ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿದೆ ಭಾರೀ ಲಾಬಿ

First Published Jun 12, 2018, 10:08 AM IST
Highlights

 ಕೆಪಿಸಿಸಿ ಅಧ್ಯಕ್ಷ ಹುದ್ದೆ ಪಡೆಯಲು ಕಾಂಗ್ರೆಸ್‌ನ ಯುವ ಪಡೆಯ ಲಾಬಿಗೆ ಪ್ರತಿಯಾಗಿ ಈಗ ಹಿರಿಯ ಕಾಂಗ್ರೆಸ್ಸಿಗರೂ ಸಂಘಟಿತ ಪ್ರಯತ್ನ ನಡೆಸಲು ಮುಂದಾಗಿದ್ದಾರೆ.

 ಬೆಂಗಳೂರು :  ಕೆಪಿಸಿಸಿ ಅಧ್ಯಕ್ಷ ಹುದ್ದೆ ಪಡೆಯಲು ಕಾಂಗ್ರೆಸ್‌ನ ಯುವ ಪಡೆಯ ಲಾಬಿಗೆ ಪ್ರತಿಯಾಗಿ ಈಗ ಹಿರಿಯ ಕಾಂಗ್ರೆಸ್ಸಿಗರೂ ಸಂಘಟಿತ ಪ್ರಯತ್ನ ನಡೆಸಲು ಮುಂದಾಗಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ದೊರೆಯುವಂತೆ ಮಾಡಲು ಪ್ರಭಾವಿ ಸಚಿವ ಕೃಷ್ಣ ಬೈರೇಗೌಡ, ವಿಧಾನಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಧು ಯಾಕ್ಷಿಗೌಡ, ರಾಹುಲ್‌ ಗಾಂಧಿ ತಂಡದಲ್ಲಿರುವ ಬೈಜು ಮೊದಲಾದವರು ತೀವ್ರ ಪ್ರಯತ್ನ ನಡೆಸಿರುವ ಬೆನ್ನಲ್ಲೇ, ಅದಕ್ಕೆ ಪ್ರತಿಯಾಗಿ ಕೆ.ಎಚ್‌.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್‌ ಹಾಗೂ ಈಶ್ವರ್‌ ಖಂಡ್ರೆ ಅವರು ಅಧ್ಯಕ್ಷ ಸ್ಥಾನ ಗಿಟ್ಟಿಸಲು ಪ್ರಯತ್ನ ಆರಂಭಿಸಿದ್ದಾರೆ. ಅಲ್ಲದೆ, ಅಧ್ಯಕ್ಷ ಸ್ಥಾನವನ್ನು ಹಿರಿಯರ ಪೈಕಿ ಯಾರಿಗೆ ಬೇಕಾದರೂ ನೀಡಲಿ, ಆದರೆ ಕಿರಿಯರಿಗೆ ಈ ಹುದ್ದೆ ನೀಡುವುದು ಬೇಡ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಲು ಹಿರಿಯರ ಗುಂಪು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ವಾಸ್ತವವಾಗಿ ಕೆಪಿಸಿಸಿ ಹುದ್ದೆಗೆ ಯುವ ಪಡೆ ಪೈಪೋಟಿ ಆರಂಭಿಸಿದಾಗ ರಾಜ್ಯದ ಹಿರಿಯ ಕಾಂಗ್ರೆಸ್ಸಿಗರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಾರಣ- ಕೆಪಿಸಿಸಿ ಅಧ್ಯಕ್ಷರಾಗಿರುವ ದಲಿತ ಸಮುದಾಯದ ಡಾ. ಜಿ.ಪರಮೇಶ್ವರ್‌ ಅವರಿಗೆ ಡಿಸಿಎಂ ಹುದ್ದೆ ದೊರಕಿರುವುದರಿಂದ ಅವರ ನಂತರ ಈ ಹುದ್ದೆಯನ್ನು ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯಕ್ಕೆ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು.

ಬ್ರಾಹ್ಮಣ ಸಮುದಾಯಕ್ಕೆ ಸೇರಿದ ದಿನೇಶ್‌ ಗುಂಡೂರಾವ್‌ ಆಸಕ್ತರಾಗಿದ್ದರೂ, ಈಗಾಗಲೇ ಸ್ಪೀಕರ್‌ ಹುದ್ದೆ ಹಾಗೂ ಸಂಪುಟದಲ್ಲಿ ಪ್ರಮುಖ ಖಾತೆಯಾದ ಕಂದಾಯವನ್ನು ಆರ್‌.ವಿ.ದೇಶಪಾಂಡೆ ಅವರಿಗೆ ನೀಡಿರುವುದರಿಂದ ಮತ್ತೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಿಗೆ ಕೆಪಿಸಿಸಿ ಹುದ್ದೆ ನೀಡುವುದಿಲ್ಲ ಎಂಬುದು ಹಿರಿಯ ಕಾಂಗ್ರೆಸ್ಸಿಗರ ಭಾವನೆಯಾಗಿತ್ತು.

ಆದರೆ, ಯುವ ಪಡೆಯು ಜಾತಿ ಮೀರಿ ನಿಂತು ದಿನೇಶ್‌ ಗುಂಡೂರಾವ್‌ ಪರವಾಗಿ ಲಾಬಿ ನಡೆಸಲು ಆರಂಭಿಸಿತು. ಸಚಿವ ಸ್ಥಾನ ತಪ್ಪಿದ ಬೆನ್ನಲ್ಲೇ ರಾಜ್ಯದಲ್ಲಿ ಅತೃಪ್ತ ವಾತಾವರಣ ನಿರ್ಮಾಣಗೊಂಡಾಗ ಹಿರಿಯರು ಮೌನಕ್ಕೆ ಜಾರಿದ್ದರೂ, ಯುವಪಡೆ ಈ ಪರಿಸ್ಥಿತಿಯನ್ನು ವಿಕೋಪಕ್ಕೆ ಹೋಗದಂತೆ ತಡೆಯಲು ಯತ್ನಿಸಿದ್ದು ಹೈಕಮಾಂಡ್‌ನ ಗಮನ ಸೆಳೆದಿತ್ತು.

ಇದರ ಬೆನ್ನಲ್ಲೇ ರಾಜ್ಯ ನಾಯಕತ್ವದ ಗಮನಕ್ಕೆ ಬರದಂತೆ ಈ ಯುವ ಪಡೆಯೂ ಹೈಕಮಾಂಡ್‌ನ ವರಿಷ್ಠರನ್ನು ಸಂಪರ್ಕಿಸಿ ಹುದ್ದೆ ಗಿಟ್ಟಿಸಲು ಪ್ರಬಲ ಯತ್ನ ನಡೆಸತೊಡಗಿತ್ತು. ಒಂದು ಹಂತದಲ್ಲಂತೂ ಹೈಕಮಾಂಡ್‌ ದಿನೇಶ್‌ ಗುಂಡೂರಾವ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಘೋಷಣೆ ಮಾಡಲು ನಿರ್ಧರಿಸಿದೆ, ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದೆ ಎಂದೇ ಕಾಂಗ್ರೆಸ್‌ ವಲಯದಲ್ಲಿ ಬಿಂಬಿತವಾಗಿತ್ತು.

ಅಲ್ಲಿಯವರೆಗೂ ದಿನೇಶ್‌ ಗುಂಡೂರಾವ್‌ ಅವರನ್ನು ಜಾತಿಯ ಕಾರಣಕ್ಕೆ ಹೈಕಮಾಂಡ್‌ ಪರಿಗಣಿಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದ ಕಾಂಗ್ರೆಸ್ಸಿನ ಹಿರಿಯರಿಗೆ ಈ ಬೆಳವಣಿಗೆ ಶಾಕ್‌ ನೀಡಿದೆ. ಒಂದು ವೇಳೆ ಕಿರಿಯರಿಗೆ ಈ ಹುದ್ದೆ ದೊರಕಿಬಿಟ್ಟರೆ ಪಕ್ಷದಲ್ಲಿನ ಹಿರಿಯರು ಕ್ರಮೇಣ ಮೂಲೆಗುಂಪಾಗುವುದು ಖಚಿತ ಎಂಬ ಭಾವನೆ ಮೂಡಿರುವುದರಿಂದ ಹಿರಿಯ ಕಾಂಗ್ರೆಸ್ಸಿಗರು ಸಂಘಟಿತರಾಗತೊಡಗಿದ್ದಾರೆ ಎಂದು ಮೂಲಗಳು ಹೇಳುತ್ತವೆ.

ಈ ಪ್ರಯತ್ನದ ಭಾಗವಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರ ಅಧ್ಯಕ್ಷತೆಯಲ್ಲಿ ಸಂಸದರ ಸಭೆ ನಡೆಸಲಾಯಿತು. ಈ ಸಭೆಯ ಮೂಲಕ ಈಶ್ವರ್‌ ಖಂಡ್ರೆ, ಬಿ.ಕೆ.ಹರಿಪ್ರಸಾದ್‌ ಹಾಗೂ ಕೆ.ಎಚ್‌.ಮುನಿಯಪ್ಪ ಅವರ ಹೆಸರನ್ನು ಪ್ರಮುಖ ಹುದ್ದೆಗೆ ಪರಿಗಣಿಸುವಂತೆ ಸಂದೇಶ ರವಾನಿಸಲು ಯತ್ನಿಸಲಾಯಿತು.

ಜಾತಿ ಲೆಕ್ಕಾಚಾರದ ಪ್ರಕಾರ ಈ ಬಾರಿ ಕೆಪಿಸಿಸಿ ಹುದ್ದೆಯು ಲಿಂಗಾಯತ ಅಥವಾ ಒಕ್ಕಲಿಗ ಸಮುದಾಯಕ್ಕೆ ದೊರೆಯಬೇಕು ಎಂಬ ವಾದವಿದೆ. ಏಕೆಂದರೆ, ಹಿಂದುಳಿದವರಿಗೆ ಕಳೆದ ಬಾರಿ ಮುಖ್ಯಮಂತ್ರಿ ಹುದ್ದೆಯನ್ನು ಐದು ವರ್ಷ ಅವಧಿಗೆ ನೀಡಲಾಗಿತ್ತು. ದಲಿತರಿಗೆ ಈಗ ಡಿಸಿಎಂ ಹುದ್ದೆ ನೀಡಲಾಗಿದೆ. ಹೀಗಾಗಿ ಒಕ್ಕಲಿಗರಿಗೆ ಅಥವಾ ಲಿಂಗಾಯತರಿಗೆ ಈ ಹುದ್ದೆ ದೊರೆಯಬೇಕು ಎಂಬುದು ವಾದ. ಈ ಪೈಕಿ ಒಕ್ಕಲಿಗರಿಗೆ ಈ ಹಂತದಲ್ಲಿ ಹುದ್ದೆ ನೀಡಲು ಸಾಧ್ಯವಿಲ್ಲ. ಜೆಡಿಎಸ್‌ ಜತೆಗಿನ ಮೈತ್ರಿಯಿಂದಾಗಿ ಈ ಹಂತದಲ್ಲಿ ಒಕ್ಕಲಿಗರಿಗೆ ಹುದ್ದೆ ನೀಡಿದರೂ ಅದರ ಪ್ರಯೋಜನ ಪಕ್ಷಕ್ಕೆ ದೊರೆಯುವುದಿಲ್ಲ.

ಆದರೆ, ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತಗಳನ್ನು ಇನ್ನೂ ಕಾಂಗ್ರೆಸ್‌ ಪರ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ ಲೋಕಸಭೆ ಚುನಾವಣೆ ದೃಷ್ಟಿಯಿಂದ ಲಿಂಗಾಯತರಿಗೆ ಈ ಹುದ್ದೆ ನೀಡಬೇಕು ಮತ್ತು ಯುವ ಪಡೆಯ ಮಾತು ಕೇಳಿ ದಿನೇಶ್‌ ಗುಂಡೂರಾವ್‌ಗೆ ಈ ಹುದ್ದೆ ನೀಡಿದರೆ ಅದರಿಂದ ಪಕ್ಷಕ್ಕೆ ಜಾತಿ ಲೆಕ್ಕಾಚಾರದಲ್ಲಿ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೈಕಮಾಂಡ್‌ಗೆ ಸ್ಪಷ್ಟಸಂದೇಶ ನೀಡಲು ಹಿರಿಯರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಈ ವಾದಕ್ಕೆ ಪರಮೇಶ್ವರ್‌, ಪ್ರಭಾವಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮೊದಲಾದ ರಾಜ್ಯ ನಾಯಕರ ಬೆಂಬಲವೂ ಇದೆ ಎಂದು ಹೇಳಲಾಗುತ್ತಿದೆ. ಕುತೂಹಲಕಾರಿ ಸಂಗತಿಯೆಂದರೆ, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತ್ರ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಬಗ್ಗೆ ತಮ್ಮ ನಿಲುವನ್ನು ತಮ್ಮ ಆಪ್ತರ ಬಳಿಯೂ ಹೇಳುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

click me!