ಅಮೆರಿಕನ್ನರ ಮೇಲೆ ನಿಗೂಢ ದಾಳಿ : ವಿಚಿತ್ರ ಕಾಯಿಲೆ

First Published Jun 8, 2018, 8:14 AM IST
Highlights

ಚೀನಾದಲ್ಲಿನ ಅಮೆರಿಕ ರಾಯಭಾರಿ ಸಿಬ್ಬಂದಿ ಪೈಕಿ ಕೆಲವರು ಕಳೆದ ಕೆಲ ತಿಂಗಳಿನಿಂದ ನಿಗೂಢ ಕಾಯಿಲೆಗೆ ತುತ್ತಾಗತೊಡಗಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಅಮೆರಿಕ, ಅಸ್ವಸ್ಥಗೊಂಡಿರುವ ಸಿಬ್ಬಂದಿಯನ್ನು ಹೆಚ್ಚಿನ ತಪಾಸಣೆಗಾಗಿ ತವರಿಗೆ  ಕರೆಸಿಕೊಂಡಿದೆ. 

ಬೀಜಿಂಗ್/ವಾಷಿಂಗ್ಟನ್: ಚೀನಾದಲ್ಲಿನ ಅಮೆರಿಕ ರಾಯಭಾರಿ ಸಿಬ್ಬಂದಿ ಪೈಕಿ ಕೆಲವರು ಕಳೆದ ಕೆಲ ತಿಂಗಳಿನಿಂದ ನಿಗೂಢ ಕಾಯಿಲೆಗೆ ತುತ್ತಾಗತೊಡಗಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಅಮೆರಿಕ, ಅಸ್ವಸ್ಥಗೊಂಡಿರುವ ಸಿಬ್ಬಂದಿಯನ್ನು ಹೆಚ್ಚಿನ ತಪಾಸಣೆಗಾಗಿ ತವರಿಗೆ  ಕರೆಸಿಕೊಂಡಿದೆ.

ವಿಶೇಷವೆಂದರೆ ಕೆಲ ತಿಂಗಳ ಹಿಂದೆ ಕ್ಯೂಬಾದಲ್ಲಿನ ಅಮೆರಿಕ ರಾಯಭಾರ ಸಿಬ್ಬಂದಿ ಕೂಡಾ ಇದೇ ರೀತಿ ನಿಗೂಢ ಸಮಸ್ಯೆಗೆ ತುತ್ತಾಗಿದ್ದರು ಈ ವೇಳೆ ಅವರ ಮೇಲೆ ಅಲ್ಟ್ರಾಸೋನಿಕ್ (ಶಬ್ದದ ದಾಳಿ) ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿತ್ತು. ಇದೀಗ ಚೀನಾದಲ್ಲಿನ ಅಮೆರಿಕ ರಾಯಭಾರ ಸಿಬ್ಬಂದಿ ಕೂಡಾ ಇದೇ ರೀತಿಯ ಸಮಸ್ಯೆಗೆ ತುತ್ತಾಗಿರುವ ಹಿನ್ನೆಲೆಯಲ್ಲಿ ಕ್ಯೂಬಾದಂತೆಯೇ ಮತ್ತೊಂದು ಕಮ್ಯುನಿಸ್ಟ್ ರಾಷ್ಟ್ರ ವಾದ ಚೀನಾದಲ್ಲೂ ಇದೇ ರೀತಿಯ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.

ನಿಗೂಢ ಸಮಸ್ಯೆ: ಚೀನಾದ ಗುವಾಂಗ್ ಜು ರಾಜ್ಯದಲ್ಲಿರುವ ಅಮೆರಿಕದ ರಾಯ ಭಾರ ಕಚೇರಿ ಸಿಬ್ಬಂದಿ ಕಳೆದ ಕೆಲ ತಿಂಗಳಿ ನಿಂದ ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಸಿಬ್ಬಂದಿ ಅಸಹಜ ಶಬ್ದ ಆಲಿಕೆ ಸಮಸ್ಯೆ ಎದುರಿಸುತ್ತಿದ್ದರೆ, ಇನ್ನು ಕೆಲವರಲ್ಲಿ ಒತ್ತಡದ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಸಿಬ್ಬಂದಿ ಮೇಲೆ ಸೋನಿಕ್ ದಾಳಿ ನಡೆದಿರುವ ಸಂದೇಹ ಮೂಡಿದೆ. ಸೋನಿಕ್ ದಾಳಿಯಲ್ಲಿ ಅಲ್ಟ್ರಾಸೋನಿಕ್ ಅಥವಾ ಇನ್‌ಫ್ರಾಸೋನಿಕ್ ಎಂಬ ಎರಡು ರೀತಿಯ ದಾಳಿಗಳಿವೆ.

ಇನ್‌ಫ್ರಾಸೋನಿಕ್ ದಾಳಿಯಲ್ಲಿ ಸಂತ್ರಸ್ತರಿಗೆ ಹೊಟ್ಟೆಯ ಮೇಲೆ ಬಲವಾಗಿ ಹೊಡೆದಂತೆ ಮತ್ತು ವಾಕರಿಕೆ ಬರಿಸಿದಂತಾಗುತ್ತದೆ. ಇಂತಹ ಯಾವುದೇ ಸಮಸ್ಯೆಗಳು ರಾಯಭಾರ ಕಚೇರಿ ಸಿಬ್ಬಂದಿಗಳಲ್ಲಿ  ಕಾಣಿಸಿಲ್ಲ. ಅಲ್ಟ್ರಾಸೋನಿಕ್ ದಾಳಿಯಲ್ಲಿ ತಲೆನೋವು ಮತ್ತು ವಾಕರಿಕೆ ಕಾಣಿಸಿಕೊಳ್ಳುತ್ತದೆ. ಅಮೆರಿಕ ರಾಯಭಾರಿ ಕಚೇರಿ ಸಿಬ್ಬಂದಿಯಲ್ಲಿ ಇಂಥ ಸಮಸ್ಯೆಯ ಲಕ್ಷಣಗಳು ಗೋಚರಿಸಿವೆ. ಹೀಗಾಗಿ ಅವರ ವಿರುದ್ಧ  ಅಲ್ಟ್ರಾಸೋನಿಕ್ ದಾಳಿ ನಡೆದಿರುವ ಸಂದೇಹ ವ್ಯಕ್ತವಾಗಿದೆ. ಈ ನಡುವೆ ಘಟನೆ ಕುರಿತು ತನಿಖೆ ನಡೆಸಲಾಗಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಚೀನಾ ಹೇಳಿದೆ.

ಏನಿದು ದಾಳಿ..?
ಇದು ಶಬ್ದದ ಅಲೆಗಳನ್ನು ಭಾರೀ ಪ್ರಮಾಣದಲ್ಲಿ ಹೊರಡಿಸುವ ಮೂಲಕ ಗುರಿಯ ಮೇಲೆ ದಾಳಿ ನಡೆಸುವ ತಂತ್ರ. ಬಹಳ ದೂರದಿಂದಲೇ ಇಂಥ ಶಬ್ದದ ಅಲೆಗಳನ್ನು ಹೊರಡಿಸಿ ದಾಳಿ ನಡೆಸಬಹುದು. ಇಂಥ ದಾಳಿ ವೇಳೆ ಯಾವುದೇ ಸಂಗತಿ ಗೋಚರವಾಗುವು ದಿಲ್ಲ. ಆದರೆ ಅದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

click me!