ರತಿಷ್ಠೆಯನ್ನು ನಾಶಪಡಿಸಿದ ಕಾರಣಕ್ಕಾಗಿ ಪ್ರಧಾನಿ ಕ್ಷಮೆ ಯಾಚಿಸಬೇಕು ಎಂಬ ಆಗ್ರಹದೊಂದಿಗೆ ದೇಶಾದ್ಯಂತ ಸಿಬಿಐ ಕಚೇರಿಗಳ ಹೊರಭಾಗದಲ್ಲಿ ಶುಕ್ರವಾರ ಪ್ರತಿಭಟನೆಗೆ ಕಾಂಗ್ರೆಸ್ ಕರೆ ಕೊಟ್ಟಿದೆ. ರಫೇಲ್ ಖರೀದಿ ಒಪ್ಪಂದ ಕುರಿತ ತನಿಖೆ ಆರಂಭಿಸಲಿದ್ದ ಕಾರಣಕ್ಕಾಗಿಯೇ ಸಿಬಿಐ ನಿರ್ದೇಶಕರ ವಿರುದ್ಧ ಸರ್ಕಾರ ಕ್ರಮ ಜರುಗಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೂಷಿಸಿದ್ಧಾರೆ.

ಖರ್ಗೆ ಗರಂ: ಸಿಬಿಐ ನಿರ್ದೇಶಕರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದ್ದರ ಕುರಿತು ಪ್ರಧಾನಿ ಅವರಿಗೆ ಮೂರು ಪುಟಗಳ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ಸಿಬಿಐ ನಿರ್ದೇಶಕರನ್ನು ಹುದ್ದೆಯಿಂದ ತೆಗೆದುಹಾಕುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ಹಾಗೆಯೇ ಅಂತಹ ಕ್ರಮ ಜರುಗಿಸಲು ಶಿಫಾರಸು ಮಾಡುವ ಅಧಿಕಾರ ಕೇಂದ್ರೀಯ ವಿಚಕ್ಷಣ ಆಯೋಗಕ್ಕೂ ಇಲ್ಲ. ಸಿಬಿಐ ನಿರ್ದೇಶಕರ ವರ್ಗಾವಣೆಗೆ ಮೇಲ್ನೋಟಕ್ಕೆ ಯಾವುದೇ ಅಂಶಗಳೂ ಕಾಣುತ್ತಿಲ್ಲ. 

ಆತುರಾತುರವಾಗಿ ಈ ಕ್ರಮ ಜರುಗಿಸಿದ್ದಕ್ಕೆ ಸಿಬಿಐ ವಿಶೇಷ ನಿರ್ದೇಶಕರು ಎತ್ತಿಕೊಳ್ಳಲಿರುವ ಪ್ರಕರಣಗಳು ಹಾಗೂ ಇತರೆ ಪ್ರಕರಣಗಳಿಂದ ಸರ್ಕಾರಕ್ಕೆ ಉಂಟಾಗಬಹುದಿದ್ದ ಮುಜುಗರ ಕಾರಣ ಎಂದು ಆರೋಪಿಸಿದ್ದಾರೆ. ಈ ನಡುವೆ ಗುರುವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಖರ್ಗೆ, ಸರ್ವೋಚ್ಚ ನಾಯಕ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುವಂತಾಗಿದೆ ಎಂದು ಮೋದಿ ಹೆಸರೆತ್ತದೇ ವ್ಯಂಗ್ಯವಾಡಿದರು. ಸಿಬಿಐ ಮುಖ್ಯಸ್ಥರನ್ನು ತಡರಾತ್ರಿ 2 ಗಂಟೆ ವೇಳೆ ವಜಾಗೊಳಿಸಲಾಗಿದೆ. ಅದೇ ವ್ಯಕ್ತಿಯ ಮೇಲೆ ನಿಗಾ ಇಡಲಾಗಿದೆ. ನೆಲದ ಕಾನೂನನ್ನು ಬುಡಮೇಲು ಮಾಡಲು ತನಿಖಾ ಸಂಸ್ಥೆಗಳನ್ನು ಸ್ವೇಚ್ಛಾಚಾರದಿಂದ ಬಳಸಿಕೊಳ್ಳಲಾಗುತ್ತಿದೆ.

ತನ್ಮೂಲಕ ರಫೇಲ್ ಡೀಲ್‌ನ ವ್ಯಾಪಕ ಭ್ರಷ್ಟಾಚಾರ ಬಯಲಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ದೂಷಿಸಿದರು. ವರ್ಮಾ ಅವರನ್ನು ಆಯ್ಕೆ ಸಮಿತಿಯ ಅನುಮತಿಯನ್ನೇ ಪಡೆಯದೇ ಹುದ್ದೆಯಿಂದ ತೆಗೆದುಹಾಕಿದ್ದು ಏಕೆ? ತಡರಾತ್ರಿ 2 ಗಂಟೆಗೆ ಹಂಗಾಮಿ ಮುಖ್ಯಸ್ಥರನ್ನು ನೇಮಿಸಿದ್ದು ಏಕೆ? ಈ ನಡವಳಿಕೆ ಸಂವಿಧಾನಿಕ ನಿಯಮ ಹಾಗೂ ಕಾನೂನುಗಳಿಗೆ ಘಾಸಿಗೊಳಿಸಿದಂತೆ ಎಲ್ಲವೇ ಎಂದು ಕೇಳಿದರು.

click me!