ಭುಗಿಲೆದ್ದಿದೆ ಉತ್ತರ ಕರ್ನಾಟಕ ರಾಜಕೀಯ

By Web DeskFirst Published Jul 30, 2018, 7:23 AM IST
Highlights

ಉತ್ತರ ಕರ್ನಾಟಕ ರಾಜಕೀಯ ಭುಗಿಲೆದ್ದಿದೆ. ರಾಜಕೀಯ ಪಕ್ಷಗಳ ನಡುವೆ ಪ್ರತ್ಯೇಕ ರಾಜ್ಯದ ವಿಚಾರವು ಪರಸ್ಪರ ವಾಗ್ಯುದ್ದಕ್ಕೆ ಕಾರಣವಾಗಿದೆ. 

ಬೆಂಗಳೂರು :  ಕರ್ನಾಟಕ ರಾಜ್ಯ ವಿಭಜನೆಯ ಬಗ್ಗೆ ಪರ ಮತ್ತು ವಿರೋಧ ಹೇಳಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪ್ರಸ್ತುತ ಮೈತ್ರಿ ಸರ್ಕಾರದ ಭಾಗವಾದ ಕಾಂಗ್ರೆಸ್, ಜೆಡಿಎಸ್ ಮತ್ತು ವಿರೋಧ ಪಕ್ಷವಾದ ಬಿಜೆಪಿ ನಡುವಣ ರಾಜಕೀಯ ಸಮರವಾಗಿ ಮಾರ್ಪಟ್ಟಿದೆ. ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟದ ಬಗ್ಗೆ ಬಿಜೆಪಿ ಉಪಾಧ್ಯಕ್ಷ ಬಿ.ಶ್ರೀರಾಮುಲು ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಇದೀಗ ಕಾಂಗ್ರೆಸ್, ಬಿಜೆಪಿ ನಾಯಕರಿಂದ ಹೇಳಿಕೆ, ಪ್ರತಿಹೇಳಿಕೆಗಳ ಸುರಿಮಳೆಯೇ ಸುರಿದಿದೆ.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿ ಬಿಜೆಪಿ ಮೇಲೆ ನೇರ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ. ಮೈಸೂರಿಗೆ ಸುದ್ದಿಗಾರರೊಡನೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದು ಕೇಂದ್ರ ಸರ್ಕಾರ ಹೆಚ್ಚೇನು ಅನುದಾನ ನೀಡಲಿಲ್ಲ ಎಂದು ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಬಿ.ಶ್ರೀರಾಮುಲು ಅವರ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರತ್ಯೇಕ ರಾಜ್ಯದ ಕೂಗಿಗೆ ಧ್ವನಿ ಗೂಡಿಸಿರುವ ಶ್ರೀರಾಮುಲು ಅವರಿಗೆ ಉತ್ತರ ಕರ್ನಾಟಕದ ಬಗ್ಗೆ ಗೊತ್ತೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಏನೂ ಅರಿಯದೇ ಹೇಳಿಕೆ ಕೊಡ್ತಿದ್ದಾರೆ. ಪ್ರತ್ಯೇಕ ರಾಜ್ಯದ ಅಗತ್ಯವಿಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಸರ್ವಕ್ಷೇತ್ರದಲ್ಲೂ ಈ ಭಾಗಕ್ಕೆ ನ್ಯಾಯ
ದೊರಕುವಂತಾಗಲು ಪ್ರಯತ್ನ ಮಾಡ್ತೇವೆ ಎಂದು ಹೇಳಿದ್ದಾರೆ. 

ಸಿಎಂ ವಿರುದ್ಧ ಬಿಜೆಪಿ ಆಕ್ರೋಶ: ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರ ಹೇಳಿಕೆ ಪ್ರತ್ಯೇಕ ಉತ್ತರ ಕರ್ನಾಟಕ ಕೂಗಿಗೆ ಪ್ರಚೋದನೆ ನೀಡಿ ದ್ದು ಈ ಕೂಗು ಇನ್ನಷ್ಟು ಬಲಗೊಳ್ಳುವ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚೆತ್ತುಕೊಳ್ಳಲಿ ಎಂದು ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಸಲಹೆ ನೀಡಿದ್ದಾರೆ. ಉತ್ತರ ಕರ್ನಾಟಕಕ್ಕೆ ಎಲ್ಲ ಕ್ಷೇತ್ರದಲ್ಲೂ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಅವರು ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಬಹಿರಂಗವಾಗಿ ಚರ್ಚಿ ಸಲು ನಾನು ಸಿದ್ಧ ಎಂದು ಘೋಷಿಸಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್‌ನದ್ದು ಒಡೆ  ಆಳುವ ನೀತಿ. ಈ ಅನ್ಯಾಯಕ್ಕಾಗಿಯೇ ಉತ್ತರ ಕರ್ನಾಟಕದ ಭಾಗದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ವೀರಶೈವ-ಲಿಂಗಾಯತ ಧರ್ಮ ಒಡೆಯುವ ಕೆಲಸ ಮಾಡಿದರೆ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಜನತೆ ನನಗೆ ವೋಟು ಹಾಕಿಲ್ಲ, ನಾನೇಕೆ ಅವರಿಗೆ ಕೆಲಸ ಮಾಡಬೇಕು ಎನ್ನುವ ಮೂಲಕ ರಾಜ್ಯವನ್ನೇ ಒಡೆಯವ ಕೆಲಸ ಮಾಡುತ್ತಿ ದ್ದಾರೆ ಎಂದು ಆರೋಪಿಸಿದರು. 

ಇದೇ  ವೇಳೆ ಉತ್ತರ ರ್ನಾಟಕದ ಬಗ್ಗೆ ಹಗುರವಾಗಿ ಮಾತನಾಡುವ ಕುಮಾರಸ್ವಾಮಿ  ಯಾವ ಪುರುಷಾರ್ಥಕ್ಕಾಗಿ ಮನೆ ಮಾಡಿದರು ಎಂದೂ ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ಕೇವಲ ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಾಗಿದ್ದೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬಂದಿದ್ದು ಈಗಿನ ಸಮ್ಮಿಶ್ರ ಸರ್ಕಾರವೇ ಇದಕ್ಕೆ ಮೂಲ ಕಾರಣ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದಾರೆ. ಇದೇವೇಳೆ ಮಾಜಿ ಸಚಿವ ಸಿ.ಎಂ. ಉದಾಸಿಯವರೂ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿದ ಲೋಪದಿಂದ ಜನರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

click me!