7 ಕಾಂಗ್ರೆಸಿಗರೊಂದಿಗೆ ಜಮೀರ್ ಅಹ್ಮದ್ ಮೀಟಿಂಗ್

By Web DeskFirst Published May 2, 2019, 10:49 AM IST
Highlights

ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಮತ್ತೊಂದು ಚುನಾವಣೆಗೆ ರಾಜ್ಯ ಸಜ್ಜಾಗಿದೆ. ಇದೇ ವೇಳೆ ಬಂಡಾಯದ ಬಿಸಿಯೂ ಕೂಡ ತಟ್ಟಿದೆ. 

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ತಲೆನೋವಾಗಿರುವ ಬಂಡಾಯ ಗುರುವಾರ ಸಂಜೆಯ ಹೊತ್ತಿಗೆ ಶಮನವಾಗುವ ಎಲ್ಲ ಲಕ್ಷಣಗಳಿವೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್‌ ಖಾನ್ ನೇತೃತ್ವದಲ್ಲಿ ಬುಧವಾರ ಸಂಜೆ ಖಾಸಗೀ ಹೋಟೆಲ್‌ನಲ್ಲಿ ನಡೆದ ಸಂಧಾನ ಸಭೆಯಲ್ಲಿ ನಾಮಪತ್ರ ಹಿಂಪಡೆದು ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವ ಬಗ್ಗೆ ಬಹುತೇಕರು ಒಮ್ಮತ ಸೂಚಿಸಿದ್ದು, ಗುರುವಾರ ಸಂಜೆಯ ಹೊತ್ತಿಗೆ ಅದು ಅಧಿಕೃತವಾಗಲಿದೆ.

ಬಂಡಾಯ ಅಭ್ಯರ್ಥಿಗಳಾದ ಶಿವಾನಂದ ಬೆಂತೂರು, ಎಚ್.ಎಲ್. ನದಾಫ್, ಸುರೇಶ ಸವಣೂರು, ಚಂದ್ರಶೇಖರ ಜುಟ್ಟಲ್, ವಿಶ್ವನಾಥ ಕುಬಿಹಾಳ, ಜಿ.ಡಿ. ಘೋರ್ಪಡೆ, ಜೆಡಿಎಸ್‌ನ ಹಜರತ್ ಅಲಿ ಜೋಡಮನಿ ಅವರನ್ನು ಜಮೀರ್ ಕರೆಸಿಕೊಂಡು ಸುಮಾರು 2 ಗಂಟೆ ಮಾತುಕತೆ ನಡೆಸಿ ಭಿನ್ನಮತ ಶಮನಗೊಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಸದ್ಯ ಮೈತ್ರಿ ಸರ್ಕಾರವಿದೆ. ಮೊದಲೇ ಬಿಜೆಪಿ ಈ ಸರ್ಕಾರವನ್ನು ಯಾವಾಗ ಕೆಡವಬೇಕು ಎಂದು ಹವಣಿಸುತ್ತಿದೆ. ಇಂಥ ಸಮಯದಲ್ಲಿ ನೀವು ಬಂಡಾಯವಾಗಿ ನಿಂತರೆ ಪಕ್ಷದ ಅಭ್ಯರ್ಥಿಗೆ ಸಮಸ್ಯೆಯಾಗುತ್ತದೆ. ಸರ್ಕಾರದ ಅಸ್ತಿತ್ವದ ಪ್ರಶ್ನೆ ಬರುತ್ತದೆ. ಆದಕಾರಣ ನೀವೆಲ್ಲರೂ ನಾಮಪತ್ರ ಹಿಂಪಡೆದು ಪಕ್ಷದ ಅಧಿಕೃತ ಅಭ್ಯರ್ಥಿಗೆ ಬೆಂಬಲಿಸಿ, ನಿಮ್ಮ ಬೇಡಿಕೆಯನ್ನು ಪಕ್ಷ ಈಡೇರಿಸಲಿದೆ ಎಂದು ಮನವೊಲಿಸಿದ್ದಾರೆ. ಈವರೆಗೆ ತಮ್ಮನ್ನು ಬೆಂಬಲಿಸಿದ ಹಿರಿಯರು, ಗೆಳೆಯರ ಅಭಿಪ್ರಾಯ ಕೇಳಿ ಗುರುವಾರ ಬೆಳಗ್ಗೆ ಅಥವಾ ಸಂಜೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. 

click me!