ಬೆಂಗಳೂರು ನಗರಾಡಳಿತ ದೇಶದಲ್ಲೇ ಅತ್ಯಂತ ಕಳಪೆ!

By Suvarna Web DeskFirst Published Mar 15, 2018, 9:24 AM IST
Highlights

ಸ್ಥಳೀಯಾಡಳಿತಕ್ಕೆ ಸಂಬಂಧಿಸಿ ದೇಶದ ವಿವಿಧ ಪ್ರಮುಖ ನಗರಗಳನ್ನು ಉದ್ದೇಶಿಸಿ ಮಾಡಲಾದ ಸಮೀಕ್ಷೆಯಲ್ಲಿ ಬೆಂಗಳೂರು ಅತ್ಯಂತ ಕಳಪೆ ನಗರಾಡಳಿತವಾಗಿ ಗುರುತಿಸಲ್ಪಟ್ಟಿದೆ.

ನವದೆಹಲಿ: ಸ್ಥಳೀಯಾಡಳಿತಕ್ಕೆ ಸಂಬಂಧಿಸಿ ದೇಶದ ವಿವಿಧ ಪ್ರಮುಖ ನಗರಗಳನ್ನು ಉದ್ದೇಶಿಸಿ ಮಾಡಲಾದ ಸಮೀಕ್ಷೆಯಲ್ಲಿ ಬೆಂಗಳೂರು ಅತ್ಯಂತ ಕಳಪೆ ನಗರಾಡಳಿತವಾಗಿ ಗುರುತಿಸಲ್ಪಟ್ಟಿದೆ. ಸಮೀಕ್ಷೆಗೊಳಪಡಿಸಲಾದ 23 ನಗರಗಳಲ್ಲಿ ಪುಣೆ ನಂ.1 ಸ್ಥಾನದಲ್ಲಿದೆ. ಕಳೆದ ವರ್ಷ 16ನೇ ಸ್ಥಾನದಲ್ಲಿದ್ದ ಬೆಂಗಳೂರು, ಈ ವರ್ಷ ಕೊನೆಯ 23ನೇ ಸ್ಥಾನದಲ್ಲಿ ಗುರುತಿಸಲ್ಪಟ್ಟು, ಅತ್ಯಂತ ಕಳಪೆ ನಗರಾಡಳಿತ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಈ ಮೂಲಕ ಪದೇ ಪದೇ ಹಗರಣದ ಆರೋಪಕ್ಕೆ ತುತ್ತಾಗುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ರಾಷ್ಟ್ರೀಯ ಮಟ್ಟದಲ್ಲಿ ಅವಮಾನಕ್ಕೆ ಗುರಿಯಾಗಿದೆ.

ನಾಗರಿಕತ್ವ ಮತ್ತು ಪ್ರಜಾಪ್ರಭುತ್ವಕ್ಕಾಗಿ ಜನಾಗ್ರಹ ಕೇಂದ್ರ ಎಂಬ ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ 2017ರ ಭಾರತದ ನಗರ ವ್ಯವಸ್ಥೆ ವಾರ್ಷಿಕ ಸಮೀಕ್ಷೆ ವರದಿ ಸಿದ್ಧಪಡಿಸಿದ್ದು, ಅದರಲ್ಲಿ ಈ ಮಾಹಿತಿ ಇದೆ. 5.1 ಅಂಕಗಳೊಂದಿಗೆ ಪುಣೆ ಮೊದಲ ಸ್ಥಾನದಲ್ಲಿದ್ದರೆ ನಂತರದ ಸ್ಥಾನಗಳನ್ನು ಕೊಲ್ಕತಾ, ತಿರುವನಂತಪುರಂ, ಭುವನೇಶ್ವರ, ಸೂರತ್‌ ಪಡೆದಿವೆ. ಸಮೀಕ್ಷೆಗೊಳಪಟ್ಟನಗರಗಳು 10ರಲ್ಲಿ 3.0ದಿಂದ 5.1 ಅಂಕಗಳನ್ನು ಪಡೆದಿವೆ. ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌, ಬ್ರಿಟನ್‌ ರಾಜಧಾನಿ ಲಂಡನ್‌, ಅಮೆರಿಕದ ನ್ಯೂಯಾರ್ಕ್ ನಗರಗಳಲ್ಲಿ ಆಡಳಿತವನ್ನು ಭಾರತದಲ್ಲಿನ ಸ್ಥಳೀಯಾಡಳಿತಕ್ಕೆ ಹೋಲಿಕೆ ಮಾಡಿ ಈ ಸಮೀಕ್ಷೆ ಮಾಡಲಾಗಿದೆ.

ಅತಿ ಹೆಚ್ಚು ಅಂಕ: ಕೊನೆಯ ಸ್ಥಾನದಲ್ಲಿರುವ ಬೆಂಗಳೂರು 3 ಅಂಕಗಳನ್ನಷ್ಟೇ ಪಡೆಯಲು ಯಶಸ್ವಿಯಾಗಿದೆ. ಕೊನೆಯ ಸ್ಥಾನಗಳಲ್ಲಿ ಬೆಂಗಳೂರು, ಚಂಡೀಗಢ, ಡೆಹ್ರಾಡೂನ್‌, ಪಟನಾ ಮತ್ತು ಚೆನ್ನೈ ಗುರುತಿಸಲ್ಪಟ್ಟಿವೆ. ನಗರಾಡಳಿತ ಸಂಸ್ಥೆಗಳ ಅಧ್ಯಯನ, ಕಾನೂನಿನ ವಿಶ್ಲೇಷಣೆ, ನೀತಿಗಳು ಮತ್ತು ಆರ್‌ಟಿಐ ಪ್ರತಿಕ್ರಿಯೆಗಳ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ.

click me!