ರಮೇಶ್ ಬಿಜೆಪಿ ಸೇರಲು ಯತ್ನಿಸುತ್ತಿದ್ದರೂ ಕೈ ನಾಯಕರು ನಿರಾಳವೇಕೆ?

By Web DeskFirst Published Jan 3, 2019, 9:20 AM IST
Highlights

ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡು ನಾಪತ್ತೆಯಾಗಿರುವ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಲಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಆದರೂ ಕೂಡ ಕಾಂಗ್ರೆಸ್ ಮುಖಂಡರು ನಿರ್ಲಕ್ಷ್ಯ ವಹಿಸಿದ್ದಾರೆ. 

ಬೆಂಗಳೂರು :  ಪಕ್ಷದ ವಿರುದ್ಧ ಪರೋಕ್ಷವಾಗಿ ಬಂಡಾಯ ಸಾರಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್‌ ಜಾರಕಿಹೊಳಿ ಅವರನ್ನು ಕಾಂಗ್ರೆಸ್‌ ಪಕ್ಷ ನಿರ್ಲಕ್ಷಿಸುವ ತಂತ್ರಕ್ಕೆ ಮೊರೆ ಹೋಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಬಿಜೆಪಿ ಜತೆ ಕೈಜೋಡಿಸಲು ರಮೇಶ್‌ ಜಾರಕಿಹೊಳಿ ಅವರು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಆರಂಭದಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ನಾಯಕರು ಆತಂಕಕ್ಕೀಡಾಗಿದ್ದರೂ ಇತ್ತೀಚೆಗೆ ನಿರಾಳತೆಯತ್ತ ಹೆಜ್ಜೆ ಹಾಕತೊಡಗಿದ್ದಾರೆ.

ರಮೇಶ್‌ ಜಾರಕಿಹೊಳಿ ಅವರೊಂದಿಗೆ ಹೆಚ್ಚಿನ ಸಂಖ್ಯೆಯ ಶಾಸಕರು ಇಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಕೂಡ ಹೆಚ್ಚಿನ ಮಹತ್ವ ನೀಡದೆ ಸರ್ಕಾರ ಪತನಗೊಳಿಸುವಷ್ಟುಸಂಖ್ಯೆಯ ಶಾಸಕರನ್ನು ತೋರಿಸಿ ಎಂಬ ಸಲಹೆ ನೀಡಿದೆ. ಹೀಗಾಗಿ, ರಮೇಶ್‌ ಜಾರಕಿಹೊಳಿ ಅವರಿಂದ ಸರ್ಕಾರ ಪತನಗೊಳಿಸುವುದು ಸಾಧ್ಯವಿಲ್ಲ ಎಂಬ ನಿಲವಿಗೆ ಸಮ್ಮಿಶ್ರ ಸರ್ಕಾರ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಕಳೆದೊಂದು ವಾರದಿಂದ ರಮೇಶ್‌ ಅವರು ತಮ್ಮ ಕಾಂಗ್ರೆಸ್‌ ಪಕ್ಷದ ನಾಯಕರ ಸಂಪರ್ಕಕ್ಕೆ ಸಿಕ್ಕಿಲ್ಲ. ಮೇಲಾಗಿ ಅವರ ಸಹೋದರ ಹಾಗೂ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನೂ ಭೇಟಿ ಮಾಡಿಲ್ಲ. ಅಜ್ಞಾತ ಸ್ಥಳದಲ್ಲಿ ಕುಳಿತು ಸರ್ಕಾರ ಪತನಗೊಳಿಸಲು ಬೇಕಾದ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸಮ್ಮಿಶ್ರ ಸರ್ಕಾರ ಕೂಡ ರಮೇಶ್‌ ಅವರ ನಡೆಯ ಬಗ್ಗೆ ಗುಪ್ತಚರ ಇಲಾಖೆ ಮೂಲಕ ನಿಗಾ ಇರಿಸಿದ್ದು, ಅವರ ಆಪ್ತರ ಚಲವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಆದರೆ, ರಮೇಶ್‌ ಜಾರಕಿಹೊಳಿ ದೆಹಲಿಗೆ ಹೋಗಿ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಲು ಏನೆಲ್ಲ ಪ್ರಯತ್ನ ನಡೆಸಿದರೂ ನಿರ್ದಿಷ್ಟಸಂಖ್ಯೆಯಷ್ಟುಶಾಸಕರನ್ನು ತಮ್ಮೊಂದಿಗೆ ಸೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ತೀರಾ ಮೇಲೆ ಬಿದ್ದು ಅವರನ್ನು ಮನವೊಲಿಸುವ ಬದಲು ತುಸು ನಿರ್ಲಕ್ಷಿಸುವುದೇ ಸೂಕ್ತ ಎನ್ನುವುದು ಆಡಳಿತಾರೂಢ ಪಕ್ಷಗಳ ವಾದ.

ಮೂರ್ನಾಲ್ಕು ದಿನಗಳಿಂದ ದೆಹಲಿಯಲ್ಲಿದ್ದ ರಮೇಶ್‌ ಜಾರಕಿಹೊಳಿ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಲು ತೀವ್ರ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ನೀವು ಮೊದಲು ಸರ್ಕಾರವನ್ನು ಪತನಗೊಳಿಸಿ ಹೊರಗೆ ಬನ್ನಿ. ನಂತರ ಮುಂದಿನದನ್ನು ಮಾತನಾಡೋಣ ಎಂಬ ಸಂದೇಶವನ್ನು ಬಿಜೆಪಿ ವರಿಷ್ಠರು ನೀಡಿದ್ದಾರೆ. ಹೀಗಾಗಿ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ರಮೇಶ್‌ ಅವರು ದೆಹಲಿಯಿಂದ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ.

click me!