
ಹಾಸನ : ಸಮ್ಮಿಶ್ರ ಸರ್ಕಾರದ ಶಾಸಕರಿಗೆ ಬಿಜೆಪಿ ಗಾಳ ಹಾಕುತ್ತಿದೆ, ಈ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಆರೋಪಗಳ ನಡುವೆಯೇ ಇದೇ ಮೊದಲ ಬಾರಿಗೆ ಹಾಸನದಲ್ಲಿ ಶನಿವಾರ ರಾತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು. ಈ ಮೂಲಕ ಜೆಡಿಎಸ್‌ನ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ, ಬಿಜೆಪಿ ಆಮಿಷಗಳಿಗೆ ಬಲಿಯಾಗಲ್ಲ ಎನ್ನುವ ಸಂದೇಶವನ್ನು ರವಾನಿಸುವ ಪ್ರಯತ್ನ ನಡೆಸಲಾಯಿತು.
ನಗರದ ಹೊರವಲಯದ ಹೊಯ್ಸಳ ರೆಸಾರ್ಟ್‌ನಲ್ಲಿ ನಡೆದ ಈ ಸಭೆಯಲ್ಲಿ ಒಟ್ಟು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಹಾಗೂ ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅವರನ್ನು ಹೊರತುಪಡಿಸಿ ಉಳಿದೆಲ್ಲ ಜೆಡಿಎಸ್ ಶಾಸಕರು ಪಾಲ್ಗೊಂಡಿದ್ದರು. ಈ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಖಚಿತಪಡಿಸಿದ್ದಾರೆ.
ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ತಂದೆ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದು, ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ ಪುತ್ರನ ಬೀಗರ ಊಟದ ಸಿದ್ಧತೆ ಹಿನ್ನೆಲೆಯಲ್ಲಿ ಗೈರಾಗಿದ್ದಾರೆ.
ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದು ಯಾವುದೋ ಆತಂಕ, ಭಯದಿಂದ ಕರೆದಿರುವ ಸಭೆ ಅಲ್ಲ. ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಮತ್ತು ಸರ್ಕಾರ ಯಾವ ರೀತಿಯಲ್ಲಿ ಸಾಗಬೇಕು ಎಂಬ ಬಗ್ಗೆ ಚರ್ಚೆ ಮಾಡಲು ಕರೆಯಲಾಗಿದೆ ಅಷ್ಟೆಎಂದು ಸ್ಪಷ್ಟಪಡಿಸಿದರು.
ಎಂಟಿಬಿ ನನಗೆ ತಿಳಿಸಿಯೇ ಹೋಗಿದ್ದಾರೆ- ಸಿಎಂ
ಶಾಸಕ ಎಂ.ಟಿ.ಬಿ. ನಾಗರಾಜ್ ನನಗೆ ತಿಳಿಸಿಯೇ ಮುಂಬೈಗೆ ಹೋಗಿದ್ದಾರೆ. ಮಂಗಳವಾರ ಅವರು ವಾಪಸ್ ಬರುತ್ತಾರೆ. ಯಾವ ಕಾಂಗ್ರೆಸ್ ಶಾಸಕರೂ ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಅದೆಲ್ಲಾ ಮಾಧ್ಯಮಗಳ ಸೃಷ್ಟಿಎಂದು ಇದೇ ವೇಳೆ ಕುಮಾರಸ್ವಾಮಿ ಕಿಡಿಕಾರಿದರು.
ಗೃಹ ಸಚಿವರ ಗಮನಕ್ಕೆ ತರುತ್ತೇವೆ: ಯಾವ್ಯಾವ ಬಿಜೆಪಿ ಮುಖಂಡರು ನಮ್ಮ ಪಕ್ಷದ ಶಾಸಕರನ್ನು ಕರೆದು ಏನೇನು ಚರ್ಚೆ ಮಾಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ಯಡಿಯೂರಪ್ಪನವರು ಸಾಕ್ಷಿ ಕೇಳುತ್ತಾರೆ. ಸದ್ಯದಲ್ಲೇ ಸಾಕ್ಷಿ ಸಮೇತ ಉತ್ತರ ನೀಡುತ್ತೇವೆ. ಇದನ್ನು ಗೃಹ ಸಚಿವರ ಗಮನಕ್ಕೆ ತರಲಾಗುವುದು. ಶಾಸಕ ಸುರೇಶ್‌ಗೌಡರನ್ನು ಯಡಿಯೂರಪ್ಪ ಏನೇನು ಹೇಳುತ್ತಾರೆ ಕೇಳಿ ಎಂದು ನಾನೇ ಕಳುಹಿಸಿದ್ದೆ. ಅವರು ಮಾತನಾಡಿರೋದು ಎಲ್ಲ ಮೊಬೈಲ್‌ನಲ್ಲಿ ದಾಖಲಾಗಿದೆ ಎಂದು ಇದೇ ವೇಳೆ ಕುಮಾರಸ್ವಾಮಿ ಹೇಳಿದರು.
ಪಿಎಂಗೆ ಪತ್ರ: ಸರ್ಕಾರಕ್ಕೆ ಮತ್ತು ನನಗೆ ಯಾವುದೇ ತೊಂದರೆ ಇಲ್ಲ ಎಂದು ಪುನರುಚ್ಛರಿಸಿದ ಕುಮಾರಸ್ವಾಮಿ, ರಾಜ್ಯ ಬಿಜೆಪಿ ನಾಯಕರ ವರ್ತನೆ ಬಗ್ಗೆ ಪ್ರಧಾನಿಗೆ ಪತ್ರ ಬರೆಯುವೆ, ಯಡಿಯೂರಪ್ಪ ರಾಜ್ಯದಲ್ಲಿ ಬೆಂಕಿ ಹಚ್ಚಿಸುತ್ತೇವೆ ಎಂದು ಹೇಳಿದ್ದು ಪ್ರಚೋದನೆಯಲ್ಲವೇ? ಬಿಜೆಪಿಯವರು ಇನ್ನಷ್ಟುದೂರು ನೀಡಲಿ ಎಂದು ಕಿಡಿಕಾರಿದರು.
ನಾನು ನೀಡಿದ ‘ದಂಗೆ’ ಹೇಳಿಕೆಯನ್ನು ರಾಜದ್ರೋಹ ಅಂತಾರೆ. ಹಿಂದೆ ಯಡಿಯೂರಪ್ಪನವರು ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂದಿದ್ದು ಯಾವ ದ್ರೋಹ?ಸೋಮವಾರ ಏನೋ ಸಿಹಿ ಸುದ್ದಿ ಕೊಡ್ತಾರಂತಲ್ಲಾ ನೋಡೋಣ.-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.