ಬೆಂಗಳೂರು (ಜು.06): ಆನಂದ್ ಸಿಂಗ್ ರಾಜೀನಾಮೆ ಬಳಿಕ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದ ರಾಜೀನಾಮೆ ಪರ್ವ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಸ್ಫೋಟಗೊಂಡಿದೆ.
ವಿಜಯನಗರ MLA ಆನಂದ್ ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ಕಳೆದ ಸೋಮವಾರ (ಜು.01) ರಾಜೀನಾಮೆ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಬಹುಕಾಲದಿಂದ ಮುನಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದರು.
ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಮುಂದಿನ ನಡೆ ಕುತೂಹಲ ಕೆರಳಿಸಿರುವ ಬೆನ್ನಲ್ಲೇ, ಒಟ್ಟು 14 ಶಾಸಕರು ರಾಜೀನಾಮೆ ನೀಡಲು ಮುಂದಾಗಿರುವುದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದೆ.
ಹಾಗಾದರೆ ರಾತ್ರೋ ರಾತ್ರಿ ಏನಾಯ್ತು?
ಸುವರ್ಣನ್ಯೂಸ್.ಕಾಂಗೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಸಾಮೂಹಿಕ ರಾಜೀನಾಮೆಗೂ IMA ಬಹುಕೋಟಿ ವಂಚನೆ ಪ್ರಕರಣಕ್ಕೂ ಗಾಢವಾದ ನಂಟಿದೆ.
IMA ವಂಚನೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಪ್ರಭಾವಿ ಸಚಿವರೊಬ್ಬರ ಬಂಧನಕ್ಕೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಆದೇಶ ನೀಡಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ನಾನು ಅಮೆರಿಕಾದಿಂದ ವಾಪಾಸಾಗುವಾಗ ‘ಆ ಸಚಿವರು’ ಕಂಬಿ ಹಿಂದಿರಬೇಕು ಎಂಬ ಎಚ್ ಡಿಕೆ ಆದೇಶ, ಸಚಿವರನ್ನು ಕೆರಳಿಸಿದೆ.
ರಾತೋರಾತ್ರಿ ಸರಣಿ ಸಭೆಗಳನ್ನು ನಡೆಸಿದ ‘ಆ ಸಚಿವರು’ ಕೊನೆಗೆ ಬಿಜೆಪಿ ನಾಯಕರ ನಿವಾಸಕ್ಕೆ ತೆರಳಿ ಸುದೀರ್ಘ ಸಭೆ ನಡೆಸಿದ್ದಾರೆ. ತನ್ನ ಬಂಧನದ ಆದೇಶ ನೀಡಿರುವ ಸಿಎಂ ಅವರನ್ನು ‘ಮಾಜಿ ಸಿಎಂ’ ಮಾಡಿ ಬಿಡ್ಬೇಕು, ಅಮೆರಿಕಾದಿಂದ ವಾಪಾಸಾಗುವ ಮುನ್ನ ಹೇಗಾದರೂ ಸರ್ಕಾರ ಪತನ ಮಾಡಬೇಕು ಎಂದು ಶಪಥಗೈದಿದ್ದಾರೆ ಎಂದು ಸುವರ್ಣನ್ಯೂಸ್.ಕಾಂಗೆ ತಿಳಿದುಬಂದಿದೆ.
ತಾನು ಮುನ್ನೆಲೆಗೆ ಬಾರದೇ ಬಿಜೆಪಿ ಸರ್ಕಾರ ರಚಿಸಲು ಬೇಕಾಗಿರುವಷ್ಟು ಶಾಸಕರ ರಾಜೀನಾಮೆ ಕೊಡಿಸುತ್ತೇನೆ, ಅದಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ನೀಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.