ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ವಿಧಿವಶ

By Web DeskFirst Published May 2, 2019, 10:46 AM IST
Highlights

ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ| ಖ್ಯಾತ ರಂಗಭೂರ್ಮಿ  ಕಲಾವಿದ  ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲ| 84 ವರ್ಷದ   ಮಾಸ್ಟರ್ ಹಿರಣ್ಣಯ್ಯ ಅನಾರೋಗ್ಯದಿಂದ ನಿಧನ

ಬೆಂಗಳೂರು[ಮೇ.02]:  ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ರಂಗಭೂರ್ಮಿ  ಕಲಾವಿದ ಹಿರಣ್ಣಯ್ಯ ಇಹಲೋಕ ತ್ಯಜಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ 84 ವರ್ಷದ  ಮಾಸ್ಟರ್ ಹಿರಣ್ಣಯ್ಯ  ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಗುರುವಾರ ಬೆಳಗ್ಗೆ 8:30ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಫೆಬ್ರವರಿ 15, 1934ರಲ್ಲಿ ಮೈಸೂರಿನಲ್ಲಿ ಜನನ ಹಿರಣ್ಣಯ್ಯ ಜನನ. ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ, ಶಾರದಮ್ಮ ದಂಪತಿ ಒಬ್ಬನೇ ಮಗ.
ಇಂಟರ್ ಮೀಡಿಯೆಟ್ ಓದಿದ್ದ ಹಿರಣ್ಣಯ್ಯ, ತಂದೆ ಕೆ. ಹಿರಣ್ಣಯ್ಯ 1940ರಲ್ಲಿ ರಚಿಸಿ, ನಿರ್ದೇಶಿಸಿದ ‘ವಾಣಿ’ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಬಳಿಕ 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. 

"

1952ರಲ್ಲಿ ತಂದೆ ನಿಧನರಾದಾಗ, ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ತಾವೇ ವಹಿಸಿಕೊಂಡರು ಹಾಗೂ. ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ನಾಟಕ ಕಂಪನಿ ಕಟ್ಟಿದರು. ‘ಲಂಚಾವತಾರ’ ನಾಟಕವನ್ನು ರಚಿಸಿ ರಂಗ ಪ್ರಯೋಗ ನಡೆಸಿದರು ಹಾಗೂ ಯಶಸ್ವಿಯಾದರು. ಈ ನಾಟಕಕ್ಕೆ ಜನಪ್ರಿಯತೆಯ ಜೊತೆಗೆ ಮಹಾರಾಜರಿಂದ ಸನ್ಮಾನ ಮತ್ತು ‘ನಟರತ್ನಾಕರ’ ಬಿರುದು ಕೂಡಾ ಸಿಕ್ಕಿತು. ‘ನಡುಬೀದಿ ನಾರಾಯಣ’ದಲ್ಲಿ ತೀರ್ಥರೂಪುವಾಗಿ, ‘ಭ್ರಷ್ಟಾಚಾರ’ದಲ್ಲಿ ಧಫೇದಾರ್ ಮುರಾರಿಯಾಗಿ, ‘ಸದಾರಮೆ’ಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, ‘ಕಪಿಮುಷ್ಠಿ’ಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, ‘ಮಕ್ಮಲ್ ಟೋಪಿ’ಯಲ್ಲಿ ನಾಣಿಯಾಗಿ ಹಿರಣ್ಣಯ್ಯನವರು ಜನರನ್ನು ಅಪಾರವಾಗಿ ಆಕರ್ಷಿಸಿದರು. 

ಈ ನಾಟಕಗಳೇ ಅಲ್ಲದೆ ‘ದೇವದಾಸಿ’, ‘ಅನಾಚಾರ’, ‘ಅತ್ಯಾಚಾರ’, ‘ಕಲ್ಕ್ಯಾವತಾರ’, ‘ಅಮ್ಮಾವ್ರ ಅವಾಂತರ’, ‘ಪುರುಷಾಮೃಗ’ ಹೀಗೆ 25ಕ್ಕೂ ಹೆಚ್ಚು ನಾಟಕ ರಂಗಕ್ಕೆ ತಂದ ಕೀರ್ತಿ ಹಿರಣ್ಣಯ್ಯ ಅವರದ್ದು. ‘ಲಂಚಾವತಾರ’ ನಾಟಕವೊಂದೇ 10,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆ ನಿರ್ಮಿಸಿದೆ.

"

ತಮ್ಮ ಅಸಾಧಾರಣ ನಟನೆಗಾಘಿ ನಟರತ್ನಾಕರ, ಕಲಾಗಜಸಿಂಹ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿ, ನೂಜೆರ್ಸಿ, ವಾಷಿಂಗ್‌ಟನ್ ಡಿ.ಸಿ., ಬಾಸ್ಟನ್, ಹೂಸ್ಟನ್, ನೂಯಾರ್ಕ್ ಮುಂತಾದೆಡೆಗಳಿಂದ ಸಂದ ಸನ್ಮಾನ, ನವರತ್ನಾರಾಂ ಪ್ರಶಸ್ತಿ, ಮದರಾಸು, ಹೈದರಾಬಾದು ಕನ್ನಡ ಸಂಘಗಳಿಂದ ಸನ್ಮಾನವೂ ಇವರಿಗೆ ಸಲ್ಲಿವೆ.

"

ಹಿರಣ್ಣಯ್ಯ ಪತ್ನಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ. ಇವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ. ಇಂದು ಸಂಜೆ 6 ಗಂಟೆಗೆ ಹಿರಣ್ಣಯ್ಯ ಅಂತ್ಯ ಸಂಸ್ಕಾರ ನೆರವೇರಲಿದೆ

click me!