ಸಿದ್ದು ಕಾಲ್ಗುಣದಿಂದ ಕಾಂಗ್ರೆಸ್‌ ನಿರ್ನಾಮ: ಈಶ್ವರಪ್ಪ ಕಿಡಿ

By Web DeskFirst Published Sep 16, 2019, 9:08 AM IST
Highlights

ಸಿದ್ದು ಕಾಲ್ಗುಣದಿಂದ ಕಾಂಗ್ರೆಸ್‌ ನಿರ್ನಾಮ: ಈಶ್ವರಪ್ಪ| ಲಾಟರಿ ಹೊಡೆದು 5 ವರ್ಷ ಸಿಎಂ ಆಗಿದ್ದರು| ರಾಜ್ಯದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ?

ಬೆಂಗಳೂರು[ಸೆ.16]: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲುಗುಣದಿಂದ ಕಾಂಗ್ರೆಸ್‌ ಪಕ್ಷ ನಿರ್ನಾಮವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಲೇವಡಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಾಲುಗುಣದ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ ಟ್ವೀಟ್‌ಗೆ ಪುರಭವನದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಐದು ವರ್ಷಗಳ ಕಾಲ ಲಾಟರಿ ಹೊಡೆದು ಮುಖ್ಯಮಂತ್ರಿಯಾಗಿದ್ದರು. ಐದು ವರ್ಷ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ರಾಜ್ಯದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ? ಹಿಂದುಳಿದವರು, ದಲಿತರನ್ನು ಅಭಿವೃದ್ಧಿ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

'ಯಾರು ಪಾಕಿಸ್ತಾನದ ಪರವಾಗಿ ಇರುತ್ತಾರೋ ಅವರು ಬಿಜೆಪಿಗೆ ಓಟು ಹಾಕಲ್ಲ'

ಬಿಜೆಪಿ, ಕೆಜೆಪಿ ಎಂದು ನಮ್ಮ ಪಕ್ಷ ಇಬ್ಭಾಗವಾದಾಗ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ನಲ್ಲಿ ಭವಿಷ್ಯ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 35 ಸಾವಿರ ಮತಗಳಿಂದ ಅವರು ಸೋತರು. ಸಿದ್ದರಾಮಯ್ಯ ಅವರಿಂದಾಗಿಯೇ ಕಾಂಗ್ರೆಸ್‌ಗೆ ಈ ಗತಿ ಬಂದಿದೆ. ಅವರ ಕಾಲುಗುಣದ ಬಗ್ಗೆ ಅವರೇ ತಿಳಿದುಕೊಳ್ಳಬೇಕು. ಅವರು ಯಡಿಯೂರಪ್ಪನವರ ಬಗ್ಗೆ ಮಾತನಾಡುವ ಅಗತ್ಯ ಇಲ್ಲ ಎಂದು ಟೀಕಿಸಿದರು.

ಇಂದು ದೇಶ ಮೆಚ್ಚುವ ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಪಂಚವೇ ಮೆಚ್ಚಿದೆ. ಸಿದ್ದರಾಮಯ್ಯ ಲೆಕ್ಕಕ್ಕೆ ಇಲ್ಲ. ಅವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಕೇವಲ ಕರ್ನಾಟಕದಲ್ಲಿ ಮಾತ್ರ ಪ್ರವಾಹ ಎದುರಾಗಿಲ್ಲ. ದೇಶದ ಹತ್ತು ರಾಜ್ಯಗಳಲ್ಲಿ ಜಲಪ್ರಳಯವಾಗಿದೆ. ಯಡಿಯೂರಪ್ಪ ಕಾಲುಗುಣದಿಂದ ಜಲಪ್ರಳಯ ಆಯ್ತಾ? ಮೌಢ್ಯದಲ್ಲಿ ನಂಬಿಕೆ ಇಲ್ಲ ಎನ್ನುವ ಸಿದ್ದರಾಮಯ್ಯ ಗೋಸುಂಬೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಜರಿದರು.

click me!