ಕಾಂಗ್ರೆಸ್‌ ಪ್ರಣಾಳಿಕೆ ಇಂದು ಬಿಡುಗಡೆ : ಜನರಿಗೆ ಯಾವ ಭಾಗ್ಯ

First Published Apr 27, 2018, 7:51 AM IST
Highlights

ರಾಜ್ಯ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಹಾಗೂ ಸ್ವತಃ ಎಐಸಿಸಿ ಅಧ್ಯಕ್ಷರಿಂದ ಕಾಂಗ್ರೆಸ್‌ನ ರಾಜ್ಯ ಪ್ರಣಾಳಿಕೆ  ಇಂದು ಬಿಡುಗಡೆಯಾಗಲಿದೆ. ನಗರದ ಟಿಎಂಎ ಪೈ ಸಭಾಂಗಣದಲ್ಲಿ ಬೆಳಗ್ಗೆ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಸಾಕ್ಷಿಯಾಗಲಿದ್ದಾರೆ.

ಮಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಹಾಗೂ ಸ್ವತಃ ಎಐಸಿಸಿ ಅಧ್ಯಕ್ಷರಿಂದ ಕಾಂಗ್ರೆಸ್‌ನ ರಾಜ್ಯ ಪ್ರಣಾಳಿಕೆ  ಇಂದು ಬಿಡುಗಡೆಯಾಗಲಿದೆ. ನಗರದ ಟಿಎಂಎ ಪೈ ಸಭಾಂಗಣದಲ್ಲಿ ಬೆಳಗ್ಗೆ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಸಾಕ್ಷಿಯಾಗಲಿದ್ದಾರೆ.

ಈ ಬಗ್ಗೆ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ, ಈ ಬಾರಿ ಜನಮುಖಿ ಪ್ರಣಾಳಿಕೆಯನ್ನು ನೀಡುತ್ತಿದ್ದು ಇದು ರಾಜ್ಯ, ಪ್ರಾದೇಶಿಕ ಮತ್ತು ಕಂದಾಯ ವಿಭಾಗಗಳೆಂಬ ಮೂರು ಭಾಗಗಳನ್ನು ಒಳಗೊಂಡಿದೆ. ಮಾತ್ರವಲ್ಲದೆ, ಪ್ರತಿ ಜಿಲ್ಲೆಗೊಂದರಂತೆ ರಾಜ್ಯದ 30 ಜಿಲ್ಲೆಗಳಿಗೂ ಆಯಾ ಜಿಲ್ಲೆಯ ಬೇಡಿಕೆಗಳಿಗೆ ಅನುಗುಣವಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.

ನಾಲ್ಕು ತಿಂಗಳ ಸಂಶೋಧನೆ: ಪ್ರಣಾಳಿಕೆ ತಯಾರಿಕೆಗೆ 4 ತಿಂಗಳ ಹಿಂದೆ 15 ಮಂದಿಯ ಸಮಿತಿ ರಚನೆಯಾಗಿತ್ತು. ಆರಂಭದಲ್ಲಿ ರಾಜ್ಯವನ್ನು 6 ವಿಭಾಗಗಳನ್ನಾಗಿ ವಿಂಗಡಿಸಲಾಗಿದ್ದು, ಪ್ರತಿ ವಿಭಾಗದಲ್ಲೂ ತಜ್ಞರು, ರೈತ, ಕಾರ್ಮಿಕ, ಕೈಗಾರಿಕೆ ಇತ್ಯಾದಿ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು, ಜನರು, ತಳ ಹಂತದಿಂದ ಹಿಡಿದು ನಾಯಕರವರೆಗಿನ ಕಾಂಗ್ರೆಸ್‌ ಕಾರ್ಯಕರ್ತರನ್ನು ಒಗ್ಗೂಡಿಸಿ ಚರ್ಚೆ ನಡೆಸಿದ್ದೇವೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಶಿಕ್ಷಣ ಇತ್ಯಾದಿ ಎಲ್ಲ ಕ್ಷೇತ್ರಗಳ ವಿಚಾರಗಳ ಸಮಾಲೋಚನೆ ನಡೆಸಿದ್ದೇವೆ. ಬುಡಕಟ್ಟು ಜನರ ವಿಚಾರದ ಕುರಿತೂ ಅಧ್ಯಯನ ನಡೆಸಿದ್ದು, ಇವೆಲ್ಲ ಅಂಶಗಳನ್ನೂ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ವಿವರಿಸಿದರು. ಈ ಹಿಂದೆ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ‘ವಿಶನ್‌ 2025’ ಎನ್ನುವ ವಿಶೇಷ ಅಧ್ಯಯನ ನಡೆಸಿತ್ತು. ಇದರ ಅಂಶಗಳನ್ನೂ ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ ಎಂದು ಮೊಯ್ಲಿ ಹೇಳಿದರು.


ಬಿಡುಗಡೆ ‘ಯುನೀಕ್‌ ಶೋ’

ಈ ಬಾರಿಯ ಕಾಂಗ್ರೆಸ್‌ ಪ್ರಣಾಳಿಕೆಯನ್ನು ವೈಶಿಷ್ಟ್ಯಪೂರ್ಣವಾಗಿ ಬಿಡುಗಡೆ ಮಾಡಲಾಗುವುದು. ಇದೊಂದು ‘ಯುನೀಕ್‌ ಶೋ’ ಆಗಲಿದೆ. ಬೇರೆ ಪಕ್ಷದವರು ಮಾಡುವಂತೆ ಅಲ್ಲ. ವಿಶೇಷ ರೀತಿಯಲ್ಲಿ ಮಾಡ್ತೇವೆ, ಕಾದು ನೋಡಿ ಎಂದು ವೀರಪ್ಪ ಮೊಯ್ಲಿ ಹೇಳಿದರು. ರಾಜ್ಯ ಪ್ರಣಾಳಿಕೆ ಬಿಡುಗಡೆ ಮಂಗಳೂರಿನಲ್ಲಾದರೆ, ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿಯಲ್ಲೂ ಪ್ರಣಾಳಿಕೆಯ ಕುರಿತಾಗಿ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.

click me!