ಉಪ್ಪು ತಿಂದವರು ನೀರು ಕುಡಿಯಲೇಬೇಕು : ಜಮೀರ್‌

By Kannadaprabha NewsFirst Published Jul 17, 2019, 8:04 AM IST
Highlights

ಉಪ್ಪು ತಿಂದವರು ನೀರು ಕುಡಿಯಲೇಬೇಕು ಹೀಗೆಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. ಈ ಮಾತು ಯಾರಿಗೆ ಅನ್ವಯಿಸುತ್ತೆ?

ಬೆಂಗಳೂರು [ಜು.17] :  ಐಎಂಎ ವಂಚನೆ ಪ್ರಕರಣದಲ್ಲಿ ಶಾಸಕ ಆರ್‌.ರೋಷನ್‌ ಬೇಗ್‌ ಅವರನ್ನು ಎಸ್‌ಐಟಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಬಗ್ಗೆ ಸಚಿವ ಜಮೀರ್‌ ಅಹಮದ್‌ ನೀಡಿರುವ ಪ್ರತಿಕ್ರಿಯೆಯಿದು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್‌ ಅಹ್ಮದ್‌, ಐಎಂಎ ಮಾಲಿಕ ಮನ್ಸೂರ್‌ ಅಲಿಖಾನ್‌ ಅವರು ಶಾಸಕ ರೋಷನ್‌ ಬೇಗ್‌ಗೆ 400 ಕೋಟಿ ರು. ನೀಡಿರುವುದಾಗಿ ತಿಳಿಸಿದ್ದಾರೆ. ಇದಲ್ಲದೆ, ಇನ್ನೂ ಹಲವು ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಉಪ್ಪು ತಿಂದವರು ನೀರು ಕುಡಿಯಲೇಬೇಕಾಗುತ್ತದೆ ಎಂದರು.

ನಾನು ಐಎಂಎ ಸಂಸ್ಥೆಗೆ ನನ್ನ ಆಸ್ತಿ ಮಾರಾಟ ಮಾಡಿದ್ದೇನೆ. ನನ್ನನ್ನೂ ಎಸ್‌ಐಟಿ ವಿಚಾರಣೆಗೆ ಕರೆಯಬಹುದು. ನೋಟಿಸ್‌ ಕೊಟ್ಟರೆ ವಿಚಾರಣೆಗೆ ಹೋಗುತ್ತೇನೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. 

ರೋಷನ್‌ ಬೇಗ್‌ ಮುಸ್ಲಿಂ ಸಮುದಾಯದ ಹಿರಿಯ ಮುಖಂಡ. ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದ ಅವರನ್ನು ಬಿಜೆಪಿ ನಾಯಕ ಯಡಿಯೂರಪ್ಪ ಅವರ ಆಪ್ತ ಸಂತೋಷ್‌ ಮತ್ತು ಶಾಸಕ ಯೋಗೇಶ್ವರ್‌ ಅವರೊಂದಿಗೆ ನೋಡಿ ನನಗೂ ಆಶ್ಚರ್ಯವಾಯಿತು. ಬಹುಶಃ ಬಿಜೆಪಿ ನಾಯಕರು ಬೇಗ್‌ ಅವರಿಗೆ ಆಮಿಷವೊಡ್ಡಲು ಬಂದಿದ್ದರೋ ಏನೋ ನನಗೆ ಗೊತ್ತಿಲ್ಲ ಎಂದರು.

click me!