
ಬೆಂಗಳೂರು : ಯುಪಿಎ ಸರ್ಕಾರದ ವಿರುದ್ಧದ ಭ್ರಷ್ಟಾಚಾರ, ಹಗರಣ ಆರೋಪಗಳನ್ನು ಜನರ ಮುಂದೆ ಮಂಡಿಸಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದಿದ್ದು ಇತಿಹಾಸ. ಈಗ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸುತ್ತಿರುವ ಕಾಂಗ್ರೆಸ್, ನಾಲ್ಕೂವರೆ ವರ್ಷಗಳ ಹಿಂದೆ ಬಿಜೆಪಿ ಅನುಸರಿಸಿದ್ದ ತಂತ್ರಗಾರಿಕೆಗೆ ಶರಣಾಗಿದೆ.
ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿನ ಬ್ಯಾಂಕ್ ಹಗರಣ, ರಫೇಲ್ ಡೀಲ್, ಅಸ್ಸಾಂ ನಾಗರಿಕ ನೋಂದಣಿ ವಿವಾದ ಹಾಗೂ ಆರ್ಥಿಕತೆಯ ‘ಕರಾಳ’ ಸ್ಥಿತಿಯನ್ನು ಜನರಿಗೆ ಮಂಡಿಸಲು ಜನಾಂದೋಲನ ಹಮ್ಮಿಕೊಳ್ಳಲು ಮುಂದಾಗಿದೆ. ಶನಿವಾರ ನಡೆದ ಕಾಂಗ್ರೆಸ್ಸಿನ ಪರಮೋಚ್ಚ ನೀತಿ ನಿರೂಪಣಾ ಸಮಿತಿಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ) ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
ಮೋದಿ ಸರ್ಕಾರದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳನ್ನು ಸಂಸತ್ತಿನ ಒಳಗೆ ಹಾಗೂ ಹೊರಗೆ ಪ್ರಬಲವಾಗಿ ಪ್ರಸ್ತಾಪಿಸಲು ಉದ್ದೇಶಿಸಲಾಗಿದೆ. ರಾಜ್ಯ ಘಟಕಗಳು ಹಾಗೂ ನಾಯಕರ ಜತೆ ಮುಂಬರುವ ದಿನಗಳಲ್ಲಿ ಚರ್ಚಿಸಿ ಜನಾಂದೋಲನ ರೂಪಿಸಲಾಗುತ್ತದೆ ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಸುದ್ದಿಗಾರರಿಗೆ ತಿಳಿಸಿದರು.
ರಾಹುಲ್ ಅವರು ಪಕ್ಷದ ನಾಯಕತ್ವ ಹೊತ್ತುಕೊಂಡ ಮೇಲೆ ನಡೆದ ಎರಡನೇ ಸಭೆ ಇದಾಗಿತ್ತು. ಮಾಜಿ ಪ್ರಧಾನಿ ಮನಮೋಹನ ಸಿಂಗ್, ಎ.ಕೆ. ಆ್ಯಂಟನಿ, ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಅಹಮದ್ ಪಟೇಲ್ ಹಾಗೂ ಅಶೋಕ್ ಗೆಹ್ಲೋಟ್ ಅವರು ಪಾಲ್ಗೊಂಡಿದ್ದರು. ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಗೈರು ಹಾಜರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.