
ಬೆಂಗಳೂರು (ಜು.15): ಮುಂದಿನ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿಯಲ್ಲಿ ಬ್ಯುಸಿಯಾಗಿರುವಾಗಲೇ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಬದಲಿಸಲು ತೀರ್ಮಾನಿಸಿದ್ದಾರೆ. ಪುತ್ರನ ರಾಜಕೀಯ ಭವಿಷ್ಯ ರೂಪಿಸಲು ಹೊರಟಿರುವ ಸಿಎಂ ಖುದ್ದು ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಲು ಮುಂದಾಗಿದ್ದಾರೆ.
ವರುಣಾ ಬಿಟ್ಟು ಚಾಮುಂಡೇಶ್ವರಿಗೆ ಹೊರಟಿದ್ದಾರೆ ಸಿಎಂ! ಎರಡು ಚುನಾವಣೆ ನಂತ್ರ ಚಾಮುಂಡೇಶ್ವರಿ ನೆನಪಾಗಿದ್ದೇಕೆ?
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈಗ ತಮ್ಮ ಹಳೆ ಕ್ಷೇತ್ರದ ಮೇಲೆ ಪ್ರೀತಿ ಹೆಚ್ಚಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ನಂತರ ಸೇಫ್ ಪ್ಲೇಸ್ ಅಂತ ವರುಣಾಗೆ ವಲಸೆ ಹೋಗಿದ್ದ ಸಿದ್ದರಾಮಯ್ಯ ಈಗ ಚಾಮುಂಡೇಶ್ವರಿಗೆ ವಾಪಸಾಗಲು ನಿರ್ಧರಿಸಿದ್ದಾರೆ. ಕಳೆದೆರಡು ದಿನಗಳಿಂದ ಮೈಸೂರು ಪ್ರವಾಸದಲ್ಲಿರುವ ಸಿಎಂ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗಿನ ಭಾವನಾತ್ಮಕ ಸಂಬಂಧವನ್ನು ವಿಶೇಷವಾಗಿ ಸ್ಮರಿಸಿದ್ದಾರೆ. ಈಗ ಹೀಗೆ ಚಾಮುಂಡೇಶ್ವರಿ ಕ್ಷೇತ್ರವನ್ನು ಹೊಗಳುತ್ತಿರುವ ಸಿಎಂ ಸಿದ್ದರಾಮಯ್ಯ 2008ರಲ್ಲಿ ಮಾತ್ರ ಇದೇ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧರಿರಲಿಲ್ಲ. ಸಿದ್ದರಾಮಯ್ಯ ಕ್ಷೇತ್ರ ಪುನರ್ ವಿಂಗಡಣೆ ನಂತರ ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳೋದಿಕ್ಕೂ ಬಲವಾದ ಕಾರಣವಿತ್ತು. ಅದೇ 2006ರ ಬೈಎಲೆಕ್ಷನ್ ರಿಸಲ್ಟ್!
2006ರಲ್ಲಿ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರಿದ್ದ ಸಿದ್ದರಾಮಯ್ಯ ಬೈಎಲೆಕ್ಷನ್ ಎದುರಿಸಿದ್ದರು. ಅದು ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಎದುರಾಗಿದ್ದ ಬಹುದೊಡ್ಡ ಅಗ್ನಿಪರೀಕ್ಷೆ. ಆ ಚುನಾವಣೆಯಲ್ಲಿ ಸೋತರೆ ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಫಿನಿಷ್ ಆಗುತ್ತೆ ಅಂತಲೇ ಚರ್ಚೆ ನಡೀತಿತ್ತು. ಸಿದ್ದರಾಮಯ್ಯರನ್ನು ಸೋಲಿಸಲೇಬೇಕೆಂದು ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡ ಹಾಗೂ ಆಗ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಪಣತೊಟ್ಟಿದ್ದರು. ಆಗ ಮಾಜಿ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ಓರ್ವ ಸಾಮಾನ್ಯ ಕಾರ್ಯಕರ್ತನಾಗಿದ್ದ ಶಿವಬಸಪ್ಪ ಅವರನ್ನು ಕಣಕ್ಕಿಳಿಸಿತ್ತು. ದೇವೇಗೌಡ- ಹೆಚ್ ಡಿ ಕೆ ಜೋಡಿ ಇಡೀ ಕ್ಷೇತ್ರದಲ್ಲಿ ಹಿಡಿತ ಸಾಧಿಸಿ ಚುನಾವಣೆ ಗೆದ್ದೇ ತೀರುವ ಹುಮ್ಮಸ್ಸಿನಲ್ಲಿ ಮುನ್ನುಗ್ಗಿದ್ದರು. ಆರಂಭದಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದ ಸಿದ್ದರಾಮಯ್ಯಗೆ ಪರಿಸ್ಥಿತಿ ಅರ್ಥವಾಗತೊಡಗಿದ ಮೇಲೆ ಕಾಂಗ್ರೆಸ್ ನ ಘಟಾನುಘಟಿ ನಾಯಕರೆಲ್ಲಾ ಕ್ಷೇತ್ರದಲ್ಲಿ ಬೀಡುಬಿಟ್ಟು ಪ್ರಚಾರ ಆರಂಭಿಸಿದ್ದರು. ಇದರ ಫಲವಾಗಿಯೇ ಸಿದ್ದರಾಮಯ್ಯ ಕೇವಲ 257 ಮತಗಳ ಅಂತರದ ಪ್ರಯಾಸದ ಗೆಲುವು ಸಾಧಿಸಿದ್ದರು. ಅದು ಸಿದ್ದರಾಮಯ್ಯ ಪಾಲಿಗೆ ರಾಜಕೀಯ ಮರುಹುಟ್ಟು ನೀಡಿತ್ತು. ಅಷ್ಟೇ ಅಲ್ಲ. 2008ರಲ್ಲಿ ಕ್ಷೇತ್ರ ಬದಲಿಸುವ ನಿರ್ಧಾರಕ್ಕೂ ಇದೇ ಬಲವಾದ ಕಾರಣವಾಗಿತ್ತು.
2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಾದಾಗ ಹೊಸದಾಗಿ ವರುಣಾ ಕ್ಷೇತ್ರ ಹುಟ್ಟಿಕೊಂಡಿತ್ತು. ಚಾಮುಂಡೇಶ್ವರಿ ಕ್ಷೇತ್ರದ ಕೆಲ ಭಾಗಗಳು ವರುಣಾ ಕ್ಷೇತ್ರಕ್ಕೂ ಸೇರಿಕೊಂಡಿತ್ತು. ವಿಶೇಷವಾಗಿ ವರುಣಾ ನಾಲೆಯ ನಿರ್ಮಾಣ ಪೂರ್ಣಗೊಳಿಸಿ, ನೀರು ಹರಿಸುವ ಕೆಲಸ ಸಿದ್ದರಾಮಯ್ಯ ಮಾಡಿದ್ದರು. ಹೀಗಾಗಿ ವರುಣಾ ಹೋಬಳಿಯಲ್ಲಿ ಸಿದ್ದರಾಮಯ್ಯ ಅವ್ರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿತ್ತು. ಇದನ್ನು ಅರಿತ ಸಿದ್ದರಾಮಯ್ಯ ಐದು ಬಾರಿ ಪ್ರತಿನಿಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ವರುಣಾ ಕ್ಷೇತ್ರಕ್ಕೆ ಸೇರುವ ನಿರ್ಧಾರಕ್ಕೆ ಬಂದಿದ್ದರು. ಸಿದ್ದರಾಮಯ್ಯ ಆಗ ತೆಗೆದುಕೊಂಡ ನಿರ್ಧಾರ ಅವರಿಗೆ ವರ್ಕೌಟ್ ಕೂಡ ಆಗಿದೆ. 2008 ಹಾಗೂ 2013ರಲ್ಲಿ ಸತತ ಎರಡು ಬಾರಿ ಸಿದ್ದರಾಮಯ್ಯ ಗೆಲುವಿನ ಅಲೆಯೇರಿ ಬಂದಿದ್ದಾರೆ. ಆದರೀಗ ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ಬಿಡುವ ಸೂಚನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.