
ಶಿವಮೊಗ್ಗ(ಮಾ.19): ರಾಜ್ಯದ ಗಮನ ಸೆಳೆದಿದ್ದ ತೀರ್ಥಹಳ್ಳಿ ಬಾಲಕಿ ನಂದಿತ ಸಾವಿನ ಪ್ರಕರಣ ಮತ್ತೆ ಮರುಜೀವ ಪಡೆದುಕೊಂಡಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರಾಮೇಶ್ವರ ದೇವರ ಮುಂದೆ ಬಾಲಕಿ ತಂದೆಯ ಸಮ್ಮುಖದಲ್ಲಿಯೇ ತಪ್ಪು ಕಾಣಿಕೆ ಹಾಕಿ ಪ್ರಕರಣಕ್ಕೆ ಮರು ಜೀವ ನೀಡಿದ್ದಾರೆ . ಇನ್ನೇನೂ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವುದರಿಂದ ನಂದಿತಾ ಪ್ರಕರಣದ ಆಣೆ ಪ್ರಮಾಣ ಹಾಲಿ - ಮಾಜಿ ಶಾಸಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತೀರ್ಥಹಳ್ಳಿಯ ಹೈಸ್ಕೂಲ್ ವಿದ್ಯಾರ್ಥಿನಿ ನಂದಿತಾ ಸಾವು ಪ್ರಕರಣ ಮತ್ತೆ ಮರು ಜೀವ ಪಡೆದುಕೊಂಡಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಹಾಗೂ ಮಾಜಿ ಶಾಸಕ ಆರಗ ಜ್ಞಾನೇಂದ್ರ ನಡುವಿನ ಜಿದ್ದಾಜಿದ್ದಾಗಿ ವೇದಿಕೆಯಾಗಿದೆ.
2014ರ ನವೆಂಬರ್ 1 ರಂದು ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಾಳೇಬೈಲು ನಿವಾಸಿ ಕೃಷ್ಣ ಎಂಬುವವರ ಮಗಳು ನಂದಿತಾ ಎಂಬ ಹೈಸ್ಕೂಲ್ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಬಾಲಕಿಯನ್ನು ಅನಂದಗಿರಿ ಗುಡ್ಡಕ್ಕೆ ಕರೆದೊಯ್ದು ವಿಷಕಾರಿ ಪಾನೀಯ ಕುಡಿಸಿ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವ ಶಂಕೆ ಇತ್ತು. ಆದ್ರೆ ಸಿಐಡಿ ನಂದಿತಾಳದ್ದು ಕೊಲೆಯಲ್ಲ, ಆತ್ಮಹತ್ಯೆ ಎಂದು ವರದಿ ನೀಡಿತ್ತು. ಜೊತೆಗೆ ನಂದಿತಾ ಮನೆಗೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಪ್ರಕರಣ ಇಡೀ ತೀರ್ಥಹಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವಾರಣ ನಿರ್ಮಿಸಿತ್ತು.
ನಂದಿತಾ ಸಾವಿಗೆ ಕಾರಣರಾದ ಆರೋಪಿಗಳನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರಕ್ಷಿಸುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಆದ್ರೆ ಕಿಮ್ಮನೆ ರತ್ನಾಕರ್ ಬಾಲಕಿ ಸಾವಿಗೆ ನಾನು ಕಾರಣನಲ್ಲ, ಬಾಲಕಿ ಕುಟುಂಬಕ್ಕೆ ನಾನು ಸಾಕಷ್ಟು ಸಹಾಯ ಮಾಡಿದ್ದೇನೆ. ಆರೋಪಿಗಳನ್ನು ನಾನು ರಕ್ಷಿಸುತ್ತಿಲ್ಲ ಎಂದು ಸಾಕಷ್ಟು ಬಾರಿ ಆಣೆ ಪ್ರಮಾಣ ಮಾಡಿದ್ದರು. ಈಗ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೆ ರಾಮೇಶ್ವರ ದೇವಾಲಯದಲ್ಲಿ ತಪ್ಪು ಕಾಣಿಕೆ ನೀಡಿ ಮೃಗಾವಧೆ ಈಶ್ವರ ದೇವಸ್ಥಾನದಿಂದ ತೀರ್ಥಹಳ್ಳಿಗೆ ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಇದು ಮಾಜಿ ಶಾಸಕ ಆರಗ ಜ್ನಾನೇಂದ್ರರನ್ನು ಕೆರಳಿಸಿದೆ. ಬಾಲಕಿ ತಂದೆ ಕೃಷ್ಣನಿಗೆ ಸಹಾಯ ಮಾಡಿದ ಆರಗ ಜ್ಞಾನೇಂದ್ರ ಹಾಗೂ 600-700 ಜನರು ಈಗಲೂ ನ್ಯಾಯಾಲಯಕ್ಕೆ ತಿರುಗಾಡುತ್ತಿದ್ದಾರೆ. ಅಷ್ಟರಲ್ಲೇ ಕಿಮ್ಮನೆ ರತ್ನಾಕರ್ ಬಾಲಕಿಯ ತಂದೆ ಕೃಷ್ಣ ಪೂಜಾರಿಯೊಂದಿಗೆ ಪ್ರಾರ್ಥನೆ, ಪ್ರಮಾಣ ಮಾಡಿದ್ದು ಮಾಜಿ ಶಾಸಕ ಅರಗ ಜ್ಞಾನೇಂದ್ರರಿಗೆ ಕೋಪ ತರಿಸಿದೆ. ಇದರಿಂದಾಗಿ ಕಿಮ್ನನೆ ಪಾದಯಾತ್ರೆಗೆ ವಿರುದ್ಧವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ಹೊಸ್ತಿಲಲ್ಲಿ ಬಾಲಕಿ ನಂದಿತಾ ಸಾವಿನ ಪ್ರಕರಣ ಮತ್ತೊಮ್ಮೆ ಜೀವ ಪಡೆದು ಕೊಂಡಿದೆ. ಸಾವಿನಲ್ಲೂ ರಾಜಕೀಯ ನಡೆಸಿ ಕಾಂಗ್ರೆಸ್ - ಬಿಜೆಪಿ ಪಕ್ಷ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರೋದು ದುರಂತವೇ ಸರಿ.
ವರದಿ: ರಾಜೇಶ್ ಕಾಮತ್ , ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.