
ಬೆಂಗಳೂರು : ಖಾತೆ - ಕ್ಯಾತೆಗೆ ಪ್ರಮುಖ ಕಾರಣ ಬೆಂಗಳೂರು ನಗರಾಭಿವೃದ್ಧಿ ಹಾಗೂ ಗೃಹ ಖಾತೆ ಮತ್ತು ಯುವಜನ ಮತ್ತು ಕ್ರೀಡಾ ಖಾತೆಯನ್ನು ಹೊಂದಿರುವ ಜಿ.ಪರಮೇಶ್ವರ್ ಅವರಿಂದ ಪ್ರಮುಖ ಖಾತೆಗಳಾದ ಬೆಂಗಳೂರು ನಗರಾಭಿವೃದ್ಧಿ ಅಥವಾ ಗೃಹ ಖಾತೆಯನ್ನು ಹಿಂಪಡೆಯಬೇಕು ಎಂದು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬಣವೂ ಒತ್ತಾಯ ನಡೆಸುತ್ತಿದೆ.
ಪರಮೇಶ್ವರ್ ಅವರು ತಮ್ಮ ಬಳಿ ಇರುವ ಹೆಚ್ಚುವರಿ ಖಾತೆಗಳ ಪೈಕಿ ಯುವಜನ ಹಾಗೂ ಕ್ರೀಡಾ ಖಾತೆಯನ್ನು ಬಿಟ್ಟುಕೊಡಲು ಒಪ್ಪಿದ್ದಾರೆ ಎನ್ನಲಾಗಿದೆ. ಆದರೆ, ತಾವು ಉಪ ಮುಖ್ಯಮಂತ್ರಿಯಾಗಿರುವುದರಿಂದ ಗೃಹ ಹಾಗೂ ಬೆಂಗಳೂರು ನಗರಾಭಿವೃದ್ಧಿ ಎರಡು ಖಾತೆಗಳು ತಮಗೆ ಉಳಿಯಬೇಕು. ಇಲ್ಲದಿದ್ದರೆ, ತಮಗೆ ನೀಡಿರುವ ಉಪ ಮುಖ್ಯಮಂತ್ರಿ ಹುದ್ದೆಗೆ ಯಾವುದೇ ಗೌರವ ಬರುವುದಿಲ್ಲ ಎಂಬ ವಾದ ಮಂದಿಟ್ಟಿದ್ದಾರೆ ಎನ್ನಲಾಗಿದೆ.
ಆದರೆ, ಇದನ್ನು ಸಿದ್ದರಾಮಯ್ಯ ಬಣ ಒಪ್ಪುತ್ತಿಲ್ಲ. ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾದವರಲ್ಲೂ ಹಿರಿಯ ಸಚಿವರಿದ್ದಾರೆ. ಅವರಿಗೆ ಪ್ರಮುಖ ಖಾತೆಯನ್ನು ನೀಡಬೇಕಾದ ಅಗತ್ಯವಿದೆ. ಹೀಗಾಗಿ ಪರಮೇಶ್ವರ್ ತಮ್ಮ ಬಳಿ ಇರುವ ಎರಡು ಪ್ರಮುಖ ಖಾತೆಗಳ ಪೈಕಿ ಒಂದನ್ನು ಬಿಟ್ಟುಕೊಡಬೇಕು ಎಂದು ವಾದಿಸುತ್ತಿದ್ದಾರೆ ಎನ್ನಲಾಗಿದೆ.
ಅದೇ ರೀತಿ ಡಿ.ಕೆ. ಶಿವಕುಮಾರ್ ಬಳಿ ಇರುವ ಜಲಸಂಪನ್ಮೂಲ ಖಾತೆ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳ ಪೈಕಿ ಒಂದನ್ನು, ದೇಶಪಾಂಡೆ ಬಳಿ ಇರುವ ಕಂದಾಯ ಹಾಗೂ ಕೌಶಲ್ಯಾಭಿವೃದ್ಧಿ, ಕೆ.ಜೆ. ಜಾಜ್‌ರ್ ಬಳಿ ಇರುವ ಕೈಗಾರಿಕೆ ಹಾಗೂ ಐಟಿ-ಬಿಟಿ, ಯು.ಟಿ. ಖಾದರ್ ಬಳಿ ಇರುವ ನಗರಾಭಿವೃದ್ಧಿ ಹಾಗೂ ವಸತಿ, ಜಮೀರ್ ಅಹ್ಮದ್ ಬಳಿ ಇರುವ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ಖಾತೆಗಳ ಪೈಕಿ ತಲಾ ಒಂದೊಂದು ಖಾತೆಗಳನ್ನು ಬಿಡಬೇಕು ಎಂದು ಸೂಚಿಸಲಾಗಿದೆ.
ಆದರೆ, ಈ ಸಚಿವರು ಪ್ರಮುಖ ಖಾತೆಗಳನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸುತ್ತಿರುವುದು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ವೇಣುಗೋಪಾಲ್ ಮಧ್ಯಸ್ಥಿಕೆ ಅನಿವಾರ್ಯವಾಗಿ ಪರಿಣಮಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.