
ಬೆಂಗಳೂರು (ಜು. 24): ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಬಗ್ಗೆ ಗೊಂದಲ, ಅಪಸ್ವರ ಹಾಗೂ ಪರ-ವಿರೋಧ ಹೇಳಿಕೆಗಳು ಬಹಿರಂಗವಾಗಿ ಕೇಳಿಬರುತ್ತಿರಬಹುದು. ಆದರೆ, ಅಂತರಂಗದಲ್ಲಿ ಉಭಯ ಪಕ್ಷಗಳ ನಾಯಕರು ಕೊಡು-ಕೊಳ್ಳುವಿಕೆ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಹೀಗಾಗಿ ಪ್ರಸ್ತುತ ಗೊಂದಲವಿರುವುದು ಸ್ಥಾನಗಳ ಹಂಚಿಕೊಳ್ಳುವಿಕೆ ಬಗ್ಗೆ ಮಾತ್ರ.
ಜೆಡಿಎಸ್ ಹತ್ತು ಸ್ಥಾನಗಳಿಗೆ ಬೇಡಿಕೆಯಿಟ್ಟು, 8 ಸ್ಥಾನ ದೊರಕಿದರೆ ಸಮಾಧಾನಗೊಳ್ಳುವ ಮನಸ್ಥಿತಿಯಲ್ಲಿದ್ದರೆ, ಕಾಂಗ್ರೆಸ್ ಐದು ಸ್ಥಾನಗಳನ್ನು ಮಾತ್ರ ಜೆಡಿಎಸ್‌ಗೆ ಬಿಟ್ಟುಕೊಡುವ ಮನಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಮೂಲಗಳ ಪ್ರಕಾರ ಜೆಡಿಎಸ್ ತಾನು ಗೆದ್ದಿರುವ ಎರಡು ಸ್ಥಾನಗಳೂ ಸೇರಿದಂತೆ ಒಟ್ಟು ಹತ್ತು ಸ್ಥಾನಗಳು ಬೇಕು ಎಂದು ಬಹಿರಂಗ ಬೇಡಿಕೆಯಿಟ್ಟಿದೆ. ಅಂತಿಮವಾಗಿ ಎಂಟು ಸ್ಥಾನಗಳನ್ನು ಬಿಟ್ಟುಕೊಟ್ಟರೆ ಆ ಪಕ್ಷ ಖುಷ್ ಆಗಲಿದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
ಆದರೆ, ಜೆಡಿಎಸ್‌ಗೆ ಐದು ಸ್ಥಾನಗಳನ್ನು ಮಾತ್ರ ಬಿಟ್ಟುಕೊಡುವ ಮನಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಹೀಗಾಗಿ ಹಗ್ಗಜಗ್ಗಾಟ ನಡೆದಿರುವುದು ಐದರಿಂದ ಎಂಟು ಸ್ಥಾನಗಳ ನಡುವೆ ಎಂದು ತಿಳಿದುಬಂದಿದೆ. ಈ ಮೂಲಗಳ ಪ್ರಕಾರ ಜೆಡಿಎಸ್ ತಾನು ಗೆದ್ದಿರುವ ಮಂಡ್ಯ ಹಾಗೂ ಹಾಸನ ಕ್ಷೇತ್ರಗಳನ್ನು ಕಡ್ಡಾಯವಾಗಿ ತನಗೆ ಬಿಟ್ಟುಕೊಡಬೇಕು ಎಂದು ಕೇಳುತ್ತಿದೆ. ಇದಲ್ಲದೆ, ಕಾಂಗ್ರೆಸ್‌ನ ಕ್ಷೇತ್ರಗಳಾದ ರಾಯಚೂರು, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬಿಜೆಪಿಯ ಕ್ಷೇತ್ರಗಳಾದ ಬೆಂಗಳೂರು ಉತ್ತರ ಹಾಗೂ ಶಿವಮೊಗ್ಗ ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡುವಂತೆ ಕೇಳುತ್ತಿದೆ.
ಕಾಂಗ್ರೆಸ್ ಪಕ್ಷವು ಜೆಡಿಎಸ್ ಗೆದ್ದಿರುವ ಎರಡು ಸ್ಥಾನಗಳಾದ ಮಂಡ್ಯ ಹಾಗೂ ಹಾಸನ, ಬಿಜೆಪಿಯ ಎರಡು ಕ್ಷೇತ್ರಗಳಾದ ಬೆಂಗಳೂರು ಉತ್ತರ ಹಾಗೂ ಶಿವಮೊಗ್ಗವನ್ನು ಬಿಟ್ಟುಕೊಡಲು ತಯಾರಿದೆ. ಇನ್ನು ತಾನು ಗೆದ್ದಿರುವ ಕ್ಷೇತ್ರಗಳ ಪೈಕಿ ತುಮಕೂರನ್ನು ಬಿಟ್ಟುಕೊಡುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.