ಬಿಎಸ್‌ವೈ ಕೋಪ ಸರ್ಕಾರದ ವಿರುದ್ಧವಲ್ಲ, ಎಚ್‌ಡಿಕೆ ಮೇಲೆ

By Web DeskFirst Published Sep 23, 2018, 9:32 AM IST
Highlights

ಯಾವುದೇ ಕ್ಷಣದಲ್ಲಿ ಆಪರೇಷನ್‌ ಕಮಲ ನಡೆಯಬಹುದು, ಸಮ್ಮಿಶ್ರ ಸರ್ಕಾರ ಪತನ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿರುವ ನಡುವೆಯೇ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಕುಮಾರಸ್ವಾಮಿ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಾಸನ :  ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೆಂಗಣ್ಣು ಬೀರಿರುವುದು ಮೈತ್ರಿ ಸರ್ಕಾರದ ಮೇಲಲ್ಲ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೇಲೆ ಮಾತ್ರ. ಈಗ ಅಧಿಕಾರದಲ್ಲಿರುವ ಸಮ್ಮಿಶ್ರ ಸರ್ಕಾರ ಉರುಳಿಸಲು 18 ಶಾಸಕರ ಬೆಂಬಲ ಬೇಕು. ಅಷ್ಟುಮಂದಿಯನ್ನು ಸದ್ಯದ ಪರಿಸ್ಥಿತಿಯಲ್ಲಿ ಸೆಳೆಯಲು ಸಾಧ್ಯವಿಲ್ಲ. ಸರ್ಕಾರ ಈಗಲೂ ಬೀಳಲ್ಲ, ನಾಳೆಯೂ ಬೀಳಲ್ಲ. ಬೀಳುವುದಿದ್ದರೆ ನಾಲ್ಕೂ ಮುಕ್ಕಾಲು ವರ್ಷದ ನಂತರ!

ಯಾವುದೇ ಕ್ಷಣದಲ್ಲಿ ಆಪರೇಷನ್‌ ಕಮಲ ನಡೆಯಬಹುದು, ಸಮ್ಮಿಶ್ರ ಸರ್ಕಾರ ಪತನ ಆಗಬಹುದು ಎಂಬ ಸುದ್ದಿ ಹರಿದಾಡುತ್ತಿರುವ ನಡುವೆಯೇ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಕುಮಾರಸ್ವಾಮಿ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದು ಹೀಗೆ.

ಹಾಸನದಲ್ಲಿ ಶನಿವಾರ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೂ ಮೊದಲು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಉರುಳಿಸುವ ಯಡಿಯೂರಪ್ಪ ಅವರ ಪ್ರಯತ್ನ ಈಡೇರುವುದಿಲ್ಲ, ಅವೆಲ್ಲ ವ್ಯರ್ಥ ಪ್ರಯತ್ನ ಆಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆ ವೇಳೆ ಮೂರೂ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಾ ಜಿದ್ದಾಜಿದ್ದಿ ಹೋರಾಟ ನಡೆಸಿದ್ದು ನಿಜ. ಆದರೆ, ಯಾವ ಪಕ್ಷಕ್ಕೂ ಬಹುಮತ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಆದರೆ ಮೂರು ದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ತಾವು ಕುರ್ಚಿಯಿಂದ ಕೆಳಗಿಳಿಯಲು ಜೆಡಿಎಸ್‌ ಕಾರಣ ಎಂದು ತೀವ್ರ ಆಕ್ರೋಶಭರಿತ ಮತ್ತು ತುಟಿ ಮೀರಿದ ಮಾತುಗಳಲ್ಲಿ ಆರೋಪಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಅವರು (ಯಡಿಯೂರಪ್ಪನವರು) ಮೈತ್ರಿ ಸರ್ಕಾರಕ್ಕಿಂತ ಹೆಚ್ಚಾಗಿ ಕುಮಾರಸ್ವಾಮಿ ಮೇಲೆಯೇ ಕೆಂಗಣ್ಣು ಬೀರಿದ್ದಾರೆ ಎಂದು ದೇವೇಗೌಡ ತಿಳಿಸಿದರು.

ಅವರು ಕುಮಾರಸ್ವಾಮಿ ತೇಜೋವಧೆ ಮಾಡುತ್ತಾ ಹೋಗಲಿ. ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಕ್‌ ಸ್ವಾತಂತ್ರ್ಯ ಸೇರಿ ಎಲ್ಲಾ ಬಗೆಯ ಸ್ವಾತಂತ್ರ್ಯ ಇದೆ. ಬೆಳಗೆದ್ದು ಸರ್ಕಾರ ಬೀಳುವ ಬಗ್ಗೆಯೇ ನಿರಂತರ ವ್ಯಾಖ್ಯಾನ ಮಾಡಲಾಗುತ್ತಿದೆ. ಹೀಗಾಗಿ ಜನ ಈ ವಿಷಯವನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿಗೆ ಇನ್ನೂ 18 ಶಾಸಕರು ಬೇಕು. ಆದರೆ, ಆಡಳಿತರೂಢ ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳ ಶಾಸಕರಲ್ಲಿ ಯಾವುದೇ ಅಸಮಾಧಾನ ಇಲ್ಲ. ಹೊಸ ಶಾಸಕರು ಸಹಜ ಉತ್ಸಾಹದಿಂದ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಲು ಮತ್ತು ಕೆಲವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಂಚ ಅಸಮಾಧಾನದಿಂದ ಮಾತನಾಡಿದ್ದಾರೆ. ಇದು ತಪ್ಪಲ್ಲ. ಕಾಂಗ್ರೆಸ್‌ ಮುಖಂಡರಾದ ವೇಣುಗೋಪಾಲ, ಸಿದ್ದರಾಮಯ್ಯ, ಪರಮೇಶ್ವರ್‌ ಪಕ್ಷದ ಹೈಕಮಾಂಡ್‌ ಜೊತೆ ಮಾತನಾಡಿ ಎಲ್ಲವನ್ನೂ ಸರಿಪಡಿಸಿದ್ದಾರೆ. ಇದನ್ನು ಅರಿಯದೆ ಸರ್ಕಾರ ಉರುಳಿಸಲು ಮುಹೂರ್ತ ಫಿಕ್ಸ್‌ ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ದಂಗೆ ನಾಯಕತ್ವ ವಹಿಸುತ್ತೇನೆ ಎಂದಿದ್ದಾರಾ?:  ಬಿಜೆಪಿ ಆಟ ಇದೇ ರೀತಿ ಮುಂದುವರಿದರೆ ಜನರೇ ದಂಗೆ ಏಳುತ್ತಾರೆ ಎಂಬ ಅರ್ಥದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆಯೇ ಹೊರತು ತಾನೇ ದಂಗೆಯ ನಾಯಕತ್ವ ವಹಿಸುತ್ತೇನೆ ಎಂದು ಹೇಳಿದ್ದಾರಾ? ಆದರೆ ಯಡಿಯೂರಪ್ಪನವರು ವಿಧಾನಸಭೆ ವೇದಿಕೆಯಲ್ಲಿ ಅಕ್ಷಮ್ಯ ಪದಗಳನ್ನು ಬಳಸಿ ನಮ್ಮ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಗೌಡರು, ನಿಮ್ಮಪ್ಪ-ಮಕ್ಕಳನ್ನು ತೆಗಿತೀನಿ’ ಎಂಬಿತ್ಯಾದಿ ಪದಗಳನ್ನು ಬಳಸಿ ಹೇಯ ಮತ್ತು ಹೀನಾಯವಾಗಿ ಏಕವಚನದಲ್ಲಿ ಯಡಿಯೂರಪ್ಪ ಟೀಕೆ ಮಾಡಿದ್ದಾರೆ. ವಿರೋಧಪಕ್ಷದಲ್ಲಿ ನಾನೂ ಸೇರಿ ಬಂಗಾರಪ್ಪ, ಜೆ.ಎಚ್‌.ಪಟೇಲ್‌, ವೀರೇಂದ್ರ ಪಾಟೀಲ್‌ ಮೊದಲಾದವರು ಕೆಲಸ ಮಾಡಿದ್ದೇವೆ. ಆದರೆ ವಿಧಾನಸಭೆ ಒಳಗೆ ಬೀದಿಯಲ್ಲೂ ಬಳಸದ ಪದಗಳನ್ನು ಬಳಸಿ ಟೀಕೆ ಮಾಡಿಲ್ಲ. ಈ ರೀತಿ ಯಾರೂ ತಾಳ್ಮೆಗೆಟ್ಟು ಮಾತನಾಡಿಲ್ಲ ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ತಿಂಗಳು ಸಂಪುಟ ವಿಸ್ತರಣೆ:  ಅಕ್ಟೋಬರ್‌ ಮೊದಲ ವಾರದಲ್ಲಿ ಸಂಪುಟ ಸಭೆ ವಿಸ್ತರಣೆ ಜೊತೆಗೆ ಎಲ್ಲಾ ನಿಗಮ, ಮಂಡಳಿಗಳು ಮತ್ತು ರಾಜಕೀಯ ಕಾರ್ಯದರ್ಶಿಗಳನ್ನು ನೇಮಿಸಲಾಗುವುದು. ಈ ಬಗ್ಗೆಯೂ ಮೈತ್ರಿ ಪಕ್ಷಗಳಲ್ಲಿ ಯಾವುದೇ ಗೊಂದಲಗಳು ಇಲ್ಲ ಎಂದು ತಿಳಿಸಿದರು.

ಚನ್ನಮ್ಮ ಹರಕೆ ಹೊತ್ತಿದ್ದರು

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮತ್ತು ತಮ್ಮ ಪುತ್ರನ (ಕುಮಾರಸ್ವಾಮಿ) ಆರೋಗ್ಯ ಸುಧಾರಿಸಿದರೆ ಶೃಂಗೇರಿಯ ತೋರುಗಲ್ಲು ಗಣೇಶನಿಗೆ ಪೂಜೆ ಸಲ್ಲಿಸಿ, ಮೃತ್ಯುಂಜಯ ಹೋಮ ನಡೆಸುವ ಹರಕೆಯನ್ನು ನಮ್ಮ ಮನೆಯವರು (ಚನ್ನಮ್ಮನವರು) ಹೊತ್ತಿದ್ದರು. ಹೀಗಾಗಿ ಶನಿವಾರ ಶೃಂಗೇರಿಗೆ ಹೋಗಿ ಪೂಜೆ ಸಲ್ಲಿಸಲಾಯಿತು. ಅಲ್ಲಿ ನಾನು ಈಡುಗಾಯಿ ಒಡೆದಿಲ್ಲ. ಕುಮಾರಸ್ವಾಮಿ, ರೇವಣ್ಣ ತಲಾ ಮೂರು ಈಡುಗಾಯಿ ಒಡೆದರು. ಒಂಬತ್ತು ಈಡುಗಾಯಿ ಒಡೆದರೂ ಇನ್ನೊಂದು ಒಡೆಯಲಿಲ್ಲ. ಇದು ಅಪಶಕುಲನ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ದೇವೇಗೌಡ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

ಮೈತ್ರಿ ಮುಂದುವರಿಯುವ ಆತಂಕ: ರಾಜರಾಜೇಶ್ವರಿ ನಗರ ವಿಧಾನಸಭೆ ಚುನಾವಣೆ ಮತ್ತು ಉತ್ತರ ಕರ್ನಾಟಕದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಆಗಿ ಬಿಜೆಪಿ ಅಭ್ಯರ್ಥಿ ಸೋಲಬೇಕಾಯಿತು. ಮೈತ್ರಿ ಹೀಗೇ ಮುಂದುವರಿದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಆಗಲಿದೆ, ಸೋತು ಸುಣ್ಣವಾಗುತ್ತೇವೆ ಎಂಬ ಭಯ, ಆತಂಕದಿಂದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಬಿಜೆಪಿಯಿಂದ ನಡೆಯುತ್ತಿದೆ. ಇದೊಂದು ಪ್ರಹಸನ ಮತ್ತು ಡ್ರಾಮಾ ಅಷ್ಟೇ ಎಂದು ಪ್ರಸ್ತುತ ರಾಜಕೀಯ ಸ್ಥಿತಿಗತಿ ಬಗ್ಗೆ ದೇವೇಗೌಡ ವಿಶ್ಲೇಷಣೆ ಮಾಡಿದರು.

ದಯಾಶಂಕರ ಮೈಲಿ

click me!