ಕರಾವಳಿಯಲ್ಲಿ 2 ದಿನ ಭಾರೀ ಮಳೆ : ಕಟ್ಟೆಚ್ಚರ ಘೋಷಣೆ

First Published Jun 8, 2018, 8:34 AM IST
Highlights

ಇತ್ತೀಚೆಗೆ ಸುರಿದ ಭರ್ಜರಿ ಮಳೆಯಿಂದ ತತ್ತರಿಸಿ ಸುಧಾರಿಸಿಕೊಳ್ಳುತ್ತಿರುವ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ.

ಬೆಂಗಳೂರು: ಇತ್ತೀಚೆಗೆ ಸುರಿದ ಭರ್ಜರಿ ಮಳೆಯಿಂದ ತತ್ತರಿಸಿ ಸುಧಾರಿಸಿಕೊಳ್ಳುತ್ತಿರುವ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ‘ರೆಡ್ ಅಲರ್ಟ್’ ಘೋಷಿಸಿದೆ.  ಕರಾವಳಿಯ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ವಿಪರೀತವಾದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುಂದಿನ ಎರಡು ದಿನ ಭಾರೀ ಮಳೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ  200 ಮಿ.ಮೀ. ಗೂ ಹೆಚ್ಚು ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 

ಇನ್ನು ಕರಾವಳಿ ಭಾಗದಲ್ಲಿ ಪಶ್ಚಿಮ ದಿಕ್ಕಿನಿಂದ ಪ್ರತಿ ಗಂಟೆಗೆ 35 ರಿಂದ 45 ಕಿ.ಮೀ.ವೇಗದಲ್ಲಿ ಗಾಳಿ ಬೀಸುತ್ತಿದ್ದು, ಕೆಲವು ವೇಳೆ ಇದು ಗಂಟೆಗೆ 50 ಕಿ.ಮೀ. ವೇಗ ತಲುಪಬಹುದು. ಹಾಗಾಗಿ ಮೀನುಗಾರರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ. ಮುಂದಿನ ಕೆಲ ದಿನಗಳ ಕಾಲ ರಾಜ್ಯಾದ್ಯಂತ ಮುಂಗಾರು ಮತ್ತಷ್ಟು ಬಿರುಸಾಗಲಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ  ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ, ದಕ್ಷಿಣದ ಕೆಲ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆ ಬೀಳಬಹುದು ಎಂದು ಮುನ್ಸೂಚನೆ ನೀಡಲಾಗಿದೆ.

ಕರಾವಳಿ-ಉತ್ತರದಲ್ಲಿ ಮಳೆ: ಗುರುವಾರ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಉತ್ತಮ  ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಜಿಲ್ಲೆಗಳಲ್ಲಿ ಮಳೆ ಕ್ಷೀಣಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ 100 ಮಿ.ಮೀ. ವರೆಗೂ ಮಳೆ ಬಿದ್ದಿದೆ. ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆ ವ್ಯಾಪಕ ಮಳೆಯಾಗಿದೆ. 

click me!