
ನವದೆಹಲಿ: ಸತತ ಸೋಲುಗಳಿಂದ ಹೊರಬಂದು ಪುಟಿದೇಳಲು ತವಕಿಸುತ್ತಿರುವ ಕಾಂಗ್ರೆಸ್ ಪಕ್ಷ, ದಶಕಗಳಿಂದ ಪಾಲಿಸಿಕೊಂಡು ಬರುತ್ತಿದ್ದ ಸಂಪ್ರದಾಯವೊಂದಕ್ಕೆ ಎಳ್ಳುನೀರು ಬಿಟ್ಟಿದೆ. ಪಕ್ಷದ ಒಬ್ಬ ಪ್ರಧಾನ ಕಾರ್ಯದರ್ಶಿ ಅಥವಾ ಒಬ್ಬ ಪದಾಧಿಕಾರಿಗೆ ಹಲವು ರಾಜ್ಯಗಳ ಉಸ್ತುವಾರಿ ನೀಡಿ, ಜವಾಬ್ದಾರಿಯ ಹೊರೆ ಹೊರಿಸುವ ಪರಿಪಾಠವನ್ನು ಕೊನೆಗಾಣಿಸಿದೆ. ಇದರ ಬದಲಾಗಿ ಇನ್ನು ಮುಂದೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಥವಾ ಪದಾಧಿಕಾರಿಗೆ ಒಂದು ರಾಜ್ಯದ ಉಸ್ತುವಾರಿಯನ್ನಷ್ಟೇ ವಹಿಸಲು ನಿರ್ಧರಿಸಿದೆ.
ಒಬ್ಬ ಪ್ರಧಾನ ಕಾರ್ಯದರ್ಶಿ ಅಥವಾ ಓರ್ವ ಪದಾಧಿಕಾರಿಗೆ ಹಲವು ರಾಜ್ಯಗಳ ಉಸ್ತುವಾರಿಯನ್ನು ಒಪ್ಪಿಸಿದರೆ ಅವರು ಒಂದು ರಾಜ್ಯದ ಮೇಲೆ ಸೂಕ್ತವಾಗಿ ಗಮನಕೇಂದ್ರೀಕರಿಸಲು ಆಗದು. ಅದರ ಫಲವಾಗಿ ಚುನಾವಣೆಗಳಲ್ಲಿ ಒಂದಾದ ಮೇಲೊಂದರಂತೆ ರಾಜ್ಯಗಳನ್ನು ಕಾಂಗ್ರೆಸ್ ಕಳೆದುಕೊಳ್ಳುತ್ತಿದೆ. ನಾಯಕರು ಹಾಗೂ ಕಾರ್ಯಕರ್ತರು ಬೇರೆ ಪಕ್ಷಗಳಿಗೆ ವಲಸೆ ಹೋಗುವಂತಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಲಹೆಗಳು ಬಂದಿದ್ದವು. ಹೀಗಾಗಿ ಐತಿಹಾಸಿಕ ಬದಲಾವಣೆಯನ್ನು ತರಲಾಗಿದೆ. ಇದರಿಂದ ನಿರ್ದಿಷ್ಟ ರಾಜ್ಯದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಿ, ಸಂಘಟಿಸಲು ಅನುಕೂಲವಾಗುತ್ತದೆ ಎಂದು ಕಾಂಗ್ರೆಸ್ ಬಲವಾಗಿ ನಂಬಿದೆ.
ಹೊಸ ತಂತ್ರಗಾರಿಕೆಯ ಭಾಗವಾಗಿ ಪ್ರಧಾನ ಕಾರ್ಯದರ್ಶಿ ಅಥವಾ ಹಿರಿಯ ನಾಯಕರಿಗೆ ಒಂದು ರಾಜ್ಯದ ಉಸ್ತುವಾರಿ ವಹಿಸಲಾಗುತ್ತದೆ. ಅವರಿಗೆ ನೆರವಾಗಲು 4-5 ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಲಾಗುತ್ತದೆ. ಭವಿಷ್ಯದ ನಾಯಕತ್ವ ಸೃಷ್ಟಿಗಾಗಿ ಯುವನಾಯಕರನ್ನು ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ, ಜವಾಬ್ದಾರಿ ನೀಡಲಾಗುತ್ತದೆ.
2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕಂಡುಕೇಳರಿಯದ ರೀತಿ ಸೋಲು ಅನುಭವಿಸಿತ್ತು. 13 ರಾಜ್ಯಗಳಲ್ಲಿ ಖಾತೆ ತೆರೆಯಲೂ ವಿಫಲವಾಗಿತ್ತು. ಆ ವೇಳೆ ಆ ಪಕ್ಷ 13 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. ಆದರೆ ಈಗ ಕೇವಲ 6 ರಾಜ್ಯಗಳನ್ನು ಮಾತ್ರವೇ ಆಳುತ್ತಿದೆ. ಹೀಗಾಗಿ ಕಾಂಗ್ರೆಸ್ ಮತ್ತೆ ಪುಟಿದೇಳಲು ಪ್ರಯತ್ನಗಳನ್ನು ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.