
ಬೆಂಗಳೂರು : ಮುಂಬರುವ ಚುನಾವಣೆಗೆ ಅಭ್ಯರ್ಥಿ ಆಯ್ಕೆಗಾಗಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಅರ್ಜಿಗಳ ಬಗೆಗಿನ ಚರ್ಚೆಗಿಂತ ರಾಹುಲ್ ಗಾಂಧಿ ಅವರ ಮೂರನೇ ಹಂತದ ಜನಾಶೀರ್ವಾದ ಯಾತ್ರೆಯನ್ನು ಯಶಸ್ವಿಗೊಳಿಸುವುದು ಹೇಗೆ ಎಂಬ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ.
ರಾಹುಲ್ ಗಾಂಧಿ ಮಾ.20 ಹಾಗೂ 21ರಂದು ಕರಾವಳಿ ಹಾಗೂ ಮಾ.24 ಹಾಗೂ 25ರಂದು ಹಳೆ ಮೈಸೂರು ಭಾಗದಲ್ಲಿ ಜನಾಶೀರ್ವಾದ ಪ್ರವಾಸ ಕೈಗೊಳ್ಳಲಿದ್ದಾರೆ. ರಾಹುಲ್ ಪ್ರವಾಸ ಯಶಸ್ವಿಗೊಳಿಸುವುದನ್ನು ಕಾಂಗ್ರೆಸ್ ಎಷ್ಟುಗಂಭೀರವಾಗಿ ಪರಿಗಣಿಸಿದೆಯೆಂದರೆ ಈ ಭಾಗದ ಉಸ್ತುವಾರಿ ಸಚಿವರು, ಮುಖಂಡರು ಹಾಗೂ ಪದಾಧಿಕಾರಿಗಳಿಗೆ ಮಾ.16ರಿಂದ ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಮಹಾಧಿವೇಶನದಲ್ಲಿ ಪಾಲ್ಗೊಳ್ಳದೆ ಪ್ರವಾಸದ ಯಶಸ್ಸಿಗೆ ಕ್ಷೇತ್ರದಲ್ಲೇ ಶ್ರಮಿಸಲು ತಾಕೀತು ಮಾಡಿದೆ.
ವಿಶೇಷವಾಗಿ ಬಿಜೆಪಿ ಪ್ರಬಲವಾಗಿರುವ ಕರಾವಳಿ ಭಾಗದಲ್ಲಿ ರಾಹುಲ್ ಗಾಂಧಿ ಅವರ ಪ್ರವಾಸವನ್ನು ಯಶಸ್ವಿಗೊಳಿಸಲು ರೂಪಿಸಬೇಕಾದ ಕಾರ್ಯತಂತ್ರದ ಬಗ್ಗೆ ಚುನಾವಣಾ ಸಮಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ರಾಹುಲ್ ಅವರ ಕರಾವಳಿ ಪ್ರವಾಸದ ವೇಳೆ ಬಿಜೆಪಿ ಕಿರಿಕಿರಿ ಉಂಟುಮಾಡಲು ಯತ್ನಿಸುವುದು ಖಚಿತ. ಇದನ್ನು ತಡೆಯಬೇಕು. ಯಾವುದೇ ಅಹಿತಕರ ಹಾಗೂ ಮುಜುಗರ ತರುವಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ರಾಹುಲ್ ಪಾಲ್ಗೊಳ್ಳುವ ಕಾರ್ಯಕ್ರಮಗಳು ಯಶಸ್ವಿಯಾಗಲು ಜನ ಹೆಚ್ಚಿನ ಸಂಖ್ಯೆ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಆ ಭಾಗದ ನಾಯಕರಿಗೆ ತಾಕೀತು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಬಿಜೆಪಿಗೆ ಬ್ಯಾಡ್ ಲಕ್:
ಇದೇ ವೇಳೆ ಗೆಲುವಿನ ಮಾನದಂಡವಿಟ್ಟುಕೊಂಡು ಅರ್ಹ ಅಭ್ಯರ್ಥಿಗಳ ಪ್ಯಾನೆಲ್ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಸಮಿತಿಯ ಸದಸ್ಯರಿಗೆ ಸೂಚನೆ ನೀಡಿದರು.
ನಿಮ್ಮ ಹಿಂಬಾಲಕರು, ಪ್ರಭಾವ ಬೀರಿದವರು ಎಂಬ ಕಾರಣಕ್ಕೆ ಪಟ್ಟಿಯಲ್ಲಿ ಅನರ್ಹರ ಹೆಸರು ಸೇರಿಸಬೇಡಿ. ಏಕೆಂದರೆ, ಪಟ್ಟಿಯಲ್ಲಿ ಯಾವುದೇ ಹೆಸರು ಬಂದರೂ ಪ್ರತಿ ಕ್ಷೇತ್ರದ ಬಗ್ಗೆ ಈಗಾಗಲೇ ಕೆಪಿಸಿಸಿ ಹಾಗೂ ಎಐಸಿಸಿ ಪ್ರತ್ಯೇಕವಾಗಿ ನಡೆಸಿರುವ ಸಮೀಕ್ಷೆ ವರದಿ, ವೀಕ್ಷಕರು ಮತ್ತು ಸ್ಥಳೀಯ ಪದಾಧಿಕಾರಿಗಳು ನೀಡಿರುವ ವರದಿಯನ್ನು ಆಧರಿಸಿಯೇ ಅಂತಿಮವಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಹೀಗಾಗಿ, ಅನರ್ಹರನ್ನು ಪಟ್ಟಿಯಲ್ಲಿ ಸೇರಿಸಬೇಡಿ ಎಂದು ಸೂಚಿಸಿದರು ಎನ್ನಲಾಗಿದೆ.
ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಬಿಜೆಪಿಯನ್ನು ಮಣಿಸಿದರೆ ನಮ್ಮ ರಾಜ್ಯದಿಂದಲೇ ಆ ಪಕ್ಷಕ್ಕೆ ಆರಂಭವಾಗುವ ಬ್ಯಾಡ್ ಲಕ್ ದೇಶಾದ್ಯಂತ ವಿಸ್ತರಿಸಲಿದೆ. ಹೀಗಾಗಿ ಪ್ರತಿಷ್ಠೆ ಬಿಟ್ಟು ದೇಶ ಹಾಗೂ ಪಕ್ಷದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ನಾಯಕರು ಸಭೆಯಲ್ಲಿ ಸೂಚಿಸಿದರು ಎಂದು ಮೂಲಗಳು ಹೇಳಿವೆ.
ಪದ್ಮನಾಭನಗರ, ಬೊಮ್ಮನಹಳ್ಳಿಯಲ್ಲಿ ವಲಸಿಗರಿಗೆ ಟಿಕೆಟ್:
ಸಭೆಯಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಗೆದ್ದಿರುವ ಕ್ಷೇತ್ರಗಳಾದ ಪದ್ಮನಾಭನಗರ ಹಾಗೂ ಬೊಮ್ಮನಹಳ್ಳಿ ಕ್ಷೇತ್ರಗಳಿಗೆ ಬಿಜೆಪಿ ಬಂಡಾಯಗಾರರಿಗೆ ಟಿಕೆಟ್ ನೀಡಲು ಸಭೆ ತೀರ್ಮಾನಿಸಿತು ಎಂದು ಮೂಲಗಳು ಹೇಳಿವೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಈ ಕ್ಷೇತ್ರಗಳ ಕೆಲ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದು, ಅವರು ಶೀಘ್ರವೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರಿಗೆ ಪಕ್ಷದ ಟಿಕೆಟ್ ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.
ಮಂಗಳೂರಿನಿಂದ ಶೃಂಗೇರಿಗೆ ರಾಹುಲ್
ರಾಹುಲ್ ಗಾಂಧಿ ಅವರ ಕರಾವಳಿ ಪ್ರವಾಸದ ಕಾರ್ಯಕ್ರಮ ನಿಗದಿಯಾಗಿದೆ. ಮಾ.20ರಂದು ಕಾಪುವಿಗೆ ಆಗಮಿಸುವ ಅವರು, ಕಾಪುವಿನಲ್ಲಿ ಕಾರ್ನರ್ ಮೀಟಿಂಗ್ ನಡೆಸಲಿದ್ದಾರೆ. ಅನಂತರ ಮಂಗಳೂರಿನವರೆಗೆ ರೋಡ್ಶೋ ನಡೆಸುವರು. ಸಂಜೆ ಮಂಗಳೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವ ಅವರು ಅಂದು ರಾತ್ರಿ ಮಂಗಳೂರಿನಲ್ಲಿ ತಂಗುವರು.
ಮಾ.21ಕ್ಕೆ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ತೆರಳಿ ಶಾರದಾಂಬೆಯ ದರ್ಶನ ಪಡೆಯವರು. ಅನಂತರ ಶೃಂಗೇರಿಯಲ್ಲಿ ಸಾರ್ವಜನಿಕ ಸಭೆ ನಡೆಸುವರು. ಇದಾದ ನಂತರ ಶೃಂಗೇರಿಯಿಂದ ಹಾಸನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು. ಸಂಜೆ ದೆಹಲಿಗೆ ತೆರಳುವರು. ಮಾ.24 ಹಾಗೂ ಮಾ.25ರಂದು ಅವರು ಮಂಡ್ಯ, ಮೈಸೂರು ಹಾಗೂ ಚಾಮರಾಜನಗರದಲ್ಲಿ ಪ್ರವಾಸ ಕೈಗೊಳ್ಳುವರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.