ಮೈತ್ರಿ ಸರ್ಕಾರಕ್ಕೆ ಎದುರಾಗಿದೆ ಇಕ್ಕಟ್ಟು

First Published Jun 21, 2018, 7:27 AM IST
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಕಡೆಯ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ಯಥಾವತ್‌ ಮುಂದುವರೆಸಬೇಕು ಎಂದು ಕಾಂಗ್ರೆಸ್‌ ಪಟ್ಟು ಹಿಡಿದರೆ, ಜೆಡಿಎಸ್‌ ತನ್ನ ಸಾಲಮನ್ನಾ ಯೋಜನೆಯ ಮೊದಲ ಹಂತದಲ್ಲಿ ಸಹಕಾರ ವಲಯದ ರೈತರ ಸಾಲವನ್ನು ಒಮ್ಮೆಗೇ ಮನ್ನಾ ಮಾಡುವ ಅಂಶವನ್ನು ಮೊದಲ ಬಜೆಟ್‌ನಲ್ಲೇ ಜಾರಿಗೊಳಿಸಲು ಕಾಂಗ್ರೆಸ್‌ ಸಹಮತ ನೀಡಬೇಕು ಎಂದು ಪಟ್ಟು ಹಿಡಿದಿದೆ. 

ಬೆಂಗಳೂರು :  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಕಡೆಯ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ಯಥಾವತ್‌ ಮುಂದುವರೆಸಬೇಕು ಎಂದು ಕಾಂಗ್ರೆಸ್‌ ಪಟ್ಟು ಹಿಡಿದರೆ, ಜೆಡಿಎಸ್‌ ತನ್ನ ಸಾಲಮನ್ನಾ ಯೋಜನೆಯ ಮೊದಲ ಹಂತದಲ್ಲಿ ಸಹಕಾರ ವಲಯದ ರೈತರ ಸಾಲವನ್ನು ಒಮ್ಮೆಗೇ ಮನ್ನಾ ಮಾಡುವ ಅಂಶವನ್ನು ಮೊದಲ ಬಜೆಟ್‌ನಲ್ಲೇ ಜಾರಿಗೊಳಿಸಲು ಕಾಂಗ್ರೆಸ್‌ ಸಹಮತ ನೀಡಬೇಕು ಎಂದು ಪಟ್ಟು ಹಿಡಿದಿದೆ. ಹೀಗಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯ ಮೊದಲ ಸಭೆ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳದೆ ಬರ್ಖಾಸ್‌ ಆಗಿದೆ.

ಈ ಹಿನ್ನೆಲೆಯಲ್ಲಿ ಜೂ.25ರಂದು ಮತ್ತೆ ಸಭೆ ಸೇರಿ ಅಂತಿಮ ಕರಡು ರೂಪಿಸಲು ಸಭೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯ ಕರಡು ರೂಪಿಸಲು ಬುಧವಾರ ಸಮಿತಿಯ ಅಧ್ಯಕ್ಷ ವೀರಪ್ಪ ಮೊಯ್ಲಿ ಅವರ ಅಧ್ಯಕ್ಷತೆಯಲ್ಲಿ ಮೊದಲ ಸಭೆ ನಡೆಯಿತು. ಈ ಸಭೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳನ್ನು ಒಗ್ಗೂಡಿಸಿ ರೂಪಿಸಿದ ಕರಡನ್ನು ಸದಸ್ಯರಿಗೆ ನೀಡಲಾಯಿತು.

ಈ ವೇಳೆ ಮೊದಲ ಬಜೆಟ್‌ನಲ್ಲಿ ಈ ಕರಡಿನ ಯಾವ್ಯಾವ ಅಂಶ ಸೇರಿಸಲು ಶಿಫಾರಸು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆದಾಗ ಸಮಿತಿಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರ ನಡುವೆ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್‌ ಸದಸ್ಯರು, ಪ್ರಣಾಳಿಕೆಯಲ್ಲಿನ ಅಂಶಗಳನ್ನು ಪರಿಗಣಿಸಲು ಇನ್ನೂ ಅವಕಾಶಗಳಿವೆ. ಈ ಬಾರಿ ಕಾಂಗ್ರೆಸ್‌ ಸರ್ಕಾರದ ಅಂತಿಮ ಬಜೆಟ್‌ನಲ್ಲಿದ್ದ ಪ್ರಮುಖ ಹಾಗೂ ಸರ್ಕಾರಕ್ಕೆ ಹೆಸರು ತರುವಂತಹ ಯೋಜನೆಗಳನ್ನು (ಉದಾಹರಣೆಗೆ ಎಲ್ಲ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಸೌಲಭ್ಯ) ಮುಂದುವರೆಸಬೇಕು ಒಂದು ಒತ್ತಾಯಿಸಿದರು ಎನ್ನಲಾಗಿದೆ.

ಇದಕ್ಕೆ ಪ್ರತಿಯಾಗಿ ಜೆಡಿಎಸ್‌ ಸದಸ್ಯರು ನಾಡಿನ ರೈತ ವಲಯದಿಂದ ಸಾಲ ಮನ್ನಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಯೋಜನೆ ಜಾರಿಗೊಳಿಸದಿದ್ದರೆ ಸರ್ಕಾರಕ್ಕೆ ಕೆಟ್ಟಹೆಸರು ಬರುತ್ತದೆ. ಹೀಗಾಗಿ ರೈತರ ಸಾಲ ಮನ್ನಾದ ಮೊದಲ ಭಾಗವಾಗಿ ಸಹಕಾರಿ ವಲಯದ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಇದರ ಮೊತ್ತ 9 ಸಾವಿರ ಕೋಟಿ ರು. ಇದ್ದು, ಸುಮಾರು 40 ಲಕ್ಷ ರೈತರಿಗೆ ಲಾಭವಾಗಲಿದೆ ಎಂದು ವಾದಿಸಿದರು ಎನ್ನಲಾಗಿದೆ.

ಇದಕ್ಕೆ ಕಾಂಗ್ರೆಸ್‌ ಸದಸ್ಯರು, ಸಾಲ ಮನ್ನಾ ಯೋಜನೆಯ ಸಂಪೂರ್ಣ ಹೊರೆಯನ್ನು ರಾಜ್ಯವೇ ಹೊತ್ತುಕೊಂಡರೆ ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತದೆ. ಹೀಗಾಗಿ ಸಾಲ ಮನ್ನಾಗೆ ನೆರವು ನೀಡುವಂತೆ ಕೇಂದ್ರದ ಮೇಲೆ ಒತ್ತಡ ತರಬೇಕು. ರೈತರ ಸಾಲ ಮನ್ನಾಗೆ ಕಾಂಗ್ರೆಸ್‌ ಒಪ್ಪಿಗೆಯಿದೆ. ಬೇಕಿದ್ದರೆ ಪಂಜಾಬ್‌ ಮಾದರಿಯಲ್ಲಿ ರೈತರ ಸಾಲ ಮನ್ನಾ ಮಾಡುವ ಬಗ್ಗೆಯೂ ಚಿಂತನೆ ನಡೆಸುವುದು ಉತ್ತಮ ಎಂದು ತಿಳಿಸಿದರು ಎನ್ನಲಾಗಿದೆ.

ಅಂತಿಮವಾಗಿ ಎರಡೂ ಪಕ್ಷಗಳ ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳನ್ನು ಒಗ್ಗೂಡಿಸಿದ ಕರಡಿನ ಬಗ್ಗೆ ಉಭಯ ಪಕ್ಷಗಳ ನಾಯಕರ ಅಭಿಪ್ರಾಯವನ್ನು ಪಡೆದು ಜೂ.25ರಂದು ಮತ್ತೆ ಸಭೆ ಸೇರಿ ಅಂತಿಮ ಕರಡು ಸಿದ್ಧಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

10 ದಿನದಲ್ಲಿ ವರದಿ - ಮೊಯ್ಲಿ:

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಕಾಂಗ್ರೆಸ್‌-ಜೆಡಿಎಸ್‌ ಪ್ರಣಾಳಿಕೆಗಳನ್ನು ಸೇರಿಸಿ ಪ್ರಥಮ ಕರಡು ರಚನೆ ಮಾಡಿದ್ದೇವೆ. ರೈತರ ಸಾಲ ಮನ್ನಾ ಬಗ್ಗೆ ರೂಪುರೇಷೆ ಸಿದ್ಧ ಮಾಡುತ್ತಿದ್ದು, ಪಂಜಾಬ್‌ ಮಾದರಿಯಲ್ಲಿ ರೈತರ ಸಾಲ ಮನ್ನಾ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಈ ಹಿಂದೆ ಪಂಜಾಬ್‌ ರಾಜ್ಯದಲ್ಲಿ ಸಾಲ ಮನ್ನಾ ಯಶಸ್ವಿಯಾಗಿದೆ. ಆದ್ದರಿಂದ ಅಲ್ಲಿನ ಸಾಲ ಮನ್ನಾ ಮಾಹಿತಿ ಪಡೆಯುತ್ತೇವೆ. ರೈತರ ಸಾಲ ಮನ್ನಾಕ್ಕೆ ನಮ್ಮ ಮೊದಲ ಆದ್ಯತೆ. ಈ ವಿಚಾರದ ಬಗ್ಗೆ ಇಂದು ಮೊದಲ ಕರಡು ರಚನೆ ಮಾಡಿದ್ದೇವೆ. ಮತ್ತೆ 25ರಂದು ಸಮಿತಿ ಸಭೆ ಸೇರಲಿದ್ದು, 10 ದಿನಗಳೊಳಗೆ ಸಮಿತಿ ವರದಿ ನೀಡಲಿದೆ. ಬಳಿಕ ಯಾವ ಕಾರ್ಯಕ್ರಮಕ್ಕೆ ಹೆಚ್ಚು ಆದ್ಯತೆ ನೀಡಬೇಕೆಂದು ತೀರ್ಮಾನಿಸಲಾಗುವುದು ಎಂದರು.

ಮುಸುಕಿನ ಗುದ್ದಾಟ:  ರೈತರ ಸಾಲ ಮನ್ನಾ ವಿಚಾರವಾಗಿ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ ಹೇಳಿಕೆ ನೀಡುವ ವೇಳೆ ಸಚಿವ ಎಚ್‌.ಡಿ.ರೇವಣ್ಣ ಮಧ್ಯಪ್ರವೇಶಿಸಿ ಜೆಡಿಎಸ್‌ ಅಜೆಂಡಾಗಳ ಬಗ್ಗೆ ಮಾತನಾಡಲು ಆರಂಭಿಸಿದರು. ಇದನ್ನು ಕಂಡ ಸಚಿವ ಡಿ.ಕೆ.ಶಿವಕುಮಾರ್‌ ಅವರು, ರೀ... ಅದೆಲ್ಲ ಮುಖ್ಯಮಂತ್ರಿ ಮಾತಾಡ್ತಾರೆ ಬಿಡ್ರಿ ಎಂದು ಗೋಷ್ಠಿಯಿಂದ ಹೊರನಡೆಯಲು ಮುಂದಾದ ಘಟನೆಯೂ ನಡೆಯಿತು. ಆಗ ಮಧ್ಯಪ್ರವೇಶಿಸಿದ ವೀರಪ್ಪ ಮೊಯ್ಲಿ ಅವರು, ಬನ್ನಿ ಒಂದು ನಿಮಿಷ ಇರಿ ಎಂದಾಗ ಶಿವಕುಮಾರ್‌ ಹಿಂತಿರುಗಿ ಬಂದರು.

ಸಭೆಯಲ್ಲಿ ಕಾಂಗ್ರೆಸ್ಸಿನಿಂದ ವೀರಪ್ಪ ಮೊಯ್ಲಿ, ಡಿ.ಕೆ.ಶಿವಕುಮಾರ್‌, ಆರ್‌.ವಿ.ದೇಶಪಾಂಡೆ ಮತ್ತು ಜೆಡಿಎಸ್‌ನಿಂದ ಎಚ್‌.ಡಿ.ರೇವಣ್ಣ ಹಾಗೂ ಬಂಡೆಪ್ಪ ಕಾಶೆಂಪೂರ್‌ ಭಾಗಿಯಾಗಿದ್ದರು.

ಪಂಜಾಬ್‌ ಮಾದರಿ ರೈತರ ಸಾಲಮನ್ನಾ?

ಕಾಂಗ್ರೆಸ್‌-ಜೆಡಿಎಸ್‌ ಪ್ರಣಾಳಿಕೆಗಳನ್ನು ಸೇರಿಸಿ ಪ್ರಥಮ ಕರಡು ರಚನೆ ಮಾಡಿದ್ದೇವೆ. ರೈತರ ಸಾಲ ಮನ್ನಾ ಬಗ್ಗೆ ರೂಪುರೇಷೆ ಸಿದ್ಧ ಮಾಡುತ್ತಿದ್ದು, ಪಂಜಾಬ್‌ ಮಾದರಿಯಲ್ಲಿ ರೈತರ ಸಾಲ ಮನ್ನಾ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ. ರೈತರ ಸಾಲ ಮನ್ನಾಕ್ಕೆ ನಮ್ಮ ಆದ್ಯತೆ. ಈ ವಿಚಾರದ ಬಗ್ಗೆ ಮೊದಲ ಕರಡು ರಚನೆ ಮಾಡಿದ್ದೇವೆ. ಮತ್ತೆ 25ರಂದು ಸಮಿತಿ ಸಭೆ ಸೇರಲಿದ್ದು, 10 ದಿನಗಳೊಳಗೆ ಸಮಿತಿ ವರದಿ ನೀಡಲಿದೆ.

- ವೀರಪ್ಪ ಮೊಯ್ಲಿ, ಸಮಿತಿ ಅಧ್ಯಕ್ಷ

click me!