ರಫೇಲ್ ಡೀಲ್: ಸುಪ್ರೀಂಕೋರ್ಟಿಗೆ ತೃಪ್ತಿಯಾಗಿದೆ, ಜೆಪಿಸಿ ಬೇಕಿಲ್ಲ!

Published : Jan 03, 2019, 09:18 AM IST
ರಫೇಲ್ ಡೀಲ್: ಸುಪ್ರೀಂಕೋರ್ಟಿಗೆ ತೃಪ್ತಿಯಾಗಿದೆ, ಜೆಪಿಸಿ ಬೇಕಿಲ್ಲ!

ಸಾರಾಂಶ

ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಮಾಡಬೇಕು ಎಂದು ಪ್ರಬಲವಾಗಿ ಆಗ್ರಹ ಮಾಡುತ್ತಿರುವ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ. ಜೆಪಿಸಿ ತನಿಖೆ ಬೇಡಿಕೆಯನ್ನು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಬುಧವಾರ ತಿರಸ್ಕರಿಸಿದೆ.

ನವದೆಹಲಿ (ಜ. 03):  ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ಕಂಪನಿಯಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಮಾಡಬೇಕು ಎಂದು ಪ್ರಬಲವಾಗಿ ಆಗ್ರಹ ಮಾಡುತ್ತಿರುವ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿದೆ. ಜೆಪಿಸಿ ತನಿಖೆ ಬೇಡಿಕೆಯನ್ನು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಬುಧವಾರ ತಿರಸ್ಕರಿಸಿದೆ.

ರಫೇಲ್‌ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೆ ಆತ್ಮತೃಪ್ತಿಯಾಗಿದೆ. ಹೀಗಾಗಿ ಜೆಪಿಸಿಯ ಅಗತ್ಯವಿಲ್ಲ. ಜೆಪಿಸಿ ಎಂಬುದು ಪಕ್ಷಪಾತದ ಸಂಸ್ಥೆಯಾಗಿದ್ದು, ಅದು ಪಾರದರ್ಶಕವಾಗಿ ತನಿಖೆ ನಡೆಸುವುದಿಲ್ಲ. ಬೊಫೋರ್ಸ್‌ ಹಗರಣದಲ್ಲಿ ಮುಳುಗಿರುವ ಕಾಂಗ್ರೆಸ್‌ ಪಕ್ಷದ ಜೆಪಿಸಿ ಬೇಡಿಕೆಯನ್ನು ಸ್ವೀಕರಿಸುವುದರಲ್ಲಿ ಅರ್ಥವಿಲ್ಲ. ಬೊಫೋರ್ಸ್‌ ಹಗರಣದ ಜೆಪಿಸಿಯನ್ನು ಸ್ಮರಿಸಿಕೊಳ್ಳಿ. ಲಂಚವನ್ನು ಮಾರಾಟ ಶುಲ್ಕ ಎಂದು ಬಣ್ಣಿಸಿ, ಭ್ರಷ್ಟಾಚಾರಕ್ಕೆ ಶ್ವೇತಬಣ್ಣ ಬಳಿದಿತ್ತು ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ರಫೇಲ್‌ ಕುರಿತ ಚರ್ಚೆ ವೇಳೆ ಟಾಂಗ್‌ ನೀಡಿದರು.

ಖಾಲಿ ಯುದ್ಧ ವಿಮಾನದ ಬೆಲೆಯನ್ನು ಬೇಕಿದ್ದರೆ ಹೇಳಬಹುದು. ಆದರೆ ಶಸ್ತ್ರ ಭರಿತ ಯುದ್ಧ ವಿಮಾನದ ಬೆಲೆಯನ್ನು ಬಹಿರಂಗಪಡಿಸಿದರೆ ದೇಶದ ವಿರೋಧಿಗಳಿಗೆ ನೆರವಾಗುತ್ತದೆ. ಖಾಲಿ ವಿಮಾನಕ್ಕೆ ಯುಪಿಎ ಕುದುರಿಸಿದ್ದಕ್ಕಿಂತ ಶೇ.9 ಕಡಿಮೆ ಬೆಲೆಗೆ ಹಾಗೂ ಶಸ್ತ್ರಸಜ್ಜಿತ ವಿಮಾನವನ್ನು ಶೇ.20ರಷ್ಟುಅಗ್ಗದ ದರದಲ್ಲಿ ಖರೀದಿಸಲಾಗುತ್ತಿದೆ ಎಂದು ಹೇಳಿದರು.

ಈ ಹಿಂದಿನ ರಕ್ಷಣಾ ಹಗರಣಗಳಲ್ಲಿ ಸಂಚುದಾರರಾಗಿದ್ದವರು ಈಗ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಬೆರಳು ತೋರಿಸುತ್ತಿದ್ದಾರೆ. ಕೆಲವು ವ್ಯಕ್ತಿ ಹಾಗೂ ಕುಟುಂಬಗಳಿಗೆ ಹಣಕಾಸಿನ ಲೆಕ್ಕಾಚಾರವಷ್ಟೇ ಗೊತ್ತಾಗುತ್ತದೆ. ರಾಷ್ಟ್ರೀಯ ಭದ್ರತೆಯ ವಿಷಯಗಳು ಅಲ್ಲ ಎಂದು ಕಾಂಗ್ರೆಸ್ಸಿನ ವಿರುದ್ಧ ಕುಟುಕಿದರು.

ರಾಹುಲ್‌ಗೆ ಜೇಟ್ಲಿ ಚಾಟಿ:

ಇದೇ ವೇಳೆ ರಫೇಲ್‌ ವಿಷಯ ಪ್ರಸ್ತಾಪಿಸಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಅರುಣ್‌ ಜೇಟ್ಲಿ ಚಾಟಿ ಬೀಸಿದರು. ಕಾಂಗ್ರೆಸ್‌ನಂತಹ ಹಳೆಯ ಪಕ್ಷವನ್ನು ಈ ಹಿಂದೆ ದೊಡ್ಡ ದೊಡ್ಡ ನಾಯಕರು ಮುನ್ನಡೆಸಿದ್ದರು. ಆದರೆ ಈಗ ಆ ಪಕ್ಷದ ಅಧ್ಯಕ್ಷನಾಗಿರುವ ವ್ಯಕ್ತಿಗೆ ಯುದ್ಧ ವಿಮಾನದ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲ. ಕೆಲವು ವ್ಯಕ್ತಿಗಳಿಗೆ ಸತ್ಯದ ಬಗ್ಗೆ ಸ್ವಾಭಾವಿಕವಾಗಿ ಇಷ್ಟವಿರುವುದಿಲ್ಲ. ಕಳೆದ ಆರು ತಿಂಗಳಿನಿಂದ ಈ ವಿಷಯವಾಗಿ ಅವರು ಮಾತನಾಡಿರುವ ಪ್ರತಿಯೊಂದು ಪದವೂ ಸುಳ್ಳು. ಸುಳ್ಳು ಹೇಳುವ ಪರಂಪರೆಯನ್ನೇ ಅವರು ಹೊಂದಿದ್ದಾರೆ ಎಂದು ರಾಹುಲ್‌ ವಿರುದ್ಧ ಹರಿಹಾಯ್ದರು.

ಇದೇ ವೇಳೆ ಜೇಮ್ಸ್‌ ಬಾಂಡ್‌ ಮಾತುಗಳನ್ನು ಉಲ್ಲೇಖಿಸಿದ ಜೇಟ್ಲಿ, ಮೂರು ಬಾರಿ ತಪ್ಪು ನಡೆದರೆ ಅದು ಸಂಚು. ರಾಹುಲ್‌ ಗಾಂಧಿ ಅದನ್ನೇ ಮಾಡುತ್ತಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!