ವಿಶ್ವಾಸಮತದ ವೇಳೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ: ರಾಮಲಿಂಗಾರೆಡ್ಡಿ

By Web DeskFirst Published Jul 17, 2019, 8:31 AM IST
Highlights

ವಿಶ್ವಾಸಮತದ ವೇಳೆ ನನ್ನ ನಿರ್ಧಾರ ಪ್ರಕಟಿಸುತ್ತೇನೆ: ರಾಮಲಿಂಗಾರೆಡ್ಡಿ| ‘ಅತೃಪ್ತ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿಲ್ಲ’

 ಬೆಂಗಳೂರು[ಜು.17]: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವ ವೇಳೆ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ರೆಬೆಲ್‌ ಶಾಸಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಸ್ಥಾನಮಾನಕ್ಕೋಸ್ಕರ ರಾಜೀನಾಮೆ ನೀಡಿಲ್ಲ. ಪಕ್ಷದ ಆಂತರಿಕ ವಿಚಾರಕ್ಕಾಗಿ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ವಾಪಸ್‌ ಪಡೆಯಬೇಕೇ, ಬೇಡವೇ ಎಂಬ ನನ್ನ ನಿರ್ಧಾರವನ್ನು ಗುರುವಾರ ವಿಶ್ವಾಸಮತ ಯಾಚನೆ ವೇಳೆಯೇ ಪ್ರಕಟಿಸುತ್ತೇನೆ. ಮುಖ್ಯಮಂತ್ರಿ ವಿಶ್ವಾಸ ಮತಯಾಚನೆ ಮಾಡುತ್ತಿರುವುದರಿಂದ ಸದನಕ್ಕೆ ಹೋಗಲೇಬೇಕಲ್ಲ ಎಂದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅತೃಪ್ತ ಶಾಸಕರು ನಿಮ್ಮನ್ನೇ ತಮ್ಮ ನಾಯಕರು ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಅತೃಪ್ತರು ನನ್ನ ಮೇಲಿನ ಗೌರವಕ್ಕೆ ಆ ರೀತಿ ಹೇಳಿರಬಹುದು. ಆದರೆ, ಅವರಾರ‍ಯರೂ ನನ್ನ ಸಂಪರ್ಕದಲ್ಲಿಲ್ಲ. ನಾನು ಅವರೊಂದಿಗೆ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಸೋಮವಾರ ಸದನಕ್ಕೆ ಹಾಗೂ ಸ್ಪೀಕರ್‌ ಅವರ ಮುಂದೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಹೋದಾಗ ಆಸ್ಪತ್ರೆಯಿಂದ ಬರುವುದು ತಡವಾಗಿ ವಿಚಾರಣೆಗೆ ಹೋಗಲು ಆಗಲಿಲ್ಲ. ಈ ವಿಚಾರವನ್ನು ಸ್ಪೀಕರ್‌ ಗಮನಕ್ಕೆ ತಂದಿದ್ದೇನೆ. ಅವರು ನಿಮಗೆ ಅನುಕೂಲವಾದ ಸಮಯಕ್ಕೆ ಬನ್ನಿ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ವಿಚಾರಣೆಗೆ ಹೋಗುತ್ತೇನೆ ಎಂದರು.

click me!