ಯೋಧನ ಅಂತ್ಯ ಸಂಸ್ಕಾರಕ್ಕೂ ಮುನ್ನ ಪತ್ನಿಗೆ ಹೆಣ್ಣು ಮಗು ಜನನ

By Web DeskFirst Published Oct 24, 2018, 10:01 AM IST
Highlights

ಯೋಧನ ಅಂತ್ಯ ಸಂಸ್ಕಾರಕ್ಕೂ ಮುನ್ನ ಪತ್ನಿಗೆ ಹೆಣ್ಣು ಮಗು ಜನನ  | ಮಗುವಿನ ಸಮೇತ ಅಂತ್ಯ ಸಂಸ್ಕಾರಕ್ಕೆ ಬಂದು ದರ್ಶನ ಪಡೆದ ಪತ್ನಿ 

ಬನಿಹಾಲ್/ಜಮ್ಮು (ಅ. 24): ಶೀಘ್ರ ಮೊದಲ ಮಗುವಿಗೆ ಜನ್ಮ ನೀಡಲಿರುವ ಪತ್ನಿಯ ಜೊತೆಗಿರುವ ಆಸೆ ಲ್ಯಾನ್ಸ್ ನಾಯಕ್ ರಂಜೀತ್ ಸಿಂಗ್‌ರದ್ದಾಗಿತ್ತು. ಅದಕ್ಕೆಂದೇ ರಜೆ ಪಡೆದು ಊರಿಗೆ ಬರಲೂ ಸಿಂಗ್ ಸಜ್ಜಾಗಿದ್ದರು. ಆದರೆ ವಿಧಿ ಬೇರೆಯೇ ಆಟ ಆಡಿತ್ತು.

ಮೂರು ದಿನಗಳ ಹಿಂದೆ ಪಾಕಿಸ್ತಾನ ಬೆಂಬಲಿತ ಉಗ್ರರು ನಡೆಸಿದ ದಾಳಿಯಲ್ಲಿ ರಂಜೀತ್ ಕೊನೆಯುಸಿರೆಳೆದಿದ್ದರು. ದೇಶ ಸೇವೆ ವೇಳೆ ಪ್ರಾಣಾರ್ಪಣೆ ಮಾಡಿದ ಯೋಧ ರಂಜೀತ್‌ರಿಗೆ ಸಕಲ ಮಿಲಿಟರಿ ಗೌರವ ಸಲ್ಲಿಸಿ, ಸೋಮವಾರ ಸಂಜೆಯಷ್ಟೇ ಅವರ ದೇಹವನ್ನು ಅವರ ಹುಟ್ಟೂರಾದ ಜಮ್ಮು ಮತ್ತು ಕಾಶ್ಮೀರದ ಸುಲಿಗಾಂಗೆ ತರಲಾಗಿತ್ತು. ಆದರೆ ಕಾರಣಾಂತರದಿಂದಾಗಿ ಸೋಮವಾರ ಅಂತ್ಯಸಂಸ್ಕಾರ ನಡೆಸಿರಲಿಲ್ಲ. ಮಂಗಳವಾರ ಬೆಳಗ್ಗೆ ಅಂತ್ಯಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ನಡೆಸಲಾಗಿತ್ತು.

ಈ ನಡುವೆ ರಂಜೀತ್‌ರ ಪತ್ನಿ ಶಿಮೂ ದೇವಿಗೆ ಸೋಮವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡು, ಬೆಳಗಿನ ಜಾವ 5 ಗಂಟೆ ವೇಳೆಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ವಿವಾಹದ 10 ವರ್ಷ ಬಳಿಕ ಜನಿಸುತ್ತಿರುವ ಮಗುವನ್ನು ನೋಡುವ ಭಾಗ್ಯ ರಂಜೀತ್‌ಗೆ ಇರಲಿಲ್ಲ.

ಇದರ ಹೊರತಾಗಿಯೂ ಆಗಿನ್ನೂ ಮಗು ಹೆತ್ತ ಶಿಮೂ ದೇವಿ ಮತ್ತು ಆಕೆಯ ಕಂದನನ್ನು, ಮಂಗಳವಾರ ರಂಜೀತ್‌ರ ಅಂತ್ಯಸಂಸ್ಕಾರ ನಡೆಯುವ ಜಾಗಕ್ಕೆ ಕರೆತಂದು, ಅಂತಿಮ ದರ್ಶನ ಮಾಡಿಸಲಾಯಿತು. ಈ ವೇಳೆ ಮಾತನಾಡಿದ ಶಿಮೂ ದೇವಿ, ತನ್ನ ಮಗಳು ಕೂಡಾ ತಂದೆಯಂತೆಯೇ ಸೇನೆ ಸೇರಿ ದೇಶ ಸೇವೆ ಮಾಡಲಿ ಎಂದು ಹಾರೈಸಿದ್ದಾಳೆ. 



 

click me!