
ಬೆಂಗಳೂರು[ಜೂ.25]: ಐಎಂಎ ಹಗರಣದ ರೂವಾರಿ ಮನ್ಸೂರ್ ಖಾನ್ ದೇಶಕ್ಕೆ ಹಿಂತಿರುಗಿ ಬಂದು, ಹಗರಣದಲ್ಲಿ ಯಾವ್ಯಾವ ರಾಜಕಾರಣಿಗಳು, ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಪಟ್ಟಿಕೊಡಲಿ. ಅವರಿಂದ ರಾಜ್ಯದ ಜನರ ದುಡ್ಡು ವಾಪಸ್ ಕೊಡಿಸೋಣ. ನಾನು ಮತ್ತೊಮ್ಮೆ ಮನ್ಸೂರ್‌ಗೆ ಮನವಿ ಮಾಡುತ್ತೇನೆ, ಅವರು ದೇಶಕ್ಕೆ ಹಿಂತಿರುಗಿ ಬರಲಿ ಎಂದು ಆಹಾರ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಐಎಂಎ ಮಾಲಿಕ ಮನ್ಸೂರ್ ಖಾನ್‌ಗೆ ಈ ಹಿಂದೆಯೇ ಮನವಿ ಮಾಡಿದ್ದೆ. ಮೊದಲು ರಾಜ್ಯಕ್ಕೆ ಬನ್ನಿ, ಬಡವರ ಹಣವನ್ನು ಹಿಂತಿರುಗಿಸುವ ನಿಟ್ಟಿನಲ್ಲಿ ಪ್ರಯತ್ನಿಸೋಣ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ವಿಡಿಯೋದಲ್ಲಿ ಹೇಳಿರುವಂತೆ ಯಾವ ರಾಜಕಾರಣಿಗಳು, ಅಧಿಕಾರಿಗಳು ಪ್ರಕರಣದಲ್ಲಿ ಇದ್ದಾರೆ ಎಂಬುದು ಸಹ ಗೊತ್ತಾಗಬೇಕು. ಬಡ ಜನರ ಹಣ ವಾಪಸ್ ಸಿಗಲಿ ಎಂಬ ಕಾರಣಕ್ಕಾಗಿ ‘ನಿಮ್ಮ ಜೊತೆ ಸರ್ಕಾರ ಇದೆ’ ಎಂದು ಹೇಳಿದ್ದೆನೇ ಹೊರತು ಆತನನ್ನು ರಕ್ಷಿಸುವ ಉದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಕ್ಕೆ ಹಿಂತಿರುಗಿ ಆತನಿಂದ ಯಾರೆಲ್ಲಾ ಹಣ ತೆಗೆದುಕೊಂಡಿದ್ದಾರೆ ಎಂಬುದರ ಕುರಿತು ಪಟ್ಟಿನೀಡಲಿ. ಆಟೋ ಚಾಲಕರು, ಕೂಲಿ ಕಾರ್ಮಿಕರು, ಬಡವರು ಐಎಂಎನಲ್ಲಿ ಹಣ ಹಾಕಿದ್ದಾರೆ. ಅವರಿಗೆಲ್ಲಾ ಹಿಂತಿರುಗಿಸುವ ಕೆಲಸ ಮಾಡಬೇಕಿದೆ. ಸರ್ಕಾರ ಬಡವರ ಪರ ಇದೆ. ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕೆಲವರ ಹೆಸರನ್ನು ಹೇಳಲಾಗಿದೆ. ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸಲಿದೆ. ಮನ್ಸೂರ್‌ನಿಂದ ಯಾರೆಲ್ಲಾ ಹಣ ತೆಗೆದುಕೊಂಡಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಲಿದೆ. 1,350 ಕೋಟಿ ರು. ಇದೆ ಎಂಬುದಾಗಿ ಹೇಳಿಕೊಂಡಿದ್ದಾನೆ. ಅದನ್ನು ಯಾರು ತಿಂದಿದ್ದಾರೆ ಎನ್ನುವುದು ಗೊತ್ತಾಗಬೇಕು ಎಂದರು.
ನನಗೆ ಬಂದ ಮಾಹಿತಿ ಅನ್ವಯ ಜನರಿಗೆ ಸುಮಾರು 2 ಸಾವಿರ ಕೋಟಿ ರು. ನೀಡಬೇಕಾಗಿದೆ. ಹೀಗಾಗಿ ಮೊದಲು ಆತನ ಜತೆ ಕೈಜೋಡಿಸಿದವರ ಪಟ್ಟಿನೀಡಲಿ. ಈ ತನಿಖೆಯಲ್ಲಿ ಮನ್ಸೂರ್ ಖಾನ್‌ಗೆ ಪೊಲೀಸರು ರಕ್ಷಣೆ ನೀಡಲಿದ್ದಾರೆ. ಜೀವ ಬೆದರಿಕೆಗೆ ಭಯ ಪಡಬೇಕಾದ ಅಗತ್ಯ ಇಲ್ಲ ಎಂದು ಹೇಳಿದ ಅವರು, ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಪ್ರಾಮಾಣಿಕತೆಯಿಂದ ತನಿಖೆ ನಡೆಯುತ್ತದೆ. ಒಂದು ವೇಳೆ ಸೂಕ್ತವಾಗಿ ತನಿಖೆ ನಡೆಯದಿದ್ದರೆ ಆಗ ನಾನೂ ಸಹ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ. ಮೊದಲು ಎಸ್‌ಐಟಿ ತನಿಖೆ ಮುಗಿಯಲಿ, ನಂತರ ನೋಡೋಣ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.