ಕಾಂಗ್ರೆಸ್‌ಗೆ ರಾಜ್ಯದಲ್ಲಿ ಪ್ರಮುಖ ಎದುರಾಳಿಯೇ ಇಲ್ಲ: ಸಚಿವ ರೆಡ್ಡಿ

By Suvarna Web DeskFirst Published Sep 23, 2017, 1:19 PM IST
Highlights

ಕೇಂದ್ರ ಸರ್ಕಾರ ಲಾಲಿಪಾಪ್‌ನಷ್ಟು ಸಾಲವನ್ನು ಸಹ ಮನ್ನಾ ಮಾಡಿಲ್ಲ ಬದಲಾಗಿ ಕೊಟ್ಟಿದ್ದು ಖಾಲಿ ಚಿಪ್ಪು: ಸಚಿವ ರೆಡ್ಡಿ

ಬೆಂಗಳೂರು: ಕೇಂದ್ರ ಸರ್ಕಾರವು ರೈತರ ಸಾಲ ಮನ್ನಾ ಮಾಡಿಲ್ಲ. ಕಳಸಾ ಬಂಡೂರಿ ಯೋಜನೆ ಸಮಸ್ಯೆ ಸೇರಿದಂತೆ ಹಲವಾರು ವಿಷಯಗಳಲ್ಲಿ ಬಿಜೆಪಿ ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದೆ. ಜೆಡಿಎಸ್ ರಾಜ್ಯದ ದಕ್ಷಿಣ ಭಾಗದಲ್ಲಿ ಹಾಗೂ ಬಿಜೆಪಿ ಉತ್ತರ ಭಾಗದ ಕೆಲವು ಕಡೆ ಮಾತ್ರ ಸ್ಪರ್ಧೆ ನೀಡುತ್ತಿದೆ. ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಬಲ ಎದುರಾಳಿ ಎಂದು ಹೇಳಿಕೊಳ್ಳುವಂತಹ ಯಾವ ಪಕ್ಷಗಳೂ ಇಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡುವ ವಿಷಯದಲ್ಲಿ ಕೇಂದ್ರ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡಿದೆ. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿರುವುದನ್ನು ಲಾಲಿಪಾಪ್ ಎಂದು ಕೇಂದ್ರ ಸಚಿವರೊಬ್ಬರು ಟೀಕೆ ಮಾಡಿದ್ದಾರೆ, ಆದರೆ ಕೇಂದ್ರ ಸರ್ಕಾರ ಲಾಲಿಪಾಪ್‌ನಷ್ಟು ಸಾಲವನ್ನು ಸಹ ಮನ್ನಾ ಮಾಡಿಲ್ಲ ಬದಲಾಗಿ ಖಾಲಿ ಚಿಪ್ಪು ಕೊಟ್ಟಿದೆ ಎಂದರು.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಪಕ್ಷದಲ್ಲಿನ ಏಳೆಂಟು ಮುಖಂಡರ ಮಕ್ಕಳು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ನನ್ನ ಮಗಳು ಸಹ ಜಯನಗರದಿಂದ ಸ್ಪರ್ಧಿಸಲು ಇಚ್ಛಿಸಿದ್ದಾಳೆ, ಸಾಮಾಜಿಕ ಹಾಗೂ ಪರಿಸರ ಚಟುವಟಿಕೆಯಲ್ಲಿ ಭಾಗಿಯಾಗಲಿ ಎಂದು ನಾನು ಬಯಸಿದ್ದೆ. ಆದರೆ ಅವರಿಗೆ ರಾಜಕೀಯದಲ್ಲಿ ತುಂಬಾ ಆಸಕ್ತಿ ಇದೆ. ಒಂದು ವೇಳೆ ಪಕ್ಷದ ಹೈಕಮಾಂಡ್ ಹಾಲಿ ಶಾಸಕರು ಹಾಗೂ ಸಚಿವರ ಮಕ್ಕಳಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದರೆ, ನನ್ನ ಮಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

click me!