100 ಕ್ಕೂ ಹೆಚ್ಚು ಜನರ ಹತ್ಯೆಗೆ ಕಾರಣವಾಯ್ತಾ ಕಾಂಗ್ರೆಸ್?

By Web DeskFirst Published Oct 24, 2018, 10:57 AM IST
Highlights

ಅಮೃತಸರ ರೈಲು ದುರಂತಕ್ಕೆ ಕಾರಣವಾಯ್ತಾ ಕಾಂಗ್ರೆಸ್? | ಕೋಮುಸೌಹಾರ್ದತೆಯನ್ನು ಕದಡಲು ಸೃಷ್ಟಿಯಾದ ಸುಳ್ಳು ಕಥೆಯಾ ಇದು? ಏನಿದರ ಅಸಲಿಯತ್ತು? 

ಪಂಜಾಬ್ (ಅ. 24): ಅಮೃತಸರದಲ್ಲಿ ದಸರಾ ಆಚರಣೆ ವೇಳೆ ರಾವಣದಹನ ಕಾರ್ಯಕ್ರದಲ್ಲಿ ಜನರು ಭಾಗಿಯಾಗಿದ್ದ ಸಂದರ್ಭದಲ್ಲಿ ರೈಲಿಗೆ ಸಿಲುಕಿ 61 ಜನರು ಸಾವಿಗೀಡಾಗಿದ್ದರು. ಅನಂತರದಲ್ಲಿ ಈ ದುರಂತದ ಬಗ್ಗೆ ಕೋಮುಸೌಹಾರ್ದತೆ ಕದಡುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಅದರಲ್ಲಿ ‘ ಅಮೃತಸರದಲ್ಲಿ ರೈಲು ಹತ್ತಿಸಿ 100 ಕ್ಕೂ ಹೆಚ್ಚು ಜನರ ಹತ್ಯೆಗೆ ಕಾರಣವಾದ ರೈಲಿನ ಚಾಲಕನ ಹೆಸರು ಇಮ್ತಿಯಾಜ್ ಅಲಿ’ ಎಂದಿದೆ. ಅನಂತರದಲ್ಲಿ ಫೇಸ್‌ಬುಕ್, ಟ್ವೀಟರ್, ವಾಟ್ಸ್ ಆ್ಯಪ್‌ಗಳಲ್ಲಿ ಅಮೃತಸರ ದುರಂತಕ್ಕೆ ಕೋಮು ಬಣ್ಣ ಬಳಿಯುವ ಸಂದೇಶಗಳು ವೈರಲ್ ಆಗಿವೆ.ಟ್ವೀಟರ್‌ನಲ್ಲಿ ಕೆಲವರು, ‘250ಕ್ಕಿಂತಲೂ ಹೆಚ್ಚು ಮಂದಿ ಯನ್ನು ಬಲಿ ಪಡೆದ ರೈಲಿನ ಚಾಲಕನ ಹೆಸರು ಇಮ್ತಿಯಾಜ್ ಖಾನ್. ಇನ್ನುಳಿದಿರುವುದು ನಿಮಗೇ ಅರ್ಥವಾಗುತ್ತದೆ. ಇದೊಂದು ಅಪಘಾತವಲ್ಲ, ಸಾಮೂಹಿಕ ಹತ್ಯೆ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಜೊತೆಗೆ ರಸ್ತೆಯಲ್ಲಿದ್ದ ಜನರನ್ನು ರೈಲು ಹಳಿಯಲ್ಲಿ ನಿಲ್ಲಿಸಿದ್ದು ಕಾಂಗ್ರೆಸ್ ಎಂದು ಕೂಡ ಹೇಳಲಾಗಿದೆ. ‘ಬಿಜೆಪಿ ಸಪೋರ್ಟರ್’, ‘ಇಂಡಿಯಾ ಫಸ್ಟ್, ‘ಪ್ರೌಡ್ ಇಂಡಿಯನ್’ ಇತ್ಯಾದಿ ಪೇಜ್‌ಗಳು ಇದನ್ನು ಪೋಸ್ಟ್ ಮಾಡಿವೆ. ಆದರೆ ನಿಜಕ್ಕೂ ದುರಂತಕ್ಕೆ ಕಾರಣವಾದ ರೈಲಿನ ಚಾಲಕ ಮುಸ್ಲಿಂ ವ್ಯಕ್ತಿಯೇ, ಅತನ ಹೆಸರು ಇಮ್ತಿಯಾಜ್ ಎಂದೇ ಎಂದು ಆಲ್ಟ್ ನ್ಯೂಸ್ ಪತ್ತೆ ಹಚ್ಚಿದ್ದು, ಇದು ಕೇವಲ ವದಂತಿ ಎಂಬುದು ಸಾಬೀತಾಗಿದೆ.

ವಾಸ್ತವ ಏನೆಂದರೆ ದುರಂತ ನಡೆದ ರೈಲಿನ ಚಾಲಕನ ಹೆಸರು ಅರವಿಂದ್ ಕುಮಾರ್. ರೈಲ್ವೆ ಆಡಳಿತ ಮಂಡಳಿಗೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ ಚಾಲಕನ ಹೆಸರು ಅರವಿಂದ್ ಕುಮಾರ್ ಎಂದಿದೆ. ಹಾಗಾಗಿ ಈ ಸುದ್ದಿ ಕೋಮುಸೌಹಾರ್ದತೆಯನ್ನು ಕದಡಲು ಸೃಷ್ಟಿಯಾದ ಸುಳ್ಳು ಸಂದೇಶ ಎಂಬುದು ಸ್ಪಷ್ಟ. 

-ವೈರಲ್ ಚೆಕ್ 


 

click me!