ಸರ್ಕಾರದ ವಿರುದ್ಧ ಕಾಂಗ್ರೆಸಿಗರು ಗರಂ : ರೆಬೆಲ್ ಆದ ಮುಖಂಡರು

By Web DeskFirst Published Nov 28, 2018, 8:30 AM IST
Highlights

ಕರ್ನಾಟಕದ ಸಮ್ಮಿಶ್ರ ಸರ್ಕಾರದ ವಿರುದ್ಧ ಅನೇಕ ಕಾಂಗ್ರೆಸ್ ಮುಖಂಡರು ಇದೀಗ ಗರಂ ಆಗಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರ ಮಾತುಗಳಿಗೆ ಬೆಲೆ ಸಿಗುತ್ತಿಲ್ಲ ಎಂದು ಪಕ್ಷದ ಕೆಲ ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. 

ಬೆಂಗಳೂರು : ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರ ಮಾತುಗಳಿಗೆ ಬೆಲೆ ಸಿಗುತ್ತಿಲ್ಲ ಎಂದು ಪಕ್ಷದ ಕೆಲ ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಮಂಗಳವಾರ ದೂರು ನೀಡಿದ್ದಾರೆ. 

ಅಲ್ಲದೆ, ಕೂಡಲೇ ಸಮನ್ವಯ ಸಮಿತಿ ಸಭೆ ನಡೆಸಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಬಗ್ಗೆ ತಾರತಮ್ಯ ಮಾಡದಂತೆ ಮಿತ್ರಪಕ್ಷಕ್ಕೆ ಸೂಚಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಮಂಗಳವಾರ ನಗರದಲ್ಲಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್, ಮಾಲೂರು ಶಾಸಕ ನಂಜೇಗೌಡ, ಹೊಸ ಕೋಟೆ ಶಾಸಕ ಎಂಟಿಬಿ ನಾಗರಾಜ್, ಮಾಜಿ ಶಾಸಕರಾದ ಎ.ಮಂಜು, ನರೇಂದ್ರಸ್ವಾಮಿ, ಸುಬ್ಬಾರೆಡ್ಡಿ ಮತ್ತಿತರರು ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರ ಮಾತುಗಳಿಗೆ ಬೆಲೆ ಇಲ್ಲದಂತಾಗಿದೆ. ವರ್ಗಾವಣೆ ವಿಚಾರ ಸೇರಿದಂತೆ ಇತರೆ ವಿಚಾರಗಳಲ್ಲಿ ನಮ್ಮ ಶಿಫಾರಸು, ಮನವಿಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾಗಿರುವ  ಜೆಡಿಎಸ್ ಅಭ್ಯರ್ಥಿ ಹಾಗೂ ಸ್ಥಳೀಯ ಜೆಡಿಎಸ್ ನಾಯಕರ ಮಾತುಗಳಿಗೆ ಹೆಚ್ಚಿನ ಬೆಲೆ ನೀಡಲಾಗುತ್ತಿದೆ. ಇನ್ಸ್‌ಪೆಕ್ಟರ್‌ರಂತಹ ವರ್ಗಾವಣೆ ವಿಚಾರದಲ್ಲೂ ಶಾಸಕರ ಮಾತುಗಳಿಗೆ ಬೆಲೆ ದೊರೆಯುತ್ತಿಲ್ಲ ಎಂದರೆ ಕೆಲಸ ಮಾಡುವುದು ಹೇಗೆ? ಇದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ಹೇಳಿದರು ಎನ್ನಲಾಗಿದೆ.

ಸಮನ್ವಯ ಸಮಿತಿ ಅಧ್ಯಕ್ಷರಾದ ತಾವು ಕೂಡಲೇ ಮಧ್ಯಪ್ರವೇಶಿಸಿ ಕಾಂಗ್ರೆಸ್ ಶಾಸಕರು, ಮುಖಂಡರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಸ್ವತಃ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡ ಬೇಕು. ಜೆಡಿಎಸ್ ಶಾಸಕರು, ಮುಖಂಡರ ಕೆಲಸಗಳು ತಕ್ಷಣವೇ ಆಗುತ್ತಿವೆ. ಅವರೆಲ್ಲಾ ನೇರವಾಗಿ ಮುಖ್ಯಮಂತ್ರಿ ಅವರ ಬಳಿಯೇ ಹೋಗಿ ಕೆಲಸ ಮಾಡಿಸಿಕೊಂಡು ಬರುತ್ತಿದ್ದಾರೆ.

ಆದರೆ, ನಮ್ಮ ಕೆಲಸಗಳು ಆಗುತ್ತಿಲ್ಲ. ಪದೇ ಪದೇ ಮುಖ್ಯಮಂತ್ರಿ ಅವರ ಬಳಿಗೆ ಹೋಗ ಬೇಕಾಗಿ ಬರುತ್ತಿದೆ. ಆದರೂ, ಅವರು ವಿಳಂಬ ಮಾಡುತ್ತಾರೆ.  ಕಾಂಗ್ರೆಸ್ ಬೆಂಬಲ ಪಡೆದು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವುದನ್ನು ಎಚ್.ಡಿ.ಕುಮಾರಸ್ವಾಮಿ ಮರೆತಂತೆ ಇದೆ ಎಂದು ಈ ಶಾಸಕರು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ. ಈ ಹಿಂದೆ ಕೂಡ ಶಾಸಕ ಸುಧಾಕರ್ ಸೇರಿ ದಂತೆ ಮತ್ತಿತರ ಶಾಸಕರು ಇದೇ ರೀತಿ ಸರ್ಕಾರ ದಲ್ಲಿ ತಮ್ಮ ಮಾತುಗಳಿಗೆ ಮನ್ನಣೆ ಸಿಗುತ್ತಿಲ್ಲ, ವರ್ಗಾವಣೆ ಶಿಫಾರಸು, ಬೇಡಿಕೆಗಳು ಈಡೇರು ತ್ತಿಲ್ಲ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದರು.

click me!