
ಬೆಂಗಳೂರು : ದೆಹಲಿಯಲ್ಲಿ ಮಾ.16ರಿಂದ ಮೂರು ದಿನ ನಡೆಯಲಿರುವ ಎಐಸಿಸಿ ಮಹಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರ ದೊಡ್ಡ ದಂಡೇ ಗುರುವಾರ ಸಂಜೆ ದೆಹಲಿಗೆ ತೆರಳಲಿದೆ.
ಸಿದ್ದರಾಮಯ್ಯ ಅವರ ಜತೆಗೆ ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರು ಹಾಗೂ ಪದಾಧಿಕಾರಿಗಳು ಸೇರಿದಂತೆ ನೂರು ಮಂದಿಗೆ ಈ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಈ ಎಲ್ಲರೂ ಗುರುವಾರ ಸಂಜೆಯ ವೇಳೆಗೆ ದೆಹಲಿ ತಲುಪಲಿದ್ದಾರೆ. ಇವರಿಗೆ ಊಟೋಪಚಾರ, ವಸತಿ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲು ಕೆಪಿಸಿಸಿಯು ದೆಹಲಿ ಕರ್ನಾಟಕ ಭವನದಲ್ಲಿ ಕ್ಯಾಂಪ್ ಕಚೇರಿಯನ್ನು ತೆರೆಯಲಿದೆ ಎಂದು ಕೆಪಿಸಿಸಿ ಮಾಧ್ಯಮ ಸಂಚಾಲಕ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಬೆಂಗಳೂರಲ್ಲಿಲ್ಲ ಅಧಿವೇಶನ:
ಕಾಂಗ್ರೆಸ್ ಅಧಿಕಾರದಲ್ಲಿರುವ ಅತಿ ದೊಡ್ಡ ರಾಜ್ಯವಾದ ಕರ್ನಾಟಕದಲ್ಲಿ ಈ ಬಾರಿಯ ಮಹಾ ಅಧಿವೇಶನ ನಡೆಯಲಿದೆ ಎಂಬ ಮಾತು ಕೇಳಿಬಂದಿತ್ತು. ಈ ಬಗ್ಗೆ ರಾಜ್ಯ ಕಾಂಗ್ರೆಸ್ ವತಿಯಿಂದ ಎಐಸಿಸಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು. ಆದರೆ ಹೈಕಮಾಂಡ್ ದೆಹಲಿಯಲ್ಲೇ ನಡೆಸಲು ನಿರ್ಧರಿಸಿದ್ದು, ಹೀಗಾಗಿ ಬೆಂಗಳೂರಿನಲ್ಲಿ ಮಹಾ ಅಧಿವೇಶನ ನಡೆಯಲಿದೆ ಎಂಬ ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದೆ.
ವಿದ್ಯಾರ್ಥಿ ಭವನದಲ್ಲಿ ಸಿಎಂ ದೋಸೆ ಪಾರ್ಟಿ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಗಾಂಧೀ ಬಜಾರಿನ ವಿದ್ಯಾರ್ಥಿ ಭವನಕ್ಕೆ ತೆರಳಿ ದೋಸೆ ಸವಿದರು. ಮುಖ್ಯಮಂತ್ರಿಗಳ ಜತೆ ಸಚಿವ ಕೆ.ಜೆ. ಜಾಜ್‌ರ್, ಸಿಎಂ ಅವರ ಆಪ್ತ ಗೋವಿಂದರಾಜ್, ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್ ಇದ್ದರು. ಉತ್ತರಪ್ರದೇಶದಲ್ಲಿ ಬಿಜೆಪಿ ಸೋಲು ಅನುಭವಿಸಿದ ಕಾರಣ ಸಿಎಂ ಖುಷಿಯ ಮೂಡ್‌ನಲ್ಲಿ ಇದ್ದಂತೆ ಕಂಡುಬಂತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.